ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಇಂದು ಕಬ್ಬನ್ ಪಾರ್ಕ್(ಹಡ್ಸನ್ ವೃತ್ತ) ದಿಂದ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನ ” ಫಿಟ್ ಇಂಡಿಯಾ ಸೈಕ್ಲಥಾನ್”ಗೆ ಆಡಳಿತಗಾರರು ಹಾಗೂ ಆಯುಕ್ತರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಹಗಲಿರುಳು ಶ್ರಮಿಸಿದವರಿಗೆ ಗೌರವ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ಆಡಳಿತಗಾರ ಗೌರವ್ ಗುಪ್ತಾ ತಿಳಿಸಿದರು.
ಆಯುಕ್ತ ಎನ್ ಮಂಜುನಾಥ ಪ್ರಸಾದ್ ರವರು ಮಾತನಾಡಿ , ಪ್ರಧಾನಮಂತ್ರಿಗಳ ಕನಸಾಗಿರುವ ಪಿಟ್ ಇಂಡಿಯಾನ ಅಭಿಯಾನ, ಪ್ರತಿಯೊಬ್ಬ ನಾಗರಿಕರೂ ಆರೋಗ್ಯವಾಗಿ, ದೈಹಿಕವಾಗಿ ಸದೃಢವಾಗಿರಬೇಕಾದರೆ ಪ್ರತಿನಿತ್ಯ ದೈಹಿಕ ಶಿಕ್ಷಣ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಫಿಟ್ ಆಗಿರುವ ಮೂಲಕ ಆರೋಗ್ಯಕರವಾಗಿರಬೇಕು ಎಂದರು.
ಅಲ್ಲದೆ ನಗರದಲ್ಲಿ ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸಿದ ಸಾಕಷ್ಟು ಕೋವಿಡ್ ವಾರಿಯರ್ಸ್ ಗಳು ನಗರದಲ್ಲಿದ್ದಾರೆ. ಅವರಲ್ಲಿ ಕೆಲವರನ್ನು ಗುರುತಿಸಿ ಇಂದು ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದರು.
ಪಿಟ್ ಇಂಡಿಯಾ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯು ಕೋವಿಡ್-19 ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುವ ವೈದ್ಯರು, ಸಂಚಾರಿ ವಿಭಾಗದ ಪೊಲೀಸರು ಹಾಗೂ ಮಾರ್ಷಲ್ ಗಳನ್ನು ಗುರುತಿಸಿ 2,000 ರೂ. ಪ್ರೋತ್ಸಾಹ ಗೌರವ ಮೊತ್ತ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ವೇಳೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಸಂಚಾರ ವಿಭಾಗದ ಡಿಸಿಪಿ ನಾರಾಯಣ್ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.