ಸುಸ್ಥಿರ ಪರಿಸರ, ಸ್ವಸ್ಥ ಆರೋಗ್ಯ ಉತ್ತೇಜಿಸಲು ‘ಸೈಕಲ್ ದಿನ’ ಆಚರಣೆ
ಬೆಂಗಳೂರು:
ಸುಸ್ಥಿರ ಪರಿಸರ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಸಲುವಾಗಿ ನಗರದ ಮಲ್ಲೇಶ್ವರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸೈಕಲ್ ದಿನ’ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಪಾಲ್ಗೊಂಡಿದ್ದರು.
ಅನೇಕ ಮುಂದುವರಿದ ದೇಶಗಳಲ್ಲಿ ಪರಿಸರ ಹಾಗೂ ಆರೋಗ್ಯ ಕಾಳಜಿಯಿಂದಾಗಿ ಸೈಕಲ್ ಸವಾರಿ ಜನಪ್ರಿಯವಾಗುತ್ತಿದೆ. ಇದನ್ನು ಉತ್ತೇಜಿಸಲು ನಗರಗಳಲ್ಲಿ ಪ್ರತ್ಯೇಕ ಸೈಕಲ್ ಪಥಗಳೇ ಇತ್ತೀಚಿಗೆ ನಿರ್ಮಾಣವಾಗುತ್ತಿವೆ ಎಂದು ಸಚಿವರು ಹೇಳಿದರು.
ಸಣ್ಣ ಪುಟ್ಟ ಕಾರ್ಯಗಳನ್ನು ನಡಿಗೆಯ ಮೂಲಕ ಅಥವಾ ಸೈಕಲ್ ಉಪಯೋಗಿಸಿ ಮಾಡುವುದರಿಂದ ಶಬ್ದ ಮಾಲಿನ್ಯ, ಗಾಳಿ ಮಾಲಿನ್ಯಗಳನ್ನು ಕಡಿಮೆಗೊಳಿಸುವ ಜೊತೆಗೆ ವೈಯಕ್ತಿಕವಾಗಿ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮಲ್ಲೇಶ್ವರಂ ಸೋಷಿಯಲ್, ಸಿಎಂಎಎಂ (ಕೌನ್ಸಿಲ್ ಫಾರ್ ಆಕ್ಟೀವ್ ಮೊಬಿಲಿಟಿ) ಮತ್ತು ಡಲ್ಟ್ (ಕರ್ನಾಟಕ ಸರ್ಕಾರದ ನಗರ ಭೂಸಾರಿಗೆ ನಿರ್ದೇಶನಾಲಯ) ಸಹಯೋಗದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮಕ್ಕೆ ಬಿಜೆಪಿ ಮಹಿಳಾ ಮೋರ್ಛಾದ ಕಾವೇರಿ ಕೇದಾರನಾಥ್ ಚಾಲನೆ ನೀಡಿದರು.
ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿ ಆರಂಭವಾಗಿ ಮಾರಮ್ಮ ಸರ್ಕಲ್, ಯಶವಂತಪುರ ವೃತ್ತು, 90 ರೂಟ್ ಗಳ ಮೂಲಕ ಸಾಗಿ ಶುರವಾದ ಜಾಗದಲ್ಲೇ ಸೈಕಲ್ ಚಾಲನೆ ಕೊನೆಗೊಂಡಿತು. 4.2 ಕಿ.ಮೀ. ಉದ್ದದ ಈ ಸೈಕಲ್ ಚಾಲನೆಯಲ್ಲಿ ಅಶ್ವತ್ಥ ನಾರಾಯಣ ಅವರು ಪೂರ್ತಿಯಾಗಿ ಪಾಲ್ಗೊಂಡಿದ್ದರು. ಎಲ್ಲಾ ವಯೋಮಾನದ ಸುಮಾರು 150 ಜನರು ಸೈಕಲ್ ಚಾಲನೆ ಮಾಡಿ ಗಮನಸೆಳೆದರು.
ಇದೇ ಸಂದರ್ಭದಲ್ಲಿ ಸಚಿವರು ಮತ್ತು ಪ್ಯಾರಾ ಅಥ್ಲೀಟ್ ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ, 104 ಕಿ.ಮೀ. ಸೈಕಲ್ ರಾಲಿ ನಡೆಸಿದವರಿಗೆ ಸ್ಮರಣಿಕೆಗಳನ್ನು ಪ್ರದಾನ ಮಾಡಿದರು.
Also Read: Karnataka Minister pedals 4.2 km for ‘public health and environment’!
ನಂತರ, ಇದೇ ಮಾರ್ಗದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ಸೈಕಲ್ ರಾಲಿಗೆ ಮಲ್ಲೇಶ್ವರದ ಸೈಕಲ್ ಕೌನ್ಸಿಲರ್ ಅರವಿಂದ್ ದ್ವಾರಕಾನಾಥ್ ಚಾಲನೆ ನೀಡಿದರು.
ಗಾಯನ, ಬೀದಿ ಆಟಗಳು ಗಮನ ಸೆಳೆದವು. ವಿಶೇಷ ಚೇತನ ಮಕ್ಕಳು ಜಲಮಂಡಳಿ ಆವರಣದಲ್ಲಿ ಸೈಕಲ್ ಚಾಲನೆ ಮಾಡಿ ಖುಷಿಪಟ್ಟರು.
ಮಲ್ಲೇಶ್ವರ ಸೈಕಲ್ ಕೌನ್ಸಿಲರ್ ಕೃಷ್ಣ ಪಣ್ಯಂ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ತಿಂಗಳಿಗೆ ಒಂದು ಭಾನವಾರದಂದು ಮೂರು ತಿಂಗಳವರೆಗೆ ನಡೆಯಲಿದೆ. 15 ನಿಮಿಷಕ್ಕಿಂತ ಕಡಿಮೆ ಸಮಯ ಹಿಡಿಯುವ ಸ್ಥಳಗಳಿಗೆ ಜನರು ನಡಿಗೆ ಅಥವಾ ಸೈಕಲ್ ಮೂಲಕವೇ ತಲುಪಿ ಕೆಲಸಗಳನ್ನು ಮಾಡಿಕೊಳ್ಳುವಂತೆ ಉತ್ತೇಜಿಸುವುದು ಕಾರ್ಯಕ್ರಮದ ಗುರಿಯಾಗಿದೆ.