ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವ ನಡುವೆಯೇ, ಕಾವೇರಿ ಕುಡಿಯುವ ನೀರಿನ ದುರ್ಬಳಕೆ ಮಾಡಿದ 692 ಮಂದಿಗೆ ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ದಂಡ ವಿಧಿಸಿದೆ.
ಜಲಮಂಡಳಿಯ ಪ್ರಕಾರ, ವಾಹನ ತೊಳೆಯಲು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಬಳಸಿದ ಪ್ರಕರಣಗಳಲ್ಲಿ ತಲಾ ₹5,000 ದಂಡ ವಿಧಿಸಲಾಗಿದೆ. ಇದುವರೆಗೆ ಒಟ್ಟು ₹34.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಉತ್ತರ ವಲಯದಲ್ಲಿ 86, ಪೂರ್ವ ವಲಯದಲ್ಲಿ 100, ಪಶ್ಚಿಮ ವಲಯದಲ್ಲಿ 165, ದಕ್ಷಿಣ ವಲಯದಲ್ಲಿ 206 ಹಾಗೂ ಕೇಂದ್ರ ವಲಯದಲ್ಲಿ 135 ಮಂದಿಗೆ ದಂಡ ವಿಧಿಸಲಾಗಿದೆ.
ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ದುರ್ಬಳಕೆ ತಡೆಯಲು ಜಲಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
