Home ಬೆಂಗಳೂರು ನಗರ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ: ಬಿಡಿಎದಿಂದ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ: ಬಿಡಿಎದಿಂದ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ

7
0
BDA recovers Assets worth Rs 300 crore in Bengaluru
bengaluru

ಬೆಂಗಳೂರು:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿದ್ದ ಅತಿಕ್ರಮಣಕಾರರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಶನಿವಾರ ನಗರದ ವಿವಿಧೆಡೆ ಮೂರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮರುವಶಪಡಿಸಿಕೊಂಡಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಕುಮಾರನಾಯಕ್ ಅವರ ಆದೇಶವನ್ನು ಪಡೆದುಕೊಂಡ ಪ್ರಾಧಿಕಾರದ ವಿಶೇಷ ಕಾರ್ಯನಿರತ ಪಡೆ ಮತ್ತು ಜಾಗೃತದಳದ ಪೊಲೀಸ್ ವರಿಷ್ಠಾಧಿಕಾರಿ ಕೆ.ನಂಜುಂಡೇಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ 5 ಜೆಸಿಬಿಗಳು, 50 ಪೊಲೀಸ್ ಸಿಬ್ಬಂದಿ ಹಾಗೂ 50 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಸದರಿ ಜಾಗಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಪ್ರಕರಣ 1: ಬಿಟಿಎಂ ಬಡಾವಣೆಯ ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/3 ರಲ್ಲಿನ 01 ಎಕರೆ 17 ಗುಂಟೆ, 35/1 ರಲ್ಲಿನ 01 ಎಕರೆ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸದರಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆಯುಕ್ತರಿಂದ ಆದೇಶ ಪಡೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಯಪಾಲಕ ಅಭಿಯಂತರ ಸುರೇಶ್ ನೇತೃತ್ವದ ತಂಡ ಶೆಡ್ ಗಳನ್ನು ತೆರವುಗೊಳಿಸಿ ಜಾಗವನ್ನು ಪ್ರಾಧಿಕಾರದ ವಶಕ್ಕೆ ಪಡೆದುಕೊಂಡು, ಬಿಡಿಎ ಸ್ವತ್ತು ಎಂದು ನಾಮಫಲಕವನ್ನು ಹಾಕಲಾಯಿತು.ಒಟ್ಟು 2 ಎಕರೆ 17 ಗುಂಟೆ ಜಾಗದ ಮೌಲ್ಯ 200 ಕೋಟಿ ರೂಪಾಯಿಗೂ ಅಧಿಕ.

bengaluru
BDA recovers Assets worth Rs 300 crore in Bengaluru

ಪ್ರಕರಣ 2: ಜೆ.ಪಿ.ನಗರ 2ನೇ ಹಂತ ಸಾರಕ್ಕಿ ಅಗ್ರಹಾರ ಗ್ರಾಮದ ಸರ್ವೆ ನಂ.21/8 ರಲ್ಲಿನ 01 ಎಕರೆ 11 ಗುಂಟೆ ಪ್ರಾಧಿಕಾರಕ್ಕೆ ಸೇರಿದ ಸ್ವತ್ತಿನಲ್ಲಿ ಭೂಕಬಳಿಕೆದಾರರು ಅನಧಿಕೃತ ಶೆಡ್/ನಿರ್ಮಾಣಗಳನ್ನು ನಿರ್ಮಿಸಿದ್ದರು. ಈ ಶೆಡ್ ಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ, ತೆರವುಗೊಳಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತಿನಲ್ಲಿ ಶೆಡ್ ಗಳನ್ನು ತೆರವುಗೊಳಿಸಿ ಸದರಿ ಜಾಗವನ್ನು ಬಿಡಿಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.

ಈ ಜಾಗದ ಮೌಲ್ಯ 100 ಕೋಟಿ ರೂಪಾಯಿಗೂ ಅಧಿಕ.

ಪ್ರಕರಣ 3: ಅರ್ಕಾವತಿ ಬಡಾವಣೆ 6ನೇ ಬ್ಲಾಕ್ ನ ಥಣಿ ಸಂದ್ರ ಗ್ರಾಮದ ಸರ್ವೆ ನಂ.94/6 ರಲ್ಲಿನ 20 ಗುಂಟೆ ಪ್ರಾಧಿಕಾರದ ಸ್ವತ್ತನ್ನು ಕಬಳಿಸಿದ್ದ ಭೂಕಬಳಿಕೆದಾರರು ಅಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕೂ ಮುನ್ನ ಸದರಿ ಜಾಗದಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿದ್ದರು. ಈ ಶೆಡ್ ಗಳನ್ನು ತೆರವುಗೊಳಿಸಿದ ಬಿಡಿಎ ಅಧಿಕಾರಿಗಳ ತಂಡ ಸದರಿ ಜಾಗವನ್ನು ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡಿದೆ.

ಈ ಜಾಗದ ಮೌಲ್ಯ 6 ಕೋಟಿ ರೂಪಾಯಿ.

ಈ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಮಲ್ಲೇಶ್, ಇನ್ಸ್ ಪೆಕ್ಟರ್ ಗಳಾದ ಲಕ್ಷ್ಮಯ್ಯ, ಮುತ್ತುರಾಜ್ ಮತ್ತು 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

BDA recovers Assets worth Rs 300 crore in Bengaluru

ಸಾರ್ವಜನಿಕರಿಂದ ಬರುತ್ತಿವೆ ದೂರು: ಎಸ್.ಆರ್. ವಿಶ್ವನಾಥ್

ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಅಪಾರ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಸಂಸ್ಥೆಗೆ ಆದಾಯ ಬರುವಂತೆ ಮಾಡಿದ್ದಾರೆ. ಬಿಡಿಎ ಆಸ್ತಿ ಒತ್ತುವರಿ ಬಗ್ಗೆ ಮಾಹಿತಿ ನೀಡುವಂತೆ ಈ ಹಿಂದೆ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಅದರಂತೆ ಸಾರ್ವಜನಿಕರೇ ನೀಡಿದ ಮಾಹಿತಿಯನ್ನು ಆಧರಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಕೂಡಲೇ ಈ ಜಾಗವನ್ನು ನಿವೇಶನಗಳನ್ನಾಗಿ ರೂಪಿಸಿ ಹರಾಜಿನ ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

bengaluru

LEAVE A REPLY

Please enter your comment!
Please enter your name here