Home ಬೆಂಗಳೂರು ನಗರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ ರೂ. 90 ಕೋಟಿ ಬೆಡುಗಡೆ:...

ಬೆಂಗಳೂರು ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ ರೂ. 90 ಕೋಟಿ ಬೆಡುಗಡೆ: ಬಿಎಸ್ ವೈ

62
0

ಬೆಂಗಳೂರು:

ಕೊರೋನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದಲ್ಲಿಯೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ರೂ. 25 ಕೋಟಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 65 ಕೋಟಿಗಳನ್ನು ಬಿಡುಗಡೆಗೆ ಆದೇಶಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು.

ಇಂದು ನಗರದ ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಹಾದ್ವಾರ ಹಾಗೂ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿದ ನಂತರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

WhatsApp Image 2021 01 12 at 21.24.36

ಜಿಲ್ಲಾ ಪಂಚಾಯತ್ ಗೆ ಬಿಡುಗಡೆಯಾಗುರುವ ಒಟ್ಟು ಅನುದಾನದಲ್ಲಿ ಬಹುತೇಕ ಭಾಗ ಕಟ್ಟಡ ನಿರ್ಮಾಣ ಹಾಗೂ ವೇತನಕ್ಕಾಗಿಯೇ ವೆಚ್ಚವಾಗುತ್ತಿದ್ದು ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಮೀಸಲಿರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಇರುವ ಸಂಪನ್ಮೂಲಗಳಲ್ಲಿ ಹೆಚ್ಚಿನ ಆದಾಯ ಬರುವಂತಹ ಕಾರ್ಯಗಳಿಗೆ ಒತ್ತು ಕೊಡುವಂತೆ ಸಲಹೆ ನೀಡಿದ ಅವರು ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳುವಂತೆ ಸೂಚಿಸಿದರು.

ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ಅನುಷ್ಟಾನಕ್ಕೆ ಆದ್ಯತೆ ನೀಡಬೇಕಾಗಿದೆ. 2215 ಯೋಜನೆಗಳ ಸುಮಾರು ಯೋಜನೆಗಳು ಮುಕ್ತಾಯವಾಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಬಹುತೇಕ ಆನುದಾನವನ್ನು ಬಿಡುಗಡೆಮಾಡಲಾಗಿದ್ದರೂ, ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಸುಮಾರು 736 ಟ್ಯಾಂಕುಗಳ ಪೈಕಿ 69 ಟ್ಯಾಂಕುಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆ ಹಾಗೂ ಕಾಮಗಾರಿಗಳು ಪೂರ್ಣಗೊಳ್ಳದೇ ಇರುವುದಕ್ಕೆ ಮುಖ್ಯ ಕಾರಣ ಎಂದು ತಿಳಿಸಿದ ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಿನ ಸಮಸ್ಯೆಗಳು, ಶಿಕ್ಷಣ, ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು, ಬರಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಿಸಿದರೆ ಸಾಲದು , ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಶಿವರಾಮೇ ಗೌಡ ಅವರಿಗೆ ಸೂಚಿಸಿದರು.

WhatsApp Image 2021 01 12 at 21.24.35

ಜಿ. ಪಂ ಸದಸ್ಯರಾದ ಮುನಿರಾಜು ಅವರು ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕಂದಾಯ ಇಲಾಖೆಯಿಂದ ಭೂಮಿ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಅತೀಕ್ ಅವರು ಜಿಲ್ಲೆಯಲ್ಲಿರುವ ಒಟ್ಟು 93 ಗ್ರಾಮ ಪಂಚಾಯಿತಿಗಳಲ್ಲಿ 22 ಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೆಗಾಗಿ ಭೂಮಿ ಮಂಜೂರಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇದು ಅತಿ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದಕ್ಕೆ ಭೂಮಿ ಒದಗಿಸಲು ಪ್ರಥಮಾದ್ಯತೆ ನೀಡಬೇಕಾಗಿದೆ ಎಂದು ಕೋರಿದರು. ಕಂದಾಯ ಸಚಿವರಾದ ಆರ್ ಅಶೋಕ್ ಅವರು ಇದಕ್ಕೆ ಪ್ರತಿಕ್ರಿಯಿಸಿ, ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿ ಸರ್ವೇ ನಂಬರ್ ಅನ್ನು ಸೂಚಿಸಿ ಕೋರಿಕೆ ಸಲ್ಲಿಸಿದರೆ ಸಾಕು ಕೂಡಲೇ ಅದನ್ನು ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಅಡಿಯಲ್ಲಿ 28 ಇಲಾಖೆಗಳು ನಗರದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಇಲಾಖೆಗಳ ಕಛೇರಿಗಳನ್ನು ಒಂದೇ ಕಡೆಗೆ ತರುವ ನಿಟ್ಟಿನಲ್ಲಿ ಅನೆಕ್ಸ್ ಕಟ್ಟಡ ಕಟ್ಟಲು ರೂ. 6 ಕೋಟಿಗಳನ್ನು ಹಾಗೂ ಬನ್ನೇರುಘಟ್ಟ ಸರ್ಕಲ್ ನಲ್ಲಿರುವ 3.5 ಎಕರೆ ಪ್ರದೇಶವನ್ನು ಸಂರಕ್ಷಿಸಿಕೊಳ್ಳಲು ಗೋಡೆ ನಿರ್ಮಾಣಕ್ಕೆ ರೂ. 3 ಕೋಟಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಭೆಗೆ ಗೈರುಹಾಜರಾದ ಕಾರಣ ಅವರನ್ನು ಇಂದೇ ಅಮಾನತು ಮಾಡಲು ಮುಖ್ಯಮಂತ್ರಿಗಳು ಜಿ. ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.

ಮಾನ್ಯ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ಮಾತನಾಡಿ ಇನ್ನು ಮುಂದೆ ಮಾಸಾಶನಗಳು ಅಂಚೆ ಇಲಾಖೆ ಮೂಲಕ ವಿತರಣೆಯಾಗುವುದಿಲ್ಲ. ಬದಲಾಗಿ ಬ್ಯಾಂಕ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಆಧಾರ್ ಹಾಗೂ ಬಿ ಪಿ ಎಲ್ ಕಾರ್ಡಿನ ಆಧಾರದ ಮೇಲೆ ಅರ್ಹರ ಮನೆ ಬಾಗಿಲಿಗೆ ಅರ್ಜಿ ಇಲ್ಲದೇ ಮಾಸಾಶನ ತಲುಪಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಿ ಮರಿಸ್ವಾಮಿ ಅವರು ಮಾತನಾಡಿ ಜಿಲ್ಲೆಯ 23 ಗ್ರಾಮ ಪಂಚಾಯತಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ತಪ್ಪಿದಂತಾಗಿದೆ. ಅವರುಗಳಿಗೆ ಬಿಬಿಎಂಪಿ ಯಲ್ಲಿಯೇ ಕಾರ್ಯ ನಿಯೋಜನೆ ಮಾಡಿಕೊಡುವಂತೆ ಕೋರಿದರು. ಅಲ್ಲದೇ, ಜಿ. ಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಕೂಲಿ ನೌಕರರನ್ನು ಖಾಯಂಗೊಳಿಸುವಂತೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ ನಿಗದಿಪಡಿಸುವಂತೆ ಸಲ್ಲಿಸಲಾದ ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಸಭೆಯಲ್ಲಿ ಯೆಲಹಂಕ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಪಿ ಆರ್ ರಮೇಶ್, ಜಿ. ಪಂ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಮುಖ್ಯಮಂತ್ರಗಳ ಕಾರ್ಯದರರ್ಶಿಗಳಾದ ಎಸ್ ಸೆಲ್ವಕುಮಾರ್, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎನ್ ಮಂಜುಳಾ, ಜಿಲ್ಲಾಧಿಕಾರಿ ಜಿ ಎನ್ ಶಿವಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here