ಬೆಂಗಳೂರು:
ಜಿಲ್ಲೆಯನ್ನು 2025 ರ ವೇಳೆಗೆ ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸುವುದು ನಮ್ಮ, ನಿಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಕರೆ ಕೊಟ್ಟರು.
ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬೆಂಗಳೂರು ಪೂರ್ವ ತಾಲ್ಲಕಿನ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿರು.
ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಮೂಲ ಉದ್ದೇಶ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಈ ರೋಗದ ಬಗ್ಗೆ ಜನರಿಗೆ ಮಾಹಿತಿ ಕೊಡುವುದರ ಜೊತೆಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದು ಅಭಿಪ್ರಾಯ ಪಟ್ಟರು .
ಪ್ರಪಂಚದ ರೋಗಿಗಳಲ್ಲಿ ಕಾಲು ಭಾಗದಷ್ಟು ರೋಗಿಗಳು ಭಾರತದ ದೇಶದಲ್ಲಿ ಕಂಡುಬರುತ್ತಾರೆ. 2020 ರ ಟಿಬಿ ವರದಿ ಪ್ರಕಾರ ಭಾರತದಲ್ಲಿ 24.04 ಲಕ್ಷ ರೋಗಿಗಳು ನಿಕ್ಷಯ್ ನಲ್ಲಿ ನೋಂದಣಿ ಆಗಿದ್ದಾರೆ. ದೇಶದಲ್ಲಿ ಶೇಕಡಾ 40 ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದ್ದು , ಪ್ರತಿ ಐದು ನಿಮಷಕ್ಕೆ ಇಬ್ಬರು ಕ್ಷಯ ರೋಗದಿಂದ ಮರಣ ಹೊಂದುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕ್ಷಯರೋಗ ಪತ್ತೆ ಪ್ರಮಾಣವು ನಮ್ಮ ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಜನ ಸಂಖ್ಯೆಗೆ 136 ಸರಾಸರಿ ಇದೆ ಎಂದರು. ಕ್ಷಯ ರೋಗ ಗುಣಪಡಿಸುವಲ್ಲಿ ಶೇ.100 ರಷ್ಟು ಸಾಧನೆಯಾಗಬೇಕು ಎಂದ ಜಿಲ್ಲಾಧಿಕಾರಿಗಳು ಒಂದು ಲಕ್ಷ ಜನ ಸಂಖ್ಯೆಗೆ 10 ಕೇಸುಗಿಂತ ಕಡಿಮೆ ಪ್ರಮಾಣದಲ್ಲಿ ರೋಗ ಪತ್ತೆಯಾಗುವಂತೆ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕಿದೆ. ಅಲ್ಲದೇ, ಈ ರೋಗದಿಂದ ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆಯಲ್ಲಿ ಜ್ವರ, ಬೆವರುವುದು, ಕಫದಲ್ಲಿ ರಕ್ತ, ತೂಕ ಇಳಿಕೆ, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಜಿಲ್ಲೆಯು 2025 ರೊಳಗೆ ಕ್ರಯ ರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಈಗಾಗಲೇ, ಬೆಂಗಳೂರು ನಗರ ಜಿಲ್ಲೆಯಲ್ಲಿ 343 ಜನರು ಕ್ಷಯರೋಗ ದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದ್ದು. ಇಂತವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವುದಲ್ಲದೇ ರೋಗ ಬರುವುದನ್ನು ತಡೆಗಟ್ಟಲೂ ಸಹ ಸಾಧ್ಯವಿದೆ ಎಂದು ಹೇಳಿದರು.
ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಹಲವಾರು ವ್ಯವಸ್ಥೆ ಇದ್ದು, ಜಿಲ್ಲಾ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ‘ಸಿಬಿನ್ಯಾಟ್’ ಯಂತ್ರಗಳು ಲಭ್ಯವಿದೆ ಎಂದು ಅವರು ಹೇಳಿದರು. ಈಗಾಗಲೇ ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ಉಚಿತವಾಗಿದ್ದು, ಭಾರತ ಸರ್ಕಾರ ನಿಕ್ಷಯ ಪೋಷಣೆ ಯೋಜನೆಯಡಿಯಲ್ಲಿ ಕ್ಷಯ ರೋಗಕ್ಕೆ ತುತ್ತಾದವರಿಗೆ ಪ್ರತಿ ತಿಂಗಳು ರೂ 500 ಪ್ರೋತ್ಸಾಹ ಧನ ಕೂಡ ನೀಡಲಾಗುವುದು. ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆ ಅವರು ಇಂತಹ ಪ್ರಕರಣವನ್ನು ಗುರುತಿಸಿ ವರದಿ ನೀಡಿದರೆ ಅವರಿಗೆ ಸಹ ಒಂದು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದೆಂದು ಅವರು ಹೇಳಿದರು.
ಜಿಲ್ಲಾ ಮತ್ತು ಪ್ರಾಥಮಿಕ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ನೀಡುವ ಮೂಲಕ ಬೆಂಗಳೂರು ನಗರ ಮಾತ್ರವಲ್ಲದೆ ಒಟ್ಟಾರೆ ಕರ್ನಾಟಕವನ್ನು ಕ್ಷಯ ರೋಗ ಮುಕ್ತ ಮಾಡಲು ಕೈಜೋಡಿಸಬೇಕು ಎಂದು ಅವರು ಕೋರಿದರು.
ದೇಶದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ತಲೆದೋರುತ್ತಿದ್ದು . ಸೋಂಕು ತಡೆಯುವಲ್ಲಿ ಸಾರ್ವಜನಿಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು
ನಂತರ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ಕ್ಷಯ ರೋಗವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗವಾಗಿದ್ದು, ಕ್ಷಯ ರೋಗ ಹರಡುವುದನ್ನು ತಡೆಗಟ್ಟಲು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದರು.
ಕ್ಷಯ ರೋಗ ಪತ್ತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಖಾಸಗಿ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷಯ ರೋಗದ ಕಿರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪೂರ್ವ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಗಳಾದ ಡಾ.ಶ್ರೀನಿವಾಸ ಜಿ.ಎ. ಕಣ್ಣೂರಿನ ಪ್ರಾಥಮಿಕ ಆರೋಗ್ಯಾಧಿಕಾರಿಯಾ ಉಮಾ ರಾಕೇಶ್, ಗ್ರಾ ಪಂ.ಅಧ್ಯಕ್ಷರಾದ ಅಕ್ಕಯ್ಯಮ್ಮ , ಮತ್ತು ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.