ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡನೇ ಹಂತದಲ್ಲಿ “ಮುಂಚೂಣಿ ಕಾರ್ಯಕರ್ತರ (ಫ್ರಂಟ್ ಲೈನ್ ವರ್ಕರ್ಸ್) ಕೋವಿಡ್ ಲಸಿಕಾಕರಣ ಕಾರ್ಯಕ್ರಮ” ಹಮ್ಮಿಕೊಂಡಿದ್ದು, ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ಹಾಗೂ ಆಡಳಿತಗಾರರು ಗೌರವ್ ಗುಪ್ತಾ ರವರು ಇಂದು ಪಾಲಿಕೆ ಕೇಂದ್ರ ಕಛೇರಿ ಆವರಣದ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರುಗಳಾದ ರಂದೀಪ್, ರಾಜೇಂದ್ರ ಚೋಳನ್, ಜೆ.ಮಂಜುನಾಥ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಾದ್ ರವರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲನೇ ಹಂತದಲ್ಲಿ 1,83,000 ಆರೋಗ್ಯ ಕಾರ್ಯಕರ್ತರ ನೋಂದಣಿ ಮಾಡಿಕೊಂಡಿದ್ದು, ಇದುವರೆಗೆ 80,000 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯದವರಿಗೆ ಮತ್ತೊಂದು ಅವಕಾಶ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು, ಪಾಲಿಕೆಯ 33,000 ಸಿಬ್ಬಂದಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ 27,000 ಸಾವಿರ ಸೇರಿದಂತೆ 60,000 ಮಂದಿ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿಕೊಂಡಿದ್ದು, ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಇನ್ನು ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗೆ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವರ ಸರ್ವೇ ಕಾರ್ಯ ಮುಂದಿನ ವಾರದಿಂದ ಪ್ರಾರಂಭಿಸಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ಸೇರಿದಂತೆ ಕೋವಿನ್ ಪೋರ್ಟಲ್‌ನಲ್ಲಿ 33,000 ಮಂದಿ ನೋಂದಣಿ ಮಾಡಲಾಗಿದೆ. ಈ ಪೈಕಿ ಈಗಾಗಲೇ ನಿನ್ನೆ 1,000 ಮಂದಿ ಪೌರಕಾರ್ಮಿಕರು ಲಸಿಕೆ ಪಡೆದಿದ್ದಾರೆ.
IAS officer, BBMP commissioner N Manjunatha Prasad takes Covid vaccine on Tuesday. He appealed all frontline workers to take vaccination to make Bengaluru virus free city.#IAS #BBMP #Commissioner #ManjunathaPrasad #COVID19 #COVIDVaccination @IASassociation @BBMPCOMM @DHFWKA pic.twitter.com/bGgeOBlEsw
— Thebengalurulive/ಬೆಂಗಳೂರು ಲೈವ್ (@bengalurulive_) February 9, 2021
ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಸಾಕಷ್ಟು ಜನರಲ್ಲಿ ಅನುಮಾನಗಳಿದ್ದು, ಆ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಹಲವು ಕಡೆ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ತುಂಬಾ ಜನರಲ್ಲಿ ಲಸಿಕೆಯಿಂದ ಅಡ್ಡ ಪರಿಣಾಮ ಬೀರಲಿವೆ ಎಂಬ ಆತಂಕ ಇದೆ. ಲಸಿಕೆ ನೀಡುವ ವೇಳೆ ಏನು ಮಾಡುಬೇಕು/ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಲಸಿಕೆ ಪಡೆಯುವಂತೆ ಮಾಡಬೇಕು. ಯಾರೊಬ್ಬರು ಗಾಳಿ ಸುದ್ದಿಗಳಿಗೆ ಮಹತ್ವ ನೀಡದೆ, ಪಾಲಿಕೆಯ ಎಲ್ಲಾ ಸಿಬ್ಬಂದಿ ಲಸಿಕೆ ತೆಗೆದುಕೊಳ್ಳುವ ಮೂಲಕ ಕೋವಿಡ್ ಮುಕ್ತ ಮಾದರಿ ನಗರವನ್ನಾಗಿ ಮಾಡಬೇಕು.
ಈ ಹಿಂದೆ 6,000 ಇದ್ದ ಕೋವಿಡ್ ಪ್ರಕರಣಗಳು ನಿನ್ನೆಗೆ 73 ಕೋವಿಡ್ ಪ್ರಕರಣಗಳಿಗೆ ಇಳಿಕೆಯಾಗಿದೆ. ಎಲ್ಲಾ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಲ್ಲಿ ಅಪನಂಬಿಕೆ ಹಾಗೂ ಆತಂಕ ದೂರಮಾಡಿ ಕೋವಿಡ್ ಲಸಿಕೆ ಬಗ್ಗೆ ಅರಿವು ಮೂಡಿಸುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಬೇಕು ಹಾಗೂ ಎಲ್ಲರೂ ಲಸಿಕೆ ಪಡೆಯಲು ತಿಳಿಸಿದರು.