ಬೆಳಗಾವಿ:
ಸರ್ಕಾರದ ‘ಬೆಳಕು’ ಕಾರ್ಯಕ್ರಮದ ಮೂಲಕ 144000 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಅವರು ಇಂಧನ ಇಲಾಖೆ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಆಯೋಜಿಸಿರುವ ಬೆಳಗಾವಿ ಜಿಲ್ಲೆಯ ದಾಸ್ತಿಕೊಪ್ಪ ಗ್ರಾಮದಲ್ಲಿ ” ರಾಜ್ಯ ಮಟ್ಟದ ಬೆಳಕು ಯೋಜನೆ “ಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಬಡವರ ಮನೆಗೆ ವಿದ್ಯುತ್ , ರೈತರಿಗೆ ಪಂಪ್ ಸೆಟ್ ವಿದ್ಯುತ್ ನೀಡಿದೆ.ಬಡವರ ಕೆಲಸವನ್ನು ಅಂತ: ಕರಣದಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರಿಗೆ, ಕಾರ್ಖಾನೆಗಳು, ಗ್ರಾಮೀಣ ಬದುಕಿಗೂ ಈಗ ವಿದ್ಯುಚ್ಛಕ್ತಿ ಅನಿವಾರ್ಯವಾಗಿದೆ. ಸಿಂಗಲ್ ಫೇಸ್ ವಿದ್ಯುತ್ ನ್ನು 24*7 ನೀಡಿ, 3 ಫೇಸ್ ವಿದ್ಯುತ್ ನ್ನು ನಿರಂತರವಾಗಿ ಎಲ್ಲ ಜಿಲ್ಲೆಗಳಲ್ಲಿ 7 ತಾಸು ಕೊಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. 24 ಗಂಟೆಯೂ ಟಿಸಿಯನ್ನು ಕೊಡುವ ವ್ಯವಸ್ಥೆ ಈಗ ಆಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನ : ಭ್ರಷ್ಠಾಚಾರವಿಲ್ಲದೇ ನಿಗದಿತ ಸಮಯದಲ್ಲಿ ಬಡವರ ಪರ ಕೆಲಸ ಮಾಡುವ ಮೂಲಕ ಭ್ರಷ್ಠಾಚಾರ ತೊಡೆಯುವುದು ಸರ್ಕಾರದ ಸಂಕಲ್ಪ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನಕ್ಕಾಗಿ ಕಂಪನಿಯ 1900 ಕೋಟಿ ಸಾಲ ಕೊಟ್ಟಿದ್ದ ಸಾಲವನ್ನು ಸರ್ಕಾರದ ಶೇರ್ ಆಗಿ ಪರಿವರ್ತಿಸಿ ಆ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿದೆ. ಉತ್ತರ ಕರ್ನಾಟಕದ ವಿದ್ಯುಚ್ಛಕ್ತಿಯ ಮೂಲಸೌಲಭ್ಯ ವೃದ್ಧಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ವಿದ್ಯುತ್ಛಕ್ತಿ ಕಂಪನಿಯ ಪುನಶ್ಚೇತನಕ್ಕಾಗಿ ನೀಡುವ 1500 ಕೋಟಿ ರೂ. ಅನುದಾನವನ್ನು ಹೆಸ್ಕಾಂ ಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಸರ್ಕಾರದ ಸೇವೆಗಳು : ಕರ್ನಾಟಕದ ಪ್ರತಿ ಕುಟುಂಬ ಸುಖೀ ಕುಟುಂಬವಾಗಬೇಕೆಂಬುದು ಸರ್ಕಾರದ ಗುರಿ. ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗಬೇಕು. ಜನವರಿ 26 ರಂದು ಗ್ರಾಮ ಪಂಚಾಯತಿಗಳಲ್ಲೂ ಸರ್ಕಾರಿ ಸೇವೆಗಳು ಲಭ್ಯವಾಗಲಿದೆ.. ಆದಾಯ, ಜಾತಿ ಪ್ರಮಾಣಪತ್ರಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ದೊರೆಯಲಿದೆ. ಆಡಳಿತದ ವ್ಯವಸ್ಥೆಯ ಬದಲಾವಣೆಯ ಮುಖಾಂತರ ಜನರಿಗೆ ಸರ್ಕಾರದ ಸೇವೆಗಳು ಮುಟ್ಟಬೇಕೆನ್ನುವ ಸರ್ಕಾರದ ಸಂಕಲ್ಪ. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸದೆ ನ್ಯಾಯಸಮ್ಮತವಾಗಿ ಸರ್ಕಾರದ ಸೌಲಭ್ಯವನ್ನು ಪಡೆಯುವ ಸಂಕಲ್ಪವನ್ನು ಸಾರ್ವಜನಿಕರು ಮಾಡಬೇಕು ಎಂದು ನುಡಿದರು.
ರೈತಪರವಾದ ಸರ್ಕಾರ : ನಮ್ಮ ಸರ್ಕಾರ ರೈತಪರವಾದ ಸರ್ಕಾರ. ಮುಖ್ಯಮಂತ್ರಿಯಾಗಿ ಮೊದಲು ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಎನ್.ಡಿ.ಆರ್. ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 6800/- ರೂ ಗಳಿಗೆ ರಾಜ್ಯ ಸರ್ಕಾರವು 6,800 ರೂ. ಸೇರಿಸಿ, 13600 ರೂ. ಪರಿಹಾರ ನೀಡಲಾಗುವುದು. ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 13,500 ರೂ. ಗಳಿಗೆ 11,500 ರೂ. ಹೆಚ್ಚುವರಿಯಾಗಿ ನೀಡಿ ಒಟ್ಟು ಪ್ರತಿ ಹೆಕ್ಟೇರ್ಗೆ 25,000 ರೂ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ 18,000 ರೂ. ಪರಿಹಾರ ದ ಜೊತೆಗೆ ರಾಜ್ಯ ಸರ್ಕಾರ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡಲಾಗುವುದು. ಮಳೆಹಾನಿಯಾದ ಒಂದು ತಿಂಗಳೊಳಗೆ ಸರ್ವೇಯಾದ 48 ಗಂಟೆಯೊಳಗೆ ರೈತರ ಖಾತೆಗೆ ಪರಿಹಾರ ತಲುಪಿದೆ. 10 ಲಕ್ಷ ಹೆಕ್ಟೇರೆಗ 969 ಕೋಟಿ ರೂ. ಜಮೆಯಾಗಿದೆ. ರೈತಪರ ಸರ್ಕಾರ, ರೈತರಿಗೆ ಸ್ಪಂದಿಸುವ ಜೀವಂತಿಕೆಯ ಸರ್ಕಾರ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಂಕಲ್ಪ : ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣನ ತ್ಯಾಗ ಬಲಿದಾನ ದೊಡ್ಡದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೊಳಿಸುವುದು ಸರ್ಕಾರದ ಸಂಕಲ್ಪ. ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ತೀರ್ಮಾನ ಮಾಡಲಾಗಿದೆ. ಕಿತ್ತೂರು ಚೆನ್ನಮ್ಮ ಟ್ರಸ್ಟ್ ಗೆ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ರೈಲ್ವೆ ಯೋಜನೆಗೆ ಅನುಮೋದನೆ: ಧಾರವಾಡದಿಂದ ಕಿತ್ತೂರಿನ ಮೂಲಕ ಬೆಳಗಾವಿಗೆ ರೈಲು ಸಂಪರ್ಕ 898 ಕೋಟಿ ರೂ. ರೈಲ್ವೆ ಯೋಜನೆಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸುರೇಶ್ ಅಂಗಡಿಯವರ ಕನಸನ್ನು ಈ ಮೂಲಕ ನನಸು ಮಾಡಲಾಗುತ್ತಿದೆ. ಈ ಭಾಗದಲ್ಲಿ ಮೂಲಭೂತ ಸೌಕರ್ಯ ಬೃಹತ್ ಮಟ್ಟದಲ್ಲಿ ವೃದ್ಧಿಸಲಾಗುತ್ತಿದೆ ಎಂದು ತಿಳಿಸಿದರು.