ಬೆಂಗಳೂರು:
ದೇಶಾದ್ಯಂತ ಕೋವಿಡ್ ಲಸಿಕೆ ವಿತರಿಸಲು ಸಿದ್ಧತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೇ, ಬೆಂಗಳೂರು ನಗರದಲ್ಲಿ 25 ಲಕ್ಷ ಲಸಿಕೆ ಸಂಗ್ರಹಿಸುವುದಕ್ಕೆ ಅಗತ್ಯವಿರುವ ಮೂಲಸೌಕರ್ಯ ಸಜ್ಜುಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಲಸಿಕೆಗಳನ್ನು ಹಂತ ಹಂತವಾಗಿ ಹಂಚಿಕೆ ಮಾಡಲಿದೆ. ಅದನ್ನು ಪಾಲಿಕೆಯಲ್ಲಿ 330 ರೆಫ್ರಿಜರೇಟರ್‌ಗಳು ಲಭ್ಯ ಇವೆ. 50 ಸಾವಿರ ಲಸಿಕೆಗಳನ್ನು ಸಂಗ್ರಹಿಸಬಲ್ಲ 44 ಈಎಲ್‌ಆರ್‌ಗಳಲ್ಲಿ ಒಟ್ಟು 22 ಲಕ್ಷ ಲಸಿಕೆಗಳನ್ನು ಸಂಗ್ರಹಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇಡೀ ಕೊಠಡಿಯನ್ನೇ ರೆಫ್ರಿಜರೇಟರ್ ಆಗಿ ಪರಿವರ್ತಿಸುವ ವಾಕಿಂಗ್ ಕೂಲರ್‌ಗಳಿಗೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಪಾಲಿಕೆಗೂ ಒಂದು ವಾಕಿಂಗ್ ಕೂಲರ್ ದೊರೆಯುವ ನಿರೀಕ್ಷೆ ಇದೆ. ಅದು ಇಲ್ಲದಿದ್ದರೂ ನಾವೇ 50 ಲಕ್ಷ ರೂ. ವೆಚ್ಚದ ಒಂದು ಕೂಲರ್ ಅನ್ನು ನಿರ್ಮಿಸಲಿದ್ದೇವೆ. ಅದನ್ನು ಸಜ್ಜುಗೊಳಿಸಲು 50 ಲಕ್ಷ ವೆಚ್ಚವಾಗಲಿದೆ ಎಂದಿದ್ದಾರೆ.
‘ಕೋವಿಡ್ ಲಸಿಕೆ ವಿತರಣೆಗೆ ಬಿಬಿಎಂಪಿಯಲ್ಲಿ 500 ಸಿಬ್ಬಂದಿ ಇದ್ದಾರೆ. ಅಗತ್ಯ ಬಿದ್ದರೆ ವೈದ್ಯಕೀಯ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಇಂಟರ್ನಿಗಳ ನೆರವು ಪಡೆಯಲಿದ್ದೇವೆ ಎಂದು ವಿವರಿಸಿದ್ದಾರೆ.