Home ಶಿಕ್ಷಣ ಶಾಲಾ ಹಂತದಲ್ಲಿಯೇ ತಂತ್ರಜ್ಞಾನ ಶಿಕ್ಷಣ: ಮುಖ್ಯಮಂತ್ರಿ ಸಲಹೆ

ಶಾಲಾ ಹಂತದಲ್ಲಿಯೇ ತಂತ್ರಜ್ಞಾನ ಶಿಕ್ಷಣ: ಮುಖ್ಯಮಂತ್ರಿ ಸಲಹೆ

18
0
Karnataka CM focuses on need to start 'tech schools'
bengaluru

ಬೆಂಗಳೂರು:

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಶಿಕ್ಷಣದ ಒಲವು ಮೂಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು.

ಅವರು ಇಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಹುಬ್ಬಳ್ಳಿಯಲ್ಲಿ ನಾವಿನ್ಯತೆ ಮತ್ತು ಪರಿಣಾಮಗಳು ಎಂಬ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಮಕ್ಕಳ ಗ್ರಹಣ ಸಾಮರ್ಥ್ಯ ಅತಿ ಹೆಚ್ಚಾಗಿರುವುದರಿಂದ ಪ್ರೌಢಶಾಲೆಯ ಮಟ್ಟದಲ್ಲಿಯೇ ಸರಳ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಇದಕ್ಕಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಉನ್ನತೀಕರಿಸಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.

bengaluru

ರಾಜ್ಯದಲ್ಲಿ 150 ಐಟಿಐಗಳ ಉನ್ನತೀಕರಣವಾಗುತ್ತಿದೆ. ಪಾಲಿಟೆಕ್ನಿಕ್ ಗಳನ್ನೂ ಆದ್ಯತೆಯ ಮೇರೆಗೆ ಉನ್ನತೀಕರಿಸಬೇಕಾಗಿದೆ. ಇದರಿಂದ ತಂತ್ರಜ್ಞಾನ ಆಧಾರಿತ ಉದ್ಯಮಗಳಲ್ಲಿ ಬಹುವಾಗಿ ಬೇಡಿಕೆಯಿರುವ ಕುಶಲ ಮಾನವ ಸಂಪನ್ಮೂಲ ಒದಗಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬುದ್ಧಿವಂತರಿದ್ದಾರೆ. ಅವರಿಗೆ ಅವಕಾಶ ಬೇಕಾಗಿದೆ. ಈಗಾಗಲೇ ಅವಕಾಶ ಪಡೆದವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವ ನಿದರ್ಶನ‌ ನಮ್ಮ ಮುಂದೆ ಇದೆ ಎಂದು ಸಿಎಂ ಹೇಳಿದರು.

ಉತ್ತರ ಕರ್ನಾಟಕದಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಅಭಿವೃದ್ಧಿಯಾಗಬೇಕು. ಈ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ನಾವೀನ್ಯತೆಗೂ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ಅವಕಾಶ ಸೃಷ್ಟಿಯಾಗಬೇಕು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಐಟಿ ಉದ್ದಿಮೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಇಂದಿನ ಸಮಾವೇಶದಲ್ಲಿ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ತಂತ್ರಜ್ಞಾನಾಧಾರಿತ ಉದ್ಯಮಗಳ ಸ್ಥಾಪನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಚರ್ಚೆಯಾಗಲಿ. ಇದನ್ನು ಆಧರಿಸಿ ನಿಗದಿತ ಕಾಲಮಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಕೆ ಎಲ್ ಇ ತಾಂತ್ರಿಕ ವಿವಿ ಸಹಯೋಗದೊಂದಿಗೆ ನಾವಿನ್ಯತಾ ಕೇಂದ್ರ ಪ್ರಾರಂಭಿಸುವ ಕುರಿತೂ ಸಹ ಮುಖ್ಯಮಂತ್ರಿಗಳು ಸಲಹೆ ನೀಡಿದರು. ನಾವೀನ್ಯತೆಯು ಪ್ರಯೋಗಶಾಲೆಯಲ್ಲಿ ಉಳಿಯಬಾರದು. ನೂತನ ತಂತ್ರಜ್ಞಾನಗಳು ಜನೋಪಯೋಗಿಯಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೆ.ಎಲ್.ಇ ತಾಂತ್ರಿಕ ವಿವಿಯ ಕುಲಪತಿ ಪ್ರೊ. ಅಶೋಕ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಕಾರ್ಯಪಡೆ ರಚಿಸಲಾಗುತ್ತಿದ್ದು, ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು. ಈ ಕಾರ್ಯಪಡೆಯು ಸಂಶೋಧನೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ವಿದ್ಯಾರ್ಥಿಗಳ ಸಮನ್ವಯದ ಕುರಿತು ಸಲಹೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೆ ಎಲ್ ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ್ ಶೆಟ್ಟರ್, ಏಕಸ್ ಕಂಪೆನಿಯ ಅರವಿಂದ್ ಮೆಳ್ಳಿಗೇರಿ ಮತ್ತಿತರರು ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here