ಬೆಂಗಳೂರು:
ನಗರದ ಮಹಾರಾಣಿ ಕಾಲೇಜಿನಲ್ಲಿನ ಮೂಲಸೌಕರ್ಯ ಸೇರಿದಂತೆ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮೋಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗಾನೈಜೇಷನ್(ಎಐಡಿಎಸ್‍ಓ) ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ.
ಪರೀಕ್ಷಾ ಫಲಿತಾಂಶಗಳು ಸರಿಯಾದ ಸಮಯಕ್ಕೆ ಪ್ರಕಟಿಸಿಲ್ಲ. ತಡವಾಗಿ ಪ್ರಕಟವಾಗುತ್ತಿರುವ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅನೇಕ ತಪ್ಪುಗಳಿವೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಫಲಿತಾಂಶದಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಬೇಕು. ಹಾಗೆಯೇ ಕಾಲೇಜಿನ ಶೌಚಾಲಯಗಳು ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಇವೆ. ಅವನ್ನು ಅಭಿವೃದ್ಧಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎನ್‍ಇಪಿ-2020 ಅಡಿಯಲ್ಲಿ ಹೊಸದಾಗಿ ಪರಿಚಯಿಸಲಾದ ಓಪನ್ ಎಲೆಕ್ಟಿವ್ ವಿಷಯಗಳ ತರಗತಿಗಳು ಈ ಕಾಲೇಜಿನಲ್ಲಿ ನಡೆಯುತ್ತಿಲ್ಲ. ಅಲ್ಲದೇ ಅಥಿತಿ ಉಪನ್ಯಾಸಕರು ನಡೆಸುತ್ತಿರುವ ನ್ಯಾಯಯುತ ಹೋರಾಟದಿಂದಾಗಿ 3 ವಾರಗಳಿಂದ ತರಗತಿಗಳು ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಮಹಾರಾಣಿ ಕಾಲೇಜು ಸಮಸ್ಯೆಗಳ ಆಗರವಾಗಿದೆ. ಕಾಲೇಜಿನಲ್ಲಿನ ಮೂಲಭೂತ ಸಮಸ್ಯೆಗಳು ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ರಾಜ್ಯ ಸರಕಾರವು ಕೂಡಲೇ ಪರಿಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾಥಿಗಳು ಭಾಗವಹಿಸಿದ್ದರು.