ಬಂಟ್ವಾಳ:
ನಗರ, ಪಟ್ಟಣಗಳಂತೆಯೇ ಗ್ರಾಮಗಳೂ ಅಭಿವೃದ್ಧಿ ಹೊಂದಬೇಕು. ಗ್ರಾಮದ ಆಡಳಿತ ಆ ಗ್ರಾಮದಲ್ಲಿಯೇ ಇರಬೇಕು. ಅಂತಹ ಆದರ್ಶ ಪಂಚಾಯತ್ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿಜೆಪಿ ಜಿಲ್ಲಾ ಘಟಕ ಏರ್ಪಡಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ಆಡಳಿತ ವ್ಯವಸ್ಥೆಯನ್ನು ಗ್ರಾಮ ಮಟ್ಟದಲ್ಲಿಯೇ ರೂಪಿಸಬೇಕು. ಉತ್ತಮ ಜನಪ್ರತಿನಿಧಿಗಳು ಉತ್ತಮ ಪಕ್ಷದಿಂದ ಮಾತ್ರ ಬರಲು . ಸಾಧ್ಯ. ಅಂತಹ ಉತ್ತಮ ಪಕ್ಷ ಬಿಜೆಪಿ ಎಂದರು.
ಕೇವಲ ಒಂದೂವರೆ ವರ್ಷದಿಂದ ಸರಕಾರ ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಜನಪರವಾದ ಅನೇಕ ಯೋಜನೆಗಳು ಜಾರಿ ಆಗಿವೆ. ಇವೆಲ್ಲವನ್ನು ಗ್ರಾಮಗಳಿಗೆ ಮುಟ್ಟಿಸಬೇಕಾದ ಕೆಲಸ ಮಾಡಬೇಕಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಆರೂವರೆ ವರ್ಷಗಳಿಂದ ಜಾರಿ ಮಾಡಿರುವ ಕಾರ್ಯಕ್ರಮಗಳು ಗ್ರಾಮೀಣ ಭಾರತಕ್ಕೆ ವರದಾನವಾಗಿವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಂತ್ರಿಕ ಬೆಸುಗೆ: ಕೋವಿಡ್ ಬಂದ ಮೇಲೆ ತಂತ್ರಜ್ಞಾನದಿಂದಲೇ ಎಲ್ಲವನ್ನೂ ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ವೃತ್ತಿ, ಸೇವೆ, ಶಿಕ್ಷಣ ಸೇರಿದಂತೆ ಎಲ್ಲವನ್ನು ತಂತ್ರಜ್ಞಾನವೇ ಬೆಸೆಯುತ್ತಿದೆ. ಹೀಗಾಗಿ ಗ್ರಾಮಗಳ್ಲಲೂ ಈಗ ತಂತ್ರಜ್ಞಾನವೇ ಎಲ್ಲವನ್ನೂ ನಿರ್ಧರಿಸುತ್ತಿದೆ. ಹೀಗಾಗಿ, ಗ್ರಾಮೀಣ ಮಟ್ಟದಲ್ಲಿ ಸಂಪರ್ಕ ವ್ಯವಸ್ಥೆ ಮುಖ್ಯವಾಗುತ್ತದೆ. ಹೀಗಾಗಿ ಹಳ್ಳಿಗಳಿಗೆ ಉತ್ತಮ ಸಂಪರ್ಕ ಸೇತುವೆಯನ್ನು ಕಲ್ಪಸಬೇಕು ಎಂದು ಪ್ರತಿಪಾದಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಶಾಸಕರಾದ ರಾಜೇಶ್ ನಾಯಕ್, ಉಮಾನಾಥ ಕೋಟ್ಯನ್, ಡಾ.ಭರತ್ ಶೆಟ್ಟಿ, ಕೋಲಾರದ ಸಂಸದ ಮುನಿಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ಮಾತನಾಡಿದರು.