ಬೆಂಗಳೂರು: ವರ್ಷದ ಮೊದಲ ಮಳೆ ಬರುವುದರೊಂದಿಗೆ, ಬೆಂಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ನಗರದಲ್ಲಿ ಸಂಚಾರ ಅಡಚನೆ ಉಂಟಾಗಿದೆ. ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ವಿಲ್ಸನ್ಗಾರ್ಡನ್, ರಿಚ್ಮಂಡ್ಟೌನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯಿತು.
ಮೈಸೂರು ರೋಡ್, ಹೊಸಗುಡ್ಡದಹಳ್ಳಿ, ಚಾಮರಾಜಪೇಟೆ, ಬಾಪೂಜಿ ನಗರ, ನಾಯಂಡಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಹಲಸೂರು, ಇಂದಿರಾನಗರ, ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ನಗರದಲ್ಲಿ ಅಂಜನಾಪುರ, ಗೊಟ್ಟಿಗೆರೆ, ಉತ್ತರಹಳ್ಳಿ, ರಾಜ ರಾಜೇಶ್ವರಿ ನಗರ, ಹೆಬ್ಬಾಳ, ಜೆ.ಪಿ.ನಗರ, ಕೆಂಗೇರಿ, ನಾಗವಾರ, ಕಮ್ಮನಹಳ್ಳಿ, ಸಂಜಯನಗರ ಸೇರಿದಂತೆ ಹಲವೆಡೆ ಗುಡುಗು ಮಿಂಚು ಸಹಿತ ಮಳೆ ಸುರಿಯಿತು.
ಮಂಗಳವಾರ ಸುರಿದ ಮಳೆಗೆ ಸಂಚಾರದಲ್ಲಿ ಅಡಚನೆ ಉಂಟಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದೆ.
ಇಂದು ರಾತ್ರಿ 9 ಗಂಟೆ ಹೊತ್ತಿಗೆ ಹೆಮ್ಮೆಗೆಪುರದಲ್ಲಿ 24 ಮಿಲಿ ಮೀಟರ್, ಗೊಲ್ಲಹಳ್ಳಿಯಲ್ಲಿ 22.5 ಮಿಲಿ ಮೀಟರ್, ಬ್ಯಾಟರಾಯನಪುರದಲ್ಲಿ 16.5 ಮಿಲಿ ಮೀಟರ್, ಚೌಡೇಶ್ವರಿ 14.5 ಮಿಲಿ ಮೀಟರ್, ಜಕ್ಕೂರಿನಲ್ಲಿ 12.5 ಮಿಲಿ ಮೀಟರ್ ಮತ್ತು ಜಕ್ಕೂರು-2ನಲ್ಲಿ 12 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಯುಗಾದಿ ಬಳಿಕ ರಂಜನ್ ಹಬ್ಬದ ಹಿನ್ನೆಲೆಯಲ್ಲಿ, ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ, ಜನರು ತಮ್ಮ ಊರಿಗೆ ತೆರಳಲು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ ಊರಿಗೆ ತೆರಳುವ ಸಮಯದಲ್ಲಿ ಮಳೆ ಬಿದ್ದಿದೆ. ಇದರಿಂದಾಗಿ, ಮೈಸೂರು ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದವು. ಈಗ ಮಳೆ ಸುರಿದ ಪರಿಣಾಮ, ಸಿಟಿ ಮಾರ್ಕೆಟ್ ಫ್ಲೈ ಓವರ್ನಿಂದ ನಾಯಂಡಹಳ್ಳಿಯವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 21ರವರೆಗೆ ನಗರದಲ್ಲಿ ಮುಂದುವರಿಯುವ ಮುನ್ಸೂಚನೆಯಿದೆ. ಮುಂದಿನ 2 ದಿನಗಳಲ್ಲಿ ಹಗಲು ಒಣಹವೆ ಕಂಡು ಬರಲಿದ್ದು, ಸಂಜೆ ಹೊತ್ತಿಗೆ ಮಳೆ ಜಮಾಯಿಸಲಿದೆ. ಬಿಸಿಲು ಕಡಿಮೆ ಆಗಲಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಮಳೆಯಾಗುವ ನಿರೀಕ್ಷೆಯಿದೆ.
