ಬೆಂಗಳೂರು:
ಥಣಿಸಂದ್ರ ಮುಖ್ಯರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯು 11.5 ಕಿ.ಮೀ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗರ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ, ವೀರಣ್ಣ ಪಾಳ್ಯ ಮೇಲುಸೇತುವೆ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳ ತಪಾಸಣೆ ನಡೆಸಿದ ಆಯುಕ್ತ, ಥಣಿಸಂದ್ರ ಮುಖ್ಯರಸ್ತೆಯು ಹೊರವರ್ತುಲ ರಸ್ತೆಯಿಂದ ಬಾಗಲೂರು ಮುಖ್ಯರಸ್ತೆ(ನಾಗವಾರ ಜಂಕ್ಷನ್ ನಿಂದ್ ಬಾಗಲೂರು ಕ್ರಾಸ್ ವರೆಗೆ)ಯವರೆಗೆ 65 ಕೋಟಿ ರೂ. ವೆಚ್ಚದಲ್ಲಿ ಒಟ್ಟು 9.5 ಕಿ.ಮೀ ಉದ್ದ ಎರಡೂ ಬದಿ ಸೇರಿ ಸುಮಾರು 19 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು(ರಾಷ್ಟ್ರೋತ್ಥಾನ ಮೇಲುಸೇತುವೆ 1 ಕಿ.ಮೀ ಹೊರತುಪಡಿಸಿ) 18 ಕಿ.ಮೀ ರಸ್ತೆಯಲ್ಲಿ ಎರಡೂ ಬದಿ ಸೇರಿ 60 ದಿನಗಳಲ್ಲಿ 11.5 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಬೆಸ್ಕಾಂ ಹಾಗೂ ಒ.ಎಫ್.ಸಿ ಕೇಬಲ್ ಗಾಗಿ ಡಕ್ಟ್ಸ್ ಅಳವಡಿಕೆ ಹಾಗೂ ಪಾದಚಾರಿ ಮಾರ್ಗಕ್ಕೆ ಕರ್ಬ್ಸ್ ಅಳವಡಿಸುವ ಕೆಲಸ 45 ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.
ಥಣಿಸಂದ್ರ ಮುಖ್ಯರಸ್ತೆಯು ಹೊರವರ್ತುಲ ರಸ್ತೆಯಿಂದ ಬಾಗಲೂರು ಮುಖ್ಯರಸ್ತೆಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಯಾಗಿದೆ. ತ್ವರಿತಗತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದ್ದು, ಎರಡೂ ಬದಿ ಬೆಸ್ಕಾಂ ಕೇಬಲ್ ಗಳಿಗಾಗಿ 200 mm ನ 4 ಡಕ್ಟ್ಸ್ ಹಾಗೂ ಒ.ಎಫ್.ಸಿ ಕೇಬಲ್ ಗಳಿಗಾಗಿ 100 mm ನ 2 ಡಕ್ಟ್ಸ್ ಅಳವಡಿಸಲಾಗುತ್ತಿದೆ. ಜಲಮಂಡಳಿ ವತಿಯಿಂದ ನೀರಿನ ಪೈಪ್ ಲೈನ್ ಅಳವಡಿಸಿದ್ದು, ಅದನ್ನು ಟೆಸ್ಟಿಂಗ್ ಮಾಡುವ ಸಲುವಾಗಿ ಕೆಲವೆಡೆ ಕಾಮಗಾರಿ ನಡೆಸಿಲ್ಲ. ಟೆಸ್ಟಿಂಗ್ ಆದ ಬಳಿಕ ಕೂಡಲೆ ಇನ್ನುಳಿದ ವೈಟ್ ಟಾಪಿಗ್ ಕಾಮಗಾರಿ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ವೈಟ್ ಟಾಪಿಂಗ್ ಕಮಗಾರಿ ನಡೆಯದ ಕಡೆ ತಾತ್ಕಾಲಿಕವಾಗಿ ಡಾಂಬರು ಹಾಕಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಳ್ಳಾರಿ ರಸ್ತೆ ಪ್ರಮುಖ ರಸ್ತೆಯಾಗಿದ್ದು, ಥಣಿಸಂದ್ರ ಮುಖ್ಯ ರಸ್ತೆ, ಹೆಣ್ಣೂರು ಮುಖ್ಯ ರಸ್ತೆ ಹಾಗೂ ಕೋಗಿಲು ರಸ್ತೆ ಪರ್ಯಾಯ ರಸ್ತೆಗಳಾಗಿವೆ. ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಈಗಾಗಲೇ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಹೆಣ್ಣೂರು ಮುಖ್ಯ ರಸ್ತೆ ಹಾಗೂ ಕೋಗಿಲು ರಸ್ತೆಯನ್ನು ಮುಂದಿನ ದಿನಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.
ಥಣಿಸಂದ್ರ ಮುಖ್ಯ ರಸ್ತೆ ಅಗ್ರಹಾರ ಬಡಾವಣೆ ಬಳಿ ಒಳಚರಂಡಿಯಿಂದ ಸೀವೆಜ್ ಸೈಡ್ ಡ್ರೈನ್ ಗಳಿಗೆ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೆ ಸಮಸ್ಯೆ ಬಗೆಹರಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಇದೇ ಮೊದಲ ಬಾರಿಗೆ, ರಸ್ತೆ ಕತ್ತರಿಸುವಿಕೆಯನ್ನು ತಡೆಗಟ್ಟುವ ಸಲುವಾಗಿ ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆ ನಡುವೆ 15 ಸ್ಥಳಗಳಲ್ಲಿ ವಿಶೇಷ ನಾಳ(ಚೇಂಬರ್)ಗಳನ್ನು ಅಳವಡಿಸಲಾಗಿದ್ದು, ಆಯುಕ್ತರು ಚೇಂಬರ್ ಪರಿಶೀಲನೆ ನಡೆಸಿದರು.
ವೀರಣ್ಣ ಪಾಳ್ಯ ಮೇಲುಸೇತುವೆ ಕಾಮಗಾರಿ ತಪಾಸಣೆ
ವೀರಣ್ಣ ಪಾಳ್ಯ(ಹೊರ ವರ್ತುಲ ರಸ್ತೆ) ಬಳಿ 600 ಮೀ ಉದ್ದದ 2 ಮೇಲುಸೇತುವೆ ಇದ್ದು, ಹೆಬ್ಬಾಳದಿಂದ ಕೆ.ಆರ್.ಪುರಂ ಕಡೆ ಹೋಗುವ ಮೇಲ್ಸೇತುವೆ ಭಾಗದಲ್ಲಿ ಬ್ರಿಡ್ಜ್ ಪೋರ್ಷನ್(ಮೇಲ್ಸೇತುವೆ ಮಧ್ಯಭಾಗ)ನಲ್ಲಿ ಡಾಂಬರು ಹಾಗೂ ಮೇಲ್ಸೇತುವೆ ಎರಡೂ ಬದಿಯ ಕೊನೆ ಭಾಗಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಸಂಚಾರಿ ಪೊಲೀಸ್ ವಿಭಾಗವು ಅನುಮತಿ ನೀಡಿದ ಬಳಿಕ ಜನವರಿ 10 ರಂದು ಕಾಮಗಾರಿ ಪ್ರಾರಂಭಿಸಿ ಜನವರಿ 22ಕ್ಕೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಈ ವೇಳೆ ಮೇಲುಸೇತುವೆ ಇಕ್ಕೆಲಗಳಲ್ಲಿ ಒ.ಎಫ್.ಸಿ ಕೇಬಲ್ ಗಳು ಅಳವಡಿಸಿರುವುದನ್ನು ಕಂಡ ಆಯುಕ್ತರು, ಯಾರು ಅನುಮತಿ ಪಡೆದಿದ್ದಾರೆ ಅವರಿಗೆ ನೆಲದಡಿ ಕೇಬಲ್ ಅಳವಡಿಸಿಕೊಳ್ಳಲು ಅನುಮತಿ ಕೊಡಿ, ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿರುವ ಕೇಬಲ್ ಗಳನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೋತ್ಥಾನ ಜಂಕ್ಷನ್ ಮೇಲುಸೇತುವೆ ತಪಾಸಣೆ
ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಸಿಗ್ನಲ್ ರಹಿತ ವಾಹನ ಸಂಚಾರ ಒದಗಿಸಲು 25 ಕೋಟಿ ರೂ. ವೆಚ್ಚದಲ್ಲಿ ಮೇಲುಸೇತುವೆ ಕಾಮಗಾರಿಯನ್ನು ನಿರ್ಮಿಸಲಾಗಿದ್ದು, ಈಗಾಗಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೇಲುಸೇತುವೆಯು ಒಟ್ಟು 459 ಮೀಟರ್ ಉದ್ದವಿದ್ದು, 4 ಪಥಗಳನ್ನು ನಿರ್ಮಿಸಲಾಗಿದೆ. ಮೇಲುಸೇತುವೆ ಭಾಗದಲ್ಲಿ ಡಾಂಬರೀಕರಣ, ಬೀದಿ ದೀಪ ಅಳವಡಿಸಲಾಗಿದ್ದು, ಸರ್ವೀಸ್ ರಸ್ತೆ ಹಾಗೂ ಲೈನ್ ಮಾರ್ಕಿಂಗ್ ಮಾಡುವುದು ಮಾತ್ರ ಬಾವಿಯಿದೆ. ಸಂಪೂರ್ಣ ಕಾಮಗಾರಿ ಪೂರ್ಣಗೊಂಡ ನಂತರ ಶೀಘ್ರ ಮೇಲುಸೇತುವೆ ಉದ್ಘಾಟಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಜಕ್ಕೂರು ಕಡೆಯಿಂದ ಕೆ.ನಾರಾಯಣಪುರ/ಹೆಣ್ಣೂರು ಕಡೆಗೆ ಹೋಗುವ ರಸ್ತೆ ತೀರಾ ಆಳಾಗಿದ್ದು, ಅದನ್ನು ಪರಿಶೀಲನೆ ನಡೆಸಿದ ಆಯುಕ್ತರು, ಕೂಡಲೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರು(ಆಡಳಿತ ಹಾಗೂ ಯಲಹಂಕ ವಲಯ) ಜೆ.ಮಂಜುನಾಥ್, ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ರಮೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಅಧೀಕ್ಷಕ ಇಂಜಿನಿಯರ್ ಗಳಾದ ಲೋಕೇಶ್, ಚಂದ್ರಶೇಖರ್, ಕೆಂಪೇಗೌಡ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.