Home ಬೆಂಗಳೂರು ನಗರ ಕಂಬಗಳ, ಮರಗಳ ಮೇಲೆ ಅಳವಡಿಸಿರುವ ಅನಧಿಕೃತ ಟಿ.ವಿ ಕೇಬಲ್, ಇಂಟರ್‌ನೆಟ್ ಕೇಬಲ್ ತೆರವುಗೊಳಿಸಲು ಬಿಬಿಎಂಪಿ ಆಯುಕ್ತ...

ಕಂಬಗಳ, ಮರಗಳ ಮೇಲೆ ಅಳವಡಿಸಿರುವ ಅನಧಿಕೃತ ಟಿ.ವಿ ಕೇಬಲ್, ಇಂಟರ್‌ನೆಟ್ ಕೇಬಲ್ ತೆರವುಗೊಳಿಸಲು ಬಿಬಿಎಂಪಿ ಆಯುಕ್ತ ಆದೇಶ

189
0

ಹೈ ಟೆನ್ಷನ್ ಲೈನ್ ಕೆಳಗಡೆ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸುವ ಸೂಚನೆ

ಬೆಂಗಳೂರು:

ಬೆಂಗಳೂರು ನಗರದಾದ್ಯಂತ ಕಂಬಗಳ, ಮರಗಳ, ಕಟ್ಟಡಗಳ ಮೇಲ್ಬಾಗ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಟಿ.ವಿ ಕೇಬಲ್, ಇಂಟರ್‌ನೆಟ್ (ಓ.ಎಫ್.ಸಿ) ಕೇಬಲ್‌ಗಳನ್ನು ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಗುರುತಿಸಿ, ಒಂದು ದಿನವನ್ನು ನಿಗದಿಪಡಿಸಿ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮವಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಎಲ್ಲಾ ವಲಯ ಮುಖ್ಯ ಇಂಜಿನಿಯರ್‌ಗಳಿಗೆ ಆದೇಶ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಬಗಳ, ಮರಗಳ ಹಾಗೂ ಕಟ್ಟಡಗಳ ಮೇಲ್ಬಾಗದಲ್ಲಿ ಹಾದು ಹೋಗಿರುವ ಅನಧಿಕೃತ ಟಿ.ವಿ ಕೇಬಲ್, ಇಂಟರ್‌ನೆಟ್ ಕೇಬಲ್ ಹಾಗೂ ಹೈ ಟೆನ್ಷನ್ ಲೈನ್ ಕೆಳಗಡೆ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಇಂದು ಆಯುಕ್ತರವರ ಅಧ್ಯಕ್ಷೆತೆಯಲ್ಲಿ ಸಭೆ ನಡೆಯಿತು.

BBMP Commissioner orders removal of unauthorized TV cable internet cable installed on poles and trees

ನಗರದಲ್ಲಿ ಕೇಬಲ್ ಅಳವಡಿಸಲು ಅನುಮತಿ ಪಡೆದಿದ್ದರೆ ಅನುಮತಿ ಪಡೆದಿರುವ ಪತ್ರ ಪರಿಶೀಲಿಸಿ ನಿಯಮಾನುಸಾರ ಕೇಬಲ್‌ಗಳನ್ನು ಅಳವಡಿಸಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಬೇಕು. ಕೇಬಲ್‌ಗಳನ್ನು ಅಳವಡಿಸಲು ಪಾಲಿಕೆಯಿಂದ ಅನುಮತಿ ಪಡೆಯದಿದ್ದರೆ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.

ಪಾದಚಾರಿ ಮಾರ್ಗಗಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಕೇಬಲ್‌ಗಳನ್ನು ಅಳವಡಿಸಿರುತ್ತಾರೆ. ಇದರಿಂದ ಪಾದಚಾರಿಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪಾದಚಾರಿ ಮಾರ್ಗಗಳಲ್ಲಿ ಕೇಬಲ್‌ಗಳಿದ್ದರೆ ಕೂಡಲೆ ತೆರವುಗೊಳಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಹೈ ಟೆನ್ಷನ್ ಲೈನ್ ಕೆಳಗೆ ಅನಧಿಕೃತವಾಗಿ ಕಟ್ಟಡ/ಶೆಡ್‌ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಈ ಸಂಬಂಧ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಬೆಸ್ಕಾಂ ನಿಂದ ನೋಟೀಸ್ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ 15 ದಿನಗಳ ಒಳಗಾಗಿ ಸ್ವತಃ ತೆರವಾಗಲು ಸೂಚನೆ ನೀಡಬೆಕು. ತೆರವಾಗದಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡವನ್ನು ತೆರವುಗೊಳಿಸಿ ಅದರ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು ಮಂಜುಳಾ, ಹೆಚ್ಚುವರಿ ಪೊಲೀಸ್ ಆಯುಕ್ತರು ಮುರುಗನ್, ಬಿಬಿಎಂಪಿ ಕಾನೂನುಕೋಶ ವಿಭಾಗದ ಮುಖ್ಯಸ್ಥ ಕೆ.ಡಿ. ದೇಶಪಾಂಡೆ, ಒ.ಎಫ್.ಸಿ ಮುಖ್ಯ ಇಂಜಿನಿಯರ್ ನರಸರಾಮರಾವ್, ಎಲ್ಲಾ ವಲಯ ಮುಖ್ಯ ಇಂಜಿನಿಯರ್‌ಗಳು, ಕೆ.ಪಿ.ಟಿ.ಸಿ.ಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here