Home ಆರೋಗ್ಯ ಬೆಂಗಳೂರು ಪಶ್ಚಿಮ ವಲಯದಲ್ಲಿ 45 ವರ್ಷ ಮೇಲ್ಪಟ್ಟ 1 ಲಕ್ಷ ಜನಕ್ಕೆ ಲಸಿಕೆ ಕೊಟ್ಟರೆ ಮೊದಲ...

ಬೆಂಗಳೂರು ಪಶ್ಚಿಮ ವಲಯದಲ್ಲಿ 45 ವರ್ಷ ಮೇಲ್ಪಟ್ಟ 1 ಲಕ್ಷ ಜನಕ್ಕೆ ಲಸಿಕೆ ಕೊಟ್ಟರೆ ಮೊದಲ ಡೋಸ್ ಪೂರ್ಣ

58
0

ವೋಟರ್ ಐಡಿ ಇಟ್ಟುಕೊಂಡು ಮನೆ ಮನೆಗೂ ಹೋಗುವಂತೆ ಬಿಬಿಎಂಪಿಗೆ ತಾಕೀತು ಮಾಡಿದ ಡಿಸಿಎಂ

ಬೆಂಗಳೂರು:

ನಗರದ ಪಶ್ಚಿಮ ವಲಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಇನ್ನು ಒಂದು ಲಕ್ಷ ಜನರಿಗೆ ಲಸಿಕೆ ನೀಡಿದರೆ ಮೊದಲ ಡೋಸ್ ಲಸಿಕೆ ಅಭಿಯಾನ ಯಶಸ್ವಿಯಾಗಿ ಮುಗಿಯಲಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಬಿಬಿಎಂಪಿ ಪಶ್ಚಿಮ ವಲಯ ಕೋವಿಡ್ ಸ್ಥಿತಿಗತಿ & ಲಸಿಕೀಕರಣ ಪ್ರಗತಿ ಪರಿಶೀಲಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಈಗಾಗಲೇ ಈ ವಯೋಮಿತಿಯ ಶೇ.80ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು ಇನ್ನು 20ರಷ್ಟು ಜನರಿಗೆ, ಅಂದರೆ 1 ಲಕ್ಷ ನಾಗರಿಕರಿಗಷ್ಟೇ ಕೊಡಬೇಕಿದೆ ಎಂದರು. 

ಮಲ್ಲೇಶ್ವರ, ಗೋವಿಂದರಾಜ ನಗರ, ದಾಸರಹಳ್ಳಿ, ಯಶವಂತಪುರ ಮತ್ತು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳು ಪಶ್ಚಿಮ ವಲಯದಲ್ಲಿದ್ದು, ಒಟ್ಟು ಜನಸಂಖ್ಯೆ 23.72 ಲಕ್ಷ ಇದೆ. ಈ ಪೈಕಿ 45 ವರ್ಷ ಮೇಲ್ಪಟ್ಟವರು 4,78,836 ಇದ್ದು, ಇವರಲ್ಲಿ 80% ಜನರಿಗೆ ಲಸಿಕೆ ಕೊಡಲಾಗಿದೆ ಎಂದು ಡಿಸಿಎಂ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.

ಈ ವಿಭಾಗದಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ. ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸಿ ಲಸಿಕೆ ನೀಡುವ ಕೆಲಸ ಮಾಡಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತದಾರರ ಪಟ್ಟಿ ಇಟ್ಟುಕೊಂಡು ಪ್ರತಿಯೊಬ್ಬರನ್ನು ಗುರುತಿಸಿ ಲಸಿಕೆ ನೀಡುವಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಮೀನಾ-ಮೇಷ ಎಣಿಸುವಂತಿಲ್ಲ:

ಲಸಿಕೆ ನೀಡುವ ವಿಚಾರದಲ್ಲಿ ಸಿಬ್ಬಂದಿ ಮೀನಾ- ಮೇಷ ಎಣಿಸುವಂತಿಲ್ಲ. ಹಂಚಿಕೆಯಾದ ಲಸಿಕೆಯನ್ನು ಆಯಾ ದಿನವೇ ನೀಡಬೇಕು. ಒಂದು ವೇಳೆ ಆ ಜಾಗದಲ್ಲಿ ಜನ ಬರದಿದ್ದರೆ ಪಕ್ಕದ ಲಸಿಕಾ ಕೇಂದ್ರಕ್ಕೆ ತೆರಳಿ ಕೊಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಕೈಕಟ್ಟಿ ಕೂರುವಂತಿಲ್ಲ ಎಂದು ಸೂಚನೆ ಕೊಡಲಾಗಿದೆ. ಇನ್ನು, ಯಾರೂ ಕೂಡ ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಮಾರಕ ಸೋಂಕಿನಿಂದ ಪಾರಾಗಲು ಇರುವ ಏಕೈಕ ಪರಿಹಾರ ಇದೊಂದೇ ಎಂದು ಡಿಸಿಎಂ ಒತ್ತಿ ಹೇಳಿದರು.

18ರಿಂದ 44 ವರ್ಷ ವಯೋಮಿತಿಯ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರಿಗೆ ಲಸಿಕೆ ಜೋರಾಗಿ ನಡೆಯುತ್ತಿದೆ. ಇನ್ನು ಈ ವರ್ಗದಲ್ಲಿ ಯಾರು ಲಸಿಕೆ ಪಡೆದಿಲ್ಲವೋ ಅವರು ತಕ್ಷಣ ಬಂದು ವ್ಯಾಕ್ಸಿನ್ ಪಡೆಯಬೇಕು. ಅಲ್ಲದೆ, ಬಿಬಿಎಂಪಿಯಿಂದ ಅವರಿಗೆ ಕರೆ ಮಾಡಿ ನಿಗದಿತ ಜಾಗಕ್ಕೆ ಕರೆಸಿಕೊಂಡು ಲಸಿಕೆ ಕೋಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

Bengaluru west zone vaccinated 80 people above 45 years age DCM.jpg1

ಎರಡನೇ ಡೋಸ್ ಗೆ ಬಂದರೆ ಇನ್ನೂ ಶೇ.80ರಷ್ಟು ಜನ ಲಸಿಕೆ ಪಡೆದಿಲ್ಲ. ಕೇಂದ್ರ ಸರಕಾರ ಡೋಸ್ ಅಂತರ ಹೆಚ್ಚಿಸಿದ ಕಾರಣಕ್ಕೆ ಇವರಿಗೆ ಲಸಿಕೆ ನೀಡಲಾಗಿಲ್ಲ. ಅವರೆಲ್ಲರಿಗೂ ಲಸಿಕೆ ಪಡೆಯಲು ಯಾವ ದಿನಾಂಕ ನಿಗದಿ ಆಗಿದೆಯೋ ಅದೇ ದಿನವೇ ಕೊಡಲಾಗುವುದು. ಯಾವ ಕಾರಣಕ್ಕೂ ಅವರಿಗೆ ವ್ಯಾಕ್ಸಿನ್ ಕೊರತೆ ಆಗದು. ನಮ್ಮಲ್ಲಿ ಲಸಿಕೆ ಕೊರತೆ ಇಲ್ಲ. ಎಷ್ಟೇ ಜನರು ಬಂದರೂ ನೀಡಲಾಗುವುದು. ಅಲ್ಲದೆ, ಎರಡನೇ ಡೋಸ್ ಪಡೆಯುವವರಿಗೆ ಮೊಬೈಲ್ ಸಂದೇಶ & ಕರೆಯನ್ನೂ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಡಿಸಿಎಂ ಉತ್ತರಿಸಿದರು.

ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಬೂತ್ ಮಟ್ಟದಲ್ಲೂ ಬಿಬಿಎಂಪಿಯಿಂದ ಲಸಿಕೆ ನೀಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಸದ್ಯಕ್ಕೆ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊರತೆ ಇಲ್ಲ. 18ರಿಂದ 44 ವಯೋಮಿಯವರಿಗೆ ಅಗುವಷ್ಟು ಲಸಿಕೆ ನೀಡಲು ಇನ್ನು ಕಾಲಾವಕಾಶ ಬೇಕು ಎಂದರು ಅವರು.

ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಉಪ ಮುಖ್ಯಮಂತ್ರಿ ಯವರ ಕಾರ್ಯದರ್ಶಿ ‌ಪಿ.ಪ್ರದೀಪ, ಪಶ್ಚಿಮ ವಲಯದ‌ ಪಾಲಿಕೆ ಆಯುಕ್ತ ಬಸವರಾಜ್, ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಘೋಷ್, ಜಂಟಿ ಆಯುಕ್ತ ಶಿವಸ್ವಾಮಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲ ವಿಧಾನಸಭೆ ಕ್ಷೇತ್ರಗಳ ಆರೋಗ್ಯಾಧಿಕಾರಿಗಳು, ನೋಡೆಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

40 ಕೋಟಿ ರೂ.ಗಳಷ್ಟು ಬ್ಲ್ಯಾಕ್ ಫಂಗಸ್ ಔಷಧಿ ಖರೀದಿ:

ಕಪ್ಪು ಶಿಲೀಂದ್ರ ಕಾಯಿಲೆ ಬಗ್ಗೆ ಸರಕಾರ ಹೆಚ್ಚು ಕಾಳಜಿ ವಹಿಸಿದ್ದು, ಮೂರು ದಿನಗಳ ಹಿಂದೆ 40 ಕೋಟಿ ರೂ.ಗಳಷ್ಟು ಮೊತ್ತದ ಔಷಧಿ ಖರೀದಿಗೆ ರಾಜ್ಯ ಸರಕಾರ ಆದೇಶ ನೀಡಿದೆ. ಆ ಔಷಧಿಗಳ ಪೂರೈಕೆ ಕೂಡ ಶುಕ್ರವಾರ ದಿಂದ ಆರಂಭವಾಗಿದೆ ಎಂದು ಡಿಸಿಎಂ ಹೇಳಿದರು.

ರಾಜ್ಯದಲ್ಲಿ ಈವರೆಗೆ ವರದಿಯಾಗಿರುವುದು 800 ಪ್ರಕರಣಗಳು. ಇದಲ್ಲದೆ 700 ಪ್ರಕರಣಗಳ ಬಗ್ಗೆ ಶಂಕೆ ಇದೆ. ಆದರೂ ಸರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಿ ಖರೀದಿ ಮಾಡುತ್ತಿದೆ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here