ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರರೊಬ್ಬರು ಸಾವು
ಬೆಂಗಳೂರು:
ರಸ್ತೆಗೆ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಮಧ್ಯೆ ನಗರದಲ್ಲಿ ಭಾನುವಾರ ರಾತ್ರಿ ಅಬ್ಬರಿಸಿದ ಮಳೆಗೆ ಇಡೀ ಬೆಂಗಳೂರು ತಲ್ಲಣಗೊಂಡಿದೆ.
ಜ್ಞಾನಭಾರತಿದಲ್ಲಿ 110 ಮಿಲಿಮೀಟರ್ ಮಳೆಯಾಗಿದೆ ಎಂದು ವರದಿ ಆಗಿದ್ದರೆ 18 ಜಾನುವಾರುಗಳೂ ಮಳೆಗೆ ಬಲಿಯಾಗಿವೆ ಹಾಗೂ 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.
ರಸ್ತೆಯಲ್ಲಿ ಉರುಳಿಬಿದ್ದಿದ್ದ ತೆಂಗಿನ ಮರಕ್ಕೆ ದ್ವಿಚಕ್ರ ವಾಹನವೊಂದು ಗುದ್ದಿದ್ದು, ಸವಾರ ಬಿ.ಎಸ್. ನಾಗರಾಜ್ ಧನ್ಯ (65) ಎಂಬುವರು ಮೃತಪಟ್ಟಿದ್ದಾರೆ.
‘ ನಾಗರಾಜ್, ಜಯನಗರದಲ್ಲಿ ‘ವಾದಿರಾಜ್ ಕಾಫಿ ಬಾರ್’ ಹೋಟೆಲ್ ನಡೆಸುತ್ತಿದ್ದರು. ನಿತ್ಯವೂ ನಸುಕಿನಲ್ಲಿ ಹೋಟೆಲ್ ಹೋಗಿ ವ್ಯಾಪಾರ ಆರಂಭಿಸುತ್ತಿದ್ದರು. ಅದರಂತೆ, ಸೋಮವಾರ ನಸುಕಿನ 4.30ರ ಸುಮಾರಿಗೆ ಮನೆಯಿಂದ ಹೋಟೆಲ್‌ಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಿಬಿಎಂಪಿಯ ರಾಜರಾಜೇಶ್ವರಿ ನಗರ ಮತ್ತು ಪಶ್ಚಿಮ ವಲಯದ ಮಹಾಲಕ್ಷ್ಮಿಲೇಔಟ್ ದಲ್ಲೇ ಹೆಚ್ಚಿನ ಹಾನಿಯಾಗಿದೆ.
ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ ಬಡಾವಣೆಯಲ್ಲಿ ರಾಜಕಾಲುವೆ ಉಕ್ಕಿ ಮನೆಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದ ಹಾನಿಯಾಗಿದೆ. ರಸ್ತೆ ಬದಿಯಲ್ಲಿರುವ ಎರಡು ಗ್ಯಾರೇಜ್‌ಗಳಿಗೂ ನೀರು ನುಗ್ಗಿದ್ದು, ಅಲ್ಲಿದ್ದ ಕಾರುಗಳೆಲ್ಲವೂ ನೀರಿನಲ್ಲಿ ಮುಳುಗಿದ್ದವು.
Read Here: Bengaluru rain havoc: 110 mm of rainfall recorded in Jnanabharathi
ಎಚ್‌ಎಎಲ್ ಏರ್‌ಪೋರ್ಟ್ ವಾರ್ಡಿನ ರಮೇಶನಗರದಲ್ಲಿ ಮಳೆ ನೀರಿನ ಚರಂಡಿ ಕಟ್ಟಿಕೊಂಡು ಎಚ್‌ಎಎಲ್ ಸಂಸ್ಥೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ 3 ವಾಹನಗಳು ಜಖಂಗೊಂಡಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.