ಮತದಾರರ ಪಟ್ಟಿ ಪರಿಷ್ಕರಣೆ–2026: ಬೆಂಗಳೂರಿನಲ್ಲಿ ನಾಲ್ಕು ದಿನಗಳ ಎಸ್ಐಆರ್ ವಿಶೇಷ ಅಭಿಯಾನ
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)–2026ರ ಭಾಗವಾಗಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಆಗಸ್ಟ್ 29 ಮತ್ತು 30 ಹಾಗೂ ಸೆಪ್ಟೆಂಬರ್ 19 ಮತ್ತು 20ರಂದು ವಿಶೇಷ ಅಭಿಯಾನ ನಡೆಯಲಿದೆ. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಲು ಹಾಗೂ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿಕೊಳ್ಳಲು ಅನುಕೂಲ ಕಲ್ಪಿಸುವುದು ಅಭಿಯಾನದ ಉದ್ದೇಶವಾಗಿದೆ.
ಅಭಿಯಾನ ನಡೆಯುವ ನಾಲ್ಕೂ ದಿನಗಳಂದು ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಮಹೇಶ್ವರ್ ರಾವ್ ಅವರು ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮತದಾರರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಪರಿಶೀಲಿಸಲು ಹಾಗೂ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಲು ಬಿಎಲ್ಒಗಳು ಅಗತ್ಯ ಸಹಕಾರ ನೀಡಬೇಕು.
ಬಿಎಲ್ಒಗಳಿಗೆ ಅಗತ್ಯವಿರುವಷ್ಟು ನಮೂನೆ–6, 6A, 7 ಮತ್ತು 8ಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹುಡುಕಲು ಮತದಾರರಿಗೆ ನೆರವಾಗುವುದರ ಜೊತೆಗೆ, ಅರ್ಜಿದಾರರು ಸಲ್ಲಿಸುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಬಿಎಲ್ಒಗಳು ಸ್ವೀಕರಿಸಬೇಕು.
ಅರ್ಜಿದಾರರಿಂದ ಸ್ವೀಕರಿಸಲಾದ ಎಲ್ಲಾ ನಮೂನೆಗಳನ್ನು ಗಣಕೀಕರಣಗೊಳಿಸಿ, ಬಿಎಲ್ಒ ಆ್ಯಪ್ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದಲ್ಲಿ ತಿಳಿಸಲಾಗಿದೆ.
ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಸ್ಐಆರ್ ವಿಶೇಷ ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಮತದಾರರಲ್ಲಿ ಅಗತ್ಯ ಅರಿವು ಮೂಡಿಸಲು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕಾರ್ಯಕ್ರಮಗಳನ್ನು ಆಯೋಜಿಸುವಂತೆಯೂ ನಿರ್ದೇಶನ ನೀಡಲಾಗಿದೆ.
