Home ಬೆಂಗಳೂರು ನಗರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮಗ್ರ ವರದಿ ಸಲ್ಲಿಸಲು ಫೆಬ್ರವರಿ 15 ಗಡುವು

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ಸಮಗ್ರ ವರದಿ ಸಲ್ಲಿಸಲು ಫೆಬ್ರವರಿ 15 ಗಡುವು

51
0

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ಇದೇ ಫೆಬ್ರವರಿ 15ಕ್ಕೆ ನಿಖರ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರು ಎನ್. ಮಂಜುನಾಥ್ ಪ್ರಸಾದ್ ರವರು ಎಲ್ಲಾ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡ (Unauthorized Religious Structures) ಗಳನ್ನು ಗುರುತಿಸುವ ಸಂಬಂಧ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

BBMP com at virtal meeting1

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2009ರ ಸೆಪ್ಟೆಂಬರ್ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದು ಅಥವಾ ಸ್ಥಳಾಂತರ ಮಾಡುವುದು ಅಥವಾ ಕ್ರಮಬದ್ದ (Regularise)ವಾಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತಕ್ರಮ ವಹಿಸಬೇಕು. ಈ ಸಂಬಂಧ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಹ ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಿ ನೀಡಿದರೆ ಸಮೀಕ್ಷೆ ಆಧಾರದ ಮೇಲೆ ಅವುಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇನ್ನು 29 ಸೆಪ್ಟೆಂಬರ್ 2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ಆದೇಶವಿದ್ದು, 2009ರ ನಂತರ ಎಲ್ಲೆಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂಬುದನ್ನು ಪಟ್ಟಿಮಾಡಿ ಕೂಡಲೆ ಸಂಬಂಧಪಟ್ಟವರಿಗೆ ಶೋಕಾಸ್ ನೋಟೀಸ್ ಜಾರಿಮಾಡಿ, ಎಷ್ಟು ಧಾರ್ಮಿಕ ಕೇಂದ್ರಗಳಿಗೆ ನೋಟೀಸ್ ಜಾರಿಮಾಡಲಾಗಿದೆ ಎಂಬ ಪಟ್ಟಿಯನ್ನು ನೀಡಬೇಕು. ನೋಟೀಸ್ ನೀಡಿದ ವಾರದಲ್ಲಿ ಸಮಜಾಯಿಷಿ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಕಂದಾಯ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ಸಂಬಂಧಪಟ್ಟ ಇಂಜಿನಿಯರ್‌ಗಳು ಪೊಲೀಸ್ ಭದ್ರತೆಯೊಂದಿಗೆ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

BBMP com at virtal meeting

ಈ ಹಿಂದೆ ಮಾಡಿರುವ ಸಮೀಕ್ಷೆಯಲ್ಲಿ ಸರ್ಕಾರಿ ಜಾಗದಲ್ಲಿ 1,588 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ವರದಿಯಲ್ಲಿ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ಪೈಕಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಅದನ್ನು ಒಪ್ಪದೆ ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಮಗ್ರವಾಗ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವ ಜಾಗ/ಸ್ಥಳದ ದಾಖಲೆ (ಜಮೀನಿನ ಕಾಗದ ಪತ್ರ) ಹಾಗೂ ಧಾರ್ಮಿಕ ಕಟ್ಟಡ ನಿರ್ಮಿಸಲು ಯಾವುದಾದರು ಇಲಾಖೆಯಿಂದ ಅನುಮತಿ ಪಡೆದಿದ್ದಾರೆಯೇ ಎಂಬ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆಯಾ/ಖಾಸಗಿ ಜಾಗದಲ್ಲಿ ನಿರ್ಮಿಸಲಾಗಿದೆಯಾ ಎಂಬುದನ್ನು ಗುರುತಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರುಗಳಾದ ಡಿ ರಂದೀಪ್, ಮನೋಜ್ ಜೈನ್, ಜೆ.ಮಂಜುನಾಥ್, ಬಸವರಾಜ್, ರಾಜೇಂದ್ರ ಚೋಳನ್, ತುಳಸಿ ಮದ್ದಿನೇನಿ, ರೆಡ್ಡಿ ಶಂಕರ್ ಬಾಬು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here