
ಬೆಂಗಳೂರು: “ಘನತ್ಯಾಜ್ಯ ವಿಲೇವಾರಿಯಲ್ಲಿ ಕಾರ್ಯವೈಖರಿ ವಿಧಾನ ಬದಲಾಯಿಸಿ, ಸಮರ್ಪಕವಾಗಿ ಕಾರ್ಯನಿರ್ವಹಿಸಿ,” ಎಂದು ಬೆಂಗಳೂರು ಉತ್ತರ ನಗರದ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಬೆಳಿಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಿನ ಪರಿಶೀಲನೆಯಲ್ಲಿ ಅವರು ಬಾಣಸವಾಡಿ ಮತ್ತು ಸುಬ್ಬಯ್ಯನಪಾಳ್ಯ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ರಾಶಿ ಮತ್ತು ಬ್ಲ್ಯಾಕ್ ಸ್ಪಾಟ್ಗಳು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಸ್ವಚ್ಛಗೊಳಿಸಲು ಆದೇಶಿಸಿದರು.
ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ ಆಯುಕ್ತರು, ಕಸ ಎಸೆಯುವವರನ್ನು ಗುರುತಿಸಿ ಮಾರ್ಷಲ್ಗಳ ಮೂಲಕ ದಂಡ ವಿಧಿಸಲು ಸೂಚಿಸಿದರು. ಜೊತೆಗೆ, ಬ್ಲ್ಯಾಕ್ ಸ್ಪಾಟ್ ಹೆಚ್ಚು ಇರುವ ಪ್ರದೇಶಗಳಲ್ಲಿ ರಾತ್ರಿ ಗಸ್ತು ನಡೆಸಿ, ಕಸ ಹಾಕುವವರ ಮೇಲೆ ನಿಗಾ ಇಟ್ಟು ದಂಡ ವಿಧಿಸಲು ಮಾರ್ಷಲ್ಗಳಿಗೆ ಮತ್ತು ಸಂಬಂಧಪಟ್ಟ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
“ಘನತ್ಯಾಜ್ಯ ನಿರ್ವಹಣಾ ಸಿಬ್ಬಂದಿ ಕಾರ್ಯವೈಖರಿಯಲ್ಲಿ ಬದಲಾವಣೆ ತಂದು, ಕಸ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸುಧಾರಣೆ ಆಗದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ನಂತರ ಅವರು ಸರ್ವಜ್ಞನಗರದ ಹೆಚ್ಬಿಆರ್ ಲೇಔಟ್ನ ಟ್ರಾನ್ಸ್ಫರ್ ಸ್ಟೇಷನ್ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಾತ್ಮ ಗಾಂಧೀಜಿಯ ಸತ್ಯ, ಅಹಿಂಸೆ ಮತ್ತು ಸ್ವಚ್ಛತೆಯ ಮೌಲ್ಯಗಳನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
ಆಯುಕ್ತರೊಂದಿಗೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.