Home ಬೆಂಗಳೂರು ನಗರ Bengaluru | ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ ಮೂರ್ತಿ ನಿಧನ

Bengaluru | ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ ಮೂರ್ತಿ ನಿಧನ

33
0
Bengaluru | Senior journalist KS Sachidananda Murthy passes away
Bengaluru | Senior journalist KS Sachidananda Murthy passes away

ಬೆಂಗಳೂರು:

ದಿ ವೀಕ್ ನಿಯತಕಾಲಿಕೆ ಮತ್ತು ಮಲಯಾಳ ಮನೋರಮಾ ದೈನಿಕದ ದೆಹಲಿ ರೆಸಿಡೆಂಟ್ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ ಮೂರ್ತಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

68 ವರ್ಷದ ಅವರು ಇತ್ತೀಚೆಗೆ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸ್ನೇಹಿತರಲ್ಲಿ ಮತ್ತು ಮಾಧ್ಯಮ ರಂಗದಲ್ಲಿ ‘ಸಚ್ಚಿ’ ಎಂದೇ ಜನಪ್ರಿಯವಾಗಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಅವರು ಮೂಲತಃ ಕೋಲಾರ ಜಿಲ್ಲೆಯ ಅಷ್ಟಗ್ರಾಮ ಎಂಬ ಗ್ರಾಮಕ್ಕೆ ಸೇರಿದವರು.

ಸಚ್ಚಿದಾನಂದ ಮೂರ್ತಿ ಅವರು 1982ರ ನವೆಂಬರ್‌ನಲ್ಲಿ ‘ದಿ ವೀಕ್‌’ನ ಬೆಂಗಳೂರು ವರದಿಗಾರರಾಗಿ ಕೆಲಸಕ್ಕೆ ಸೇರಿಕೊಂಡರು ಮತ್ತು 2022ರ ಸೆಪ್ಟೆಂಬರ್‌ನಲ್ಲಿ ಅವರು ನಿವೃತ್ತರಾಗುವವರೆಗೂ ಮಲಯಾಳ ಮನೋರಮಾ ಗುಂಪಿನಲ್ಲಿ ಇದ್ದರು ಎಂದು ಪತ್ರಿಕೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

1989ರ ಫೆಬ್ರುವರಿಯಲ್ಲಿ ಅವರು ಬೆಂಗಳೂರಿನಲ್ಲಿ ಪತ್ರಿಕೆಯ ವಿಶೇಷ ವರದಿಗಾರರಾದರು ಮತ್ತು 1990ರ ಏಪ್ರಿಲ್‌ನಲ್ಲಿ ರಾಷ್ಟ್ರ ರಾಜಧಾನಿ ಬ್ಯೂರೋದ ಮುಖ್ಯಸ್ಥರಾಗಿ ದೆಹಲಿಗೆ ತೆರಳಿದರು. ದಿ ವೀಕ್ ಪ್ರಕಾರ, 2000ರ ಏಪ್ರಿಲ್‌ನಲ್ಲಿ ಅವರನ್ನು ಸ್ಥಾನೀಯ ಸಂಪಾದಕರನ್ನಾಗಿ ನೇಮಿಸಲಾಯಿತು.

ಮೂರ್ತಿ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಆತ್ಮೀಯ ಗೆಳೆಯ ಮತ್ತು ಹಿತೈಷಿ ಎಂದು ಸ್ಮರಿಸಿದ್ದಾರೆ.

‘ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆಎಸ್ ಸಚ್ಚಿದಾನಂದ ಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ‌ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಿರಿಯ ಪತ್ರಕರ್ತರಾದ ಸಚ್ಚಿದಾನಂದ ಮೂರ್ತಿ ಅವರ ಸಾವಿನ ಸುದ್ದಿ ಕೇಳಿ ಹೃದಯ ಭಾರವಾಗಿದೆ. ಮಲಯಾಳ ಮನೋರಮಾ, ದಿ ವೀಕ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಸಚ್ಚಿದಾನಂದಮೂರ್ತಿ ಅವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಸ್ನೇಹಿತರ ದುಃಖದಲ್ಲಿ ನಾನು ಭಾಗಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ಮಲಯಾಳ ಮನೋರಮಾ, ದಿ ವೀಕ್ ಪತ್ರಿಕೆಯ ಸಂಪಾದಕರಾಗಿ ರಾಷ್ಟ್ರ ಮಟ್ಟದಲ್ಲಿ ಪತ್ರಿಕೋದ್ಯಮದ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ. ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿಯೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಟ್ವೀಟ್ ಮಾಡಿದ್ದಾರೆ.

ಸಚ್ಚಿದಾನಂದ ಮೂರ್ತಿಯವರು ದುರ್ಲಭ್ ಸಿಂಗ್ ಮಾಧ್ಯಮ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದಲ್ಲಿ ಪತ್ರಿಕೋದ್ಯಮಕ್ಕೆ ಜೀವಮಾನದ ಕೊಡುಗೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

LEAVE A REPLY

Please enter your comment!
Please enter your name here