Home ಬೆಂಗಳೂರು ನಗರ ಆಗಸ್ಟ್ 5 ರ ನಂತರ ಒತ್ತುವರಿ ತೆರವಿಗೆ ಚಾಲನೆ: ಎಸ್.ಆರ್.ವಿಶ್ವನಾಥ್

ಆಗಸ್ಟ್ 5 ರ ನಂತರ ಒತ್ತುವರಿ ತೆರವಿಗೆ ಚಾಲನೆ: ಎಸ್.ಆರ್.ವಿಶ್ವನಾಥ್

30
0

ಬೆಂಗಳೂರು:

ಮುಂದಿನ 5 ನೇ ತಾರೀಖಿನ ನಂತರ ಬಿಡಿಎಗೆ ಸೇರಿದ ಜಾಗಗಳನ್ನು ಮರು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭೂ ಆಡಿಟಿಂಗ್ ಪ್ರಗತಿಯಲ್ಲಿದ್ದು, ಬಿಡಿಎಗೆ ಸೇರಿದ ಆಸ್ತಿಯನ್ನು ಗುರುತಿಸಲಾಗುತ್ತಿದೆ. ಇದುವರೆಗೆ 11 ಸಾವಿರ ಎಕರೆಯಷ್ಟು ಪ್ರದೇಶ ಬಿಡಿಎಗೆ ಸೇರಿದ್ದೆಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ ಹಲವಾರು ಪ್ರಕರಣಗಳು ಭೂಸ್ವಾಧೀನ ಪ್ರಕ್ರಿಯೆಯ ವಿವಿಧ ಹಂತದಲ್ಲಿದ್ದರೆ, ಇನ್ನೂ ಕೆಲವು ಪ್ರಕರಣಗಳ ವ್ಯಾಜ್ಯವು ವಿವಿಧ ನ್ಯಾಯಾಲಯಗಳಲ್ಲಿದೆ ಎಂದು ಅವರು ಹೇಳಿದರು.

ಕಳೆದ ಹಲವಾರು ತಿಂಗಳಿಂದ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯ ಪೈಕಿ 400 ರಿಂದ 500 ಎಕರೆಯಷ್ಟು ಪ್ರದೇಶಗಳನ್ನು ವಿವಿಧ ಬಡಾವಣೆಗಳಲ್ಲಿ ಗುರುತಿಸಿದ್ದೇವೆ. ಈ ಭೂಮಿಯ ಬಗ್ಗೆ ನ್ಯಾಯಾಲಯಗಳು ಬಿಡಿಎ ಪರ ತೀರ್ಪು ನೀಡಿದ್ದು, ತೆರವುಗೊಳಿಸಲು ಹಸಿರು ನಿಶಾನೆ ನೀಡಿವೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನು ಜುಲೈ 5 ರವರೆಗೆ ನೆಲಸಮ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಮತ್ತೆ ಈ ಅವಧಿಯನ್ನು ಆಗಸ್ಟ್ 5 ರವರೆಗೆ ವಿಸ್ತರಣೆ ಮಾಡಿದ್ದು, ಈ ಗಡುವಿನ ಬಗ್ಗೆ ನ್ಯಾಯಾಲಯ ಮುಂದಿನ ಆದೇಶ ನೀಡಿದ ನಂತರ ನೆಲಸಮ ಪ್ರಕ್ರಿಯೆಯನ್ನು ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಡಿಎ ಭೂಸ್ವಾಧೀನ ಮಾಡಿಕೊಂಡಿರುವ ಜಾಗದಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಈ ಮನೆಗಳನ್ನು ನೆಲಸಮ ಮಾಡುವುದು ಕಷ್ಟಸಾಧ್ಯವಾದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ 38ಡಿ ಅಡಿಯಲ್ಲಿ ಈ ಮನೆಗಳನ್ನು ಮಾರ್ಗದರ್ಶಿ ದರದಲ್ಲಿ ಸ್ವಲ್ಪ ಭಾಗವನ್ನು ಪಾವತಿಸಿಕೊಂಡು ಮನೆ ಕಟ್ಟಿಕೊಂಡಿರುವವರಿಗೆ ಆ ಜಾಗವನ್ನು ನೋಂದಣಿ ಮಾಡಿಕೊಡಲಾಗುತ್ತದೆ. ಸಾರ್ವಜನಿಕರಿಗೆ ಹೊರೆ ಆಗುತ್ತದೆ ಎಂಬ ಉದ್ದೇಶದಿಂದ ಶುಲ್ಕವನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಸಕ್ರಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ವಿಶ್ವನಾಥ್ ತಿಳಿಸಿದರು.

ಲ್ಯಾಂಡ್ ಆಡಿಟಿಂಗ್ ನಲ್ಲಿ ಗುರುತಿಸಲಾಗಿರುವ ಜಾಗದ ಬಗ್ಗೆ 4.1, 5.1 ಮತ್ತು 6.1 ಅಧಿಸೂಚನೆಗಳ ವಿವಿಧ ಹಂತದಲ್ಲಿವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭೂಮಾಲೀಕರಿಗೆ ಒಂದು ಬಾರಿಯ ಪರಿಹಾರದ ರೂಪದ ಯೋಜನೆಯಡಿ ಪರಿಹಾರ ನೀಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here