ಸೆಪ್ಟೆಂಬರ್ 4ರಿಂದ BGS ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್ ಮತ್ತು ಏರ್ಪೋರ್ಟ್ ರಸ್ತೆಯಲ್ಲಿ ವಿವಿಧ ವಾಹನಗಳ ಸಂಚಾರಕ್ಕೆ ನಿರ್ಬಂಧ
ಬೆಂಗಳೂರು, ಸೆಪ್ಟೆಂಬರ್ 4: ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ BGS ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ಸಂಜೀವ್ ನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ ಬೆಂಗಳೂರು ಸಂಚಾರ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಈ ನಿರ್ಬಂಧಗಳು 2026ರ ಸೆಪ್ಟೆಂಬರ್ 4ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ.
ಬೆಂಗಳೂರು ಸಂಚಾರ ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೈಸೂರು ರಸ್ತೆಯ BGS ಫ್ಲೈಓವರ್ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ದಿನದ 24 ಗಂಟೆಯೂ ನಿರ್ಬಂಧ ಇರಲಿದೆ. ಮೂರು ಚಕ್ರದ ಸರಕು ಆಟೋರಿಕ್ಷಾಗಳು ಸೇರಿದಂತೆ ಇತರ ಎಲ್ಲ ವರ್ಗದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11 ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಪೀಣ್ಯ ಎಲಿವೇಟೆಡ್ ಕಾರಿಡಾರ್ನಲ್ಲಿ ಪ್ರಯಾಣಿಕರ ಆಟೋರಿಕ್ಷಾ ಮತ್ತು ಮೂರು ಚಕ್ರದ ಸರಕು ಆಟೋರಿಕ್ಷಾಗಳ ಸಂಚಾರಕ್ಕೆ ದಿನದ 24 ಗಂಟೆಯೂ ನಿರ್ಬಂಧ ಇರಲಿದೆ. ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11 ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ದಿನದ 24 ಗಂಟೆಯೂ ನಿರ್ಬಂಧ ವಿಧಿಸಲಾಗಿದೆ.
ಸಂಜೀವ್ ನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳ ಸಂಚಾರಕ್ಕೆ ದಿನದ 24 ಗಂಟೆಯೂ ನಿರ್ಬಂಧ ಇರಲಿದೆ. ಎಲ್ಲ ವರ್ಗದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, CCTV ಕಣ್ಗಾವಲಿನಡಿ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ಕ್ರಮಕ್ಕೆ ಸಾರ್ವಜನಿಕರು ಬೆಂಬಲ ನೀಡಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
