ಬೆಂಗಳೂರು:
ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ 17 ವರ್ಷದ ವಿದ್ಯಾರ್ಥಿಯ ಮೃತದೇಹ ಸಿಲಿಕಾನ್ ಸಿಟಿಯ ಸಂಜಯನಗರ ಮುಖ್ಯರಸ್ತೆಯ ಬಸ್ ಸ್ಟಾಪ್ ಬಳಿ ಶುಕ್ರವಾರ ಪತ್ತೆಯಾಗಿದೆ.
ಮೃತ ಯುವಕನನ್ನು ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದ್ದು, ಮಿಲಿಟರಿ ಶಾಲೆಯ ದ್ವಿತೀಯ ಪಿಯು ವಿದ್ಯಾರ್ಥಿ.
ರಾಹುಲ್, ರಾತ್ರಿ ಊಟ ಮುಗಿಸಿಕೊಂಡು ಮನೆಯಲ್ಲೇ ಮಲಗಿದ್ದ. ಪೋಷಕರು ಇನ್ನ ಮಲಗಿರುವಾಗ ನಸುಕಿನ ಜಾವ ಸುಮಾರು 3.35 ರ ಸುಮಾರಿಗೆ ಆತ ಮನೆಯಿಂದ ಎದ್ದು ಹೊರಬಂದಿದ್ದಾನೆ. ರಾಹುಲ್ ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದನು. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಮಾಡುತ್ತಿದ್ದ ಎನ್ನಲಾಗಿದೆ. ಅಂತೆಯೇ ಆತ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ಮೂರುವರೆ-ನಾಲ್ಕು ಗಂಟೆ ಸುಮಾರಿಗೆ ಆತ ಮನೆಯಿಂದ ತೆರಳಿದ್ದಾನೆ. ನಂತರ ಬೆಳಗ್ಗೆ ಎದ್ದ ಪೋಷಕರು ಮಗ ಕೋಣೆಯಲ್ಲಿ ಕಾಣಿಸದಿರುವುದನ್ನು ಗಮನಿಸಿ, ನಿರಂತರವಾಗಿ ಆತನಿಗೆ ಕರೆ ಮಾಡಿದ್ದಾರೆ. ಆದರೆ, ರಾಹುಲ್ ಮಾತ್ರ ಕರೆ ಸ್ವೀಕರಿಸಿಲ್ಲ.
ರಾಹುಲ್ ಮುಂಜಾನೆ ಐದು ಗಂಟೆ ಸುಮಾರಿಗೆ ತಲೆಯ ಎಡಭಾಗದಲ್ಲಿ ಶೂಟ್ ಮಾಡಿಕೊಂಡು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತ ಪಟ್ಟ ಬಳಿಕವೂ ಪೋಷಕರಿಂದ ನಿರಂತರವಾಗಿ ಕರೆ ಬರುತ್ತಿತ್ತು. ಬಳಿಕ ಘಟನಾ ಸ್ಥಳದಲ್ಲಿದ್ದ ಪೊಲೀಸರು ಕರೆಯನ್ನು ಸ್ವೀಕರಿಸಿ, ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿರುವ ಮೃತ ವಿದ್ಯಾರ್ಥಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದು ಕೊಲೆಯೋ? ಆತ್ಮಹತ್ಯೆಯೋ ಎಂಬುದರ ಕುರಿತು ಸದಾಶಿವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಇಂದು ನಸುಕಿನ ಜಾವ ಯುವಕ ಪಿಸ್ತೂಲ್ ನೊಂದಿಗೆ ಮನೆಯಿಂದ ಹೊರಬಂದಿದ್ದಾನೆ. ಯುವಕನ ತಂದೆ ಸೇನೆಯ ನಿವೃತ್ತ ಹವಾಲ್ದಾರ್ ಆಗಿದ್ದು, ಪರವಾನಗಿ ಪಡೆದು ಪಿಸ್ತೂಲ್ ಇಟ್ಟುಕೊಂಡಿದ್ದರು. ತಂದೆ ಪಿಸ್ತೂಲ್ ನಿಂದ ಯುವಕ ಶೂಟ್ ಮಾಡಿಕೊಂಡಿದ್ದಾನೆ. ಸ್ವಯಂ ಆಗಿ ಯುವಕ ಶೂಟ್ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.
ಶೂಟ್ ಏಕೆ ಮಾಡಿಕೊಂಡಿದ್ದಾನೆ ಎಂಬುದರ ಕುರಿತು ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ತನಿಖೆ ಮುಂದುವರೆದಿದೆ ಎಂದರು.
Also Read: Bengaluru teen reportedly kills himself with dad’s revolver