ಬೆಂಗಳೂರು: ಕೋರಮಂಗಲದ ನೆಕ್ಸಸ್ ಮಾಲ್ನ ಫುಡ್ಕೋರ್ಟ್ನಲ್ಲಿ ಕಸ ವಿಂಗಡಣೆ ನಿಯಮ ಉಲ್ಲಂಘನೆ ಮತ್ತು ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ 10 ವಾಣಿಜ್ಯ ಮಳಿಗೆಗಳಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಒಟ್ಟು ₹85,000 ದಂಡ ವಿಧಿಸಿ ವಸೂಲಿ ಮಾಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿರುವ ನೆಕ್ಸಸ್ ಮಾಲ್ನಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಈ ವೇಳೆ ಫುಡ್ಕೋರ್ಟ್ನ ಹಲವು ಪ್ರತಿಷ್ಠಿತ ಮಳಿಗೆಗಳು ಹಸಿ ಮತ್ತು ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸದೆ ಮಿಶ್ರಣ ಮಾಡಿರುವುದು ಕಂಡುಬಂದಿದೆ. ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವುದನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಘನತ್ಯಾಜ್ಯ ನಿರ್ವಹಣಾ ನಿಯಮ ಉಲ್ಲಂಘಿಸಿದ ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಕಸವನ್ನು ಕಡ್ಡಾಯವಾಗಿ ವಿಂಗಡಿಸುವುದು ಮತ್ತು ಏಕಬಳಕೆಯ ಪ್ಲಾಸ್ಟಿಕ್ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಳಿಗೆಗಳಿಗೆ ಸೂಚಿಸಲಾಗಿದೆ.
ವಾಣಿಜ್ಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಸುಧಾರಿಸುವುದು ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಪರಿಶೀಲನೆ ಹಾಗೂ ಜಾರಿ ಕ್ರಮ ಕೈಗೊಳ್ಳಲಾಗಿದೆ. ಪರಿಶೀಲನೆ ಮತ್ತು ದಂಡ ವಿಧಿಸಿದ ಕ್ರಮಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ಅಧಿಕೃತ ಪ್ರಕಟಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
