ಬೆಂಗಳೂರು: ನದಿನೀರು ಒದಗಿಸುತ್ತೇವೆ ಎಂದು ಹೇಳಿದ ಸರ್ಕಾರವು ಬದಲಾಗಿ ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಹರಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ನಡೆದ ಮಾಲೂರು ವಿಧಾನಸಭೆ ಕ್ಷೇತ್ರದ ಹಿರಿಯ ಮುಖಂಡ ಹೂಡಿ ವಿಜಯಕುಮಾರ್ ಅವರ ಪಕ್ಷ ಸೇರ್ಪಡೆ ಹಾಗೂ ಅವರ ನೇತೃತ್ವದ ಸ್ವಾಭಿಮಾನಿ ಜನತಾ ಪಕ್ಷದ ಜೆಡಿಎಸ್ ವಿಲೀನ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು ಈ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆ ಒಂದು ಕಾಲದಲ್ಲಿ ಟೊಮ್ಯಾಟೊ ಉತ್ಪಾದನೆಗೆ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿತ್ತು. ಆದರೆ ಈಗ ಅಲ್ಲಿನ ಕೃಷಿ ಉತ್ಪನ್ನಗಳನ್ನು ತಿನ್ನಬೇಡಿ ಎಂದು ಹೇಳುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಬೆಂಗಳೂರಿನ ಗಲೀಜು ನೀರು ಹಾಗೂ ಕಾಂಗ್ರೆಸ್ ಸರ್ಕಾರದ ನೀತಿಗಳೇ ಕಾರಣ ಎಂದು ಅವರು ದೂರಿದರು.
ಖಜಾನೆ ಖಾಲಿ ಸ್ಥಿತಿಯಲ್ಲೇ ಆಡಳಿತ ನಡೆಸಿದೆವು
ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುವ ಮೊದಲು ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿತ್ತು. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕೊಲ್ಕತ್ತಾದ ಪಿಯರ್ಲೆಸ್ ಕಂಪನಿಯಿಂದ ₹200 ಕೋಟಿ ಸಾಲ ತಂದಿದ್ದರು. ಅಂತಹ ಪರಿಸ್ಥಿತಿಯಲ್ಲಿ ರಾಜ್ಯವನ್ನು ಹೇಗೆ ನಡೆಸಬೇಕಾಯಿತು ಎಂಬುದನ್ನು ಊಹಿಸಬಹುದು ಎಂದು ದೇವೇಗೌಡರು ಹೇಳಿದರು.
ಅಂದು ಇಂದಿನ ಮುಖ್ಯಮಂತ್ರಿಗಳು ನನ್ನ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ ಎಂದು ಅವರು ಹೇಳಿದರು.
ಗ್ಯಾರಂಟಿ ರಾಜಕೀಯಕ್ಕೆ ವಾಗ್ದಾಳಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳ ಮೂಲಕ ಉಚಿತ ಮನೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಉದ್ಯೋಗ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಘೋಷಿಸಿದ್ದರು. ಆದರೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಜನರನ್ನು ಆಕರ್ಷಿಸಿತು. ಈಗ ಅದೇ ಗ್ಯಾರಂಟಿಗಳು ರಾಜ್ಯದ ಖಜಾನೆಗೆ ಹೊರೆ ಆಗುತ್ತಿವೆ ಎಂದು ಸರ್ಕಾರವೇ ಹೇಳಿಕೊಳ್ಳುತ್ತಿದೆ ಎಂದು ದೇವೇಗೌಡರು ಟೀಕಿಸಿದರು.
ಜೆಡಿಎಸ್ ಬಲವರ್ಧನೆಗೆ ಹೊಸ ಆರಂಭ
ಜೆಡಿಎಸ್ ಪಕ್ಷ ಈಗ ಬಲಿಷ್ಠವಾಗಿದೆ. ನಾವು ಎನ್ಡಿಎ ಮೈತ್ರಿಯಲ್ಲಿ ಇದ್ದೇವೆ ಮತ್ತು ಮೈತ್ರಿಯನ್ನು ಮುಂದುವರೆಸುತ್ತೇವೆ. ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ನಡೆಯುತ್ತಿದ್ದು, ಮಾಲೂರು ಕ್ಷೇತ್ರದ ಮುಖಂಡರ ಸೇರ್ಪಡೆ ಅದಕ್ಕೆ ಒಂದು ಆರಂಭ ಮಾತ್ರ ಎಂದು ದೇವೇಗೌಡರು ಹೇಳಿದರು.
