ಬೆಂಗಳೂರು:
ಬಿಟ್ ಕಾಯಿನ್ ತನಿಖೆ ನಡೆಸಿದ್ದ ಅಧಿಕಾರಿಗಳ ಮನೆ ಮೇಲೆ ಎಸ್‍ಐಟಿ ದಾಳಿ ನಡೆಸಿದೆ. ಹೊಸ ಬೆಳವಣಿಗೆಯಲ್ಲಿ ಈ ಹಗರಣದ ಸಿಸಿಬಿ ತನಿಖೆಯ ವೇಳೆ ಮುಂದಾಳತ್ವ ವಹಿಸಿದ್ದ ಐವರು ಅಧಿಕಾರಿಗಳ ಮನೆ ಮೇಲೆ ಶನಿವಾರ ಎಸ್‍ಐಟಿ ದಾಳಿ ನಡೆಸಿದೆ.
ತುಮಕೂರು ರಸ್ತೆಯ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‍ಮೆಂಟ್‍ನ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರ್ ಅವರ ನಿವಾಸ, ಬೊಮ್ಮನಹಳ್ಳಿ ಸಲಾರ್ಪುರಿಯಾ ಅಪಾರ್ಟ್‍ಮೆಂಟ್‍ನ ಸೈಬರ್ ಎಕ್ಸ್‍ಪರ್ಟ್ ಸಂತೋಷ್ ಅವರ ನಿವಾಸ, ರಾಮಮೂರ್ತಿ ನಗರದಲ್ಲಿ ವಾಸವಿರುವ ಇನ್ಸ್‍ಪೆಕ್ಟರ್ ಚಂದ್ರಾಧರ್ ಅವರ ನಿವಾಸ ಹಾಗೂ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ್ ಅವರ ನಿವಾಸ ಸೇರಿ ಐವರು ಅಧಿಕಾರಿಗಳ ಮೇಲೆ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿರುವ ಲ್ಯಾಪ್ ಟಾಪ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳಷ್ಟೇ ಅಲ್ಲದೆ ಓರ್ವ ಖಾಸಗಿ ವ್ಯಕ್ತಿ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.
4 ಪೊಲೀಸ್ ಅಧಿಕಾರಿಗಳು, ಇಬ್ಬರು ಖಾಸಗಿ ವ್ಯಕ್ತಿಗಳ 9 ಸ್ಥಳಗಳ ಮೇಲೆ ನಡೆದಿದ್ದ ದಾಳಿ ವೇಳೆ, 4 ಲ್ಯಾಪ್ ಟಾಪ್, 8 ಮೊಬೈಲ್ ಫೋನ್, 2 NAS, 10 ಹಾರ್ಡ್ ಡ್ರೈವ್ಸ್, 5 ಪೆನ್ ಡ್ರೈವ್ಸ್, 1 ಮೆಮೊರಿ ಕಾರ್ಡ್ ಸೇರಿದಂತೆ ದಾಖಲೆಗಳು ವಶಕ್ಕೆ ಪಡೆಯಲಾಗಿದೆ.