ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆ ವೇಳೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು. ಚಿತ್ರ: ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಬೆಂಗಳೂರು: ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಟ್ಟು 39,800 ರೂ. ದಂಡ ವಸೂಲಿ ಮಾಡಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ನವೆಂಬರ್ 26ರಂದು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದ ಮೇರೆಗೆ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದ್ದು, ವಾಣಿಜ್ಯ ಸಂಸ್ಥೆಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮಾಡುವಂತೆ ಮತ್ತು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲವು ವಾಣಿಜ್ಯ ಸಂಸ್ಥೆಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸದಿರುವುದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸುವುದು ಹಾಗೂ ರಸ್ತೆಬದಿಗಳಲ್ಲಿ ಅನಧಿಕೃತವಾಗಿ ಕಸ ಎಸೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ 15,000 ರೂ. ದಂಡ: ಎಚ್‌ಎಸ್‌ಆರ್ ಲೇಔಟ್‌ನ ‘ಕ್ಲಾಸಿಕ್ ಕನ್ವರ್ಜ್’ (Classic Converge) ಸಂಸ್ಥೆ ಬೃಹತ್ ತ್ಯಾಜ್ಯ ಉತ್ಪಾದಕರ ನಿಯಮ ಉಲ್ಲಂಘಿಸಿ ಕಸವನ್ನು ಮೂಲದಲ್ಲೇ ವಿಂಗಡಿಸದಿರುವುದು ಹಾಗೂ ನಿಷೇಧಿತ ಕಸದ ಕವರ್‌ಗಳನ್ನು ಬಳಸುತ್ತಿರುವುದು ತಪಾಸಣೆ ವೇಳೆ ಕಂಡುಬಂದಿತು. ಸಂಸ್ಥೆಗೆ 15,000 ರೂ. ದಂಡ ವಿಧಿಸಿ, ವೈಜ್ಞಾನಿಕ ಕಸ ವಿಂಗಡಣೆ ಕುರಿತು ಎಚ್ಚರಿಕೆ ನೀಡಲಾಯಿತು.
ಬಿಟಿಎಂ ಲೇಔಟ್‌ನಲ್ಲಿ 22,800 ರೂ. ದಂಡ: ಬಿಟಿಎಂ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಹಾಗೂ ಏಕಬಳಕೆ ಪ್ಲಾಸ್ಟಿಕ್ (ಎಸ್‌ಯುಪಿ) ನಿಷೇಧದ ಕುರಿತು ವಿಶೇಷ ಜಾಗೃತಿ ಮತ್ತು ಕಾರ್ಯಾಚರಣೆ ನಡೆಸಲಾಯಿತು. ನವೆಂಬರ್ 25ರಂದು 19 ಪ್ರಕರಣ ದಾಖಲಿಸಿ 8,200 ರೂ. ಹಾಗೂ ನವೆಂಬರ್ 26ರಂದು 33 ಪ್ರಕರಣ ದಾಖಲಿಸಿ 14,600 ರೂ. ಸೇರಿದಂತೆ ಬಿಟಿಎಂ ಕ್ಷೇತ್ರದಲ್ಲಿ ಒಟ್ಟು 52 ಪ್ರಕರಣಗಳಿಂದ 22,800 ರೂ. ದಂಡ ವಸೂಲಿ ಮಾಡಲಾಗಿದೆ.
ಸಿಂಗಸಂದ್ರ ವಾರ್ಡ್‌ನಲ್ಲಿ 2,000 ರೂ. ದಂಡ: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ವಾರ್ಡ್‌ನಲ್ಲಿ ಅಧಿಕಾರಿಗಳು ಸಾರ್ವಜನಿಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಘನತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಿದರು. ಸೆಂಟ್ರಲ್ ಜೈಲ್ ರಸ್ತೆಯ ಬಾಷ್ (Bosch) ಕಂಪನಿ ಪಾಯಿಂಟ್ ಬಳಿ ರಸ್ತೆಬದಿಯಲ್ಲಿ ಅನಧಿಕೃತವಾಗಿ ಕಸ ಎಸೆದ ವ್ಯಕ್ತಿಗೆ 1,000 ರೂ. ಹಾಗೂ ಪರಪ್ಪನ ಅಗ್ರಹಾರ ಮುಖ್ಯರಸ್ತೆಯಲ್ಲಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ ಬೀದಿಬದಿ ವ್ಯಾಪಾರಿಗೆ 1,000 ರೂ. ಸೇರಿದಂತೆ ಒಟ್ಟು 2,000 ರೂ. ದಂಡ ವಿಧಿಸಲಾಯಿತು. ಇದರೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 39,800 ರೂ. ದಂಡ ವಸೂಲಿ ಮಾಡಲಾಗಿದೆ.
ದಂಡ ವಿಧಿಸಿದ ಬಳಿಕ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆಯ ಮಾರ್ಗಸೂಚಿಗಳನ್ನು ವಿತರಿಸಲಾಯಿತು. ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ಹಸಿ ಮತ್ತು ಒಣ ತ್ಯಾಜ್ಯವಾಗಿ ಕಡ್ಡಾಯವಾಗಿ ವಿಂಗಡಿಸಿ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು, ರಸ್ತೆಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯಬಾರದು ಮತ್ತು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ನಿಯಮ ಉಲ್ಲಂಘಿಸಿ ನಗರದ ನೈರ್ಮಲ್ಯಕ್ಕೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ನಿರಂತರ ತಪಾಸಣೆ ನಡೆಸಿ ದಂಡ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಆಯುಕ್ತ ಕೆ.ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:
