ಬೆಂಗಳೂರು: ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (By Elections) ಇಂದು ಯುಗಾದಿ ಹಬ್ಬದಂದು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ, ಬಿಜೆಪಿ ಹಳೆಯ ಹುಲಿ ಮತ್ತು ಹೊಸ ಮುಖಕ್ಕೆ ಅವಕಾಶ ನೀಡಿದೆ. ಬಾಗಲಕೋಟೆ ಕ್ಷೇತ್ರಕ್ಕೆ ವೀರಣ್ಣ ಚರಂತಿಮಠ್ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಆಯ್ಕೆ ಮಾಡಿದೆ. ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ.
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದ್ದು, ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ನಲ್ಲಿ ಭಾರೀ ಗದ್ದಲ ಉಂಟಾಗಿದೆ.
ದಾವಣಗೆರೆ ದಕ್ಷಿಣದಲ್ಲಿ ಜಾತಿ ಲೆಕ್ಕಾಚಾರದಲ್ಲಿ ತಂತ್ರವನ್ನು ಬಿಜೆಪಿ ಹೆಣೆದಿದ್ದು, ಎಸ್ಟಿ ಸಮುದಾಯದ ಟಿ. ಶ್ರೀನಿವಾಸದಾಸ ಕರಿಯಪ್ಪಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಅಹಿಂದ ಮತ್ತು ಲಿಂಗಾಯತ ವರ್ಗದ ಮತಗಳ ಮೇಲೆ ಪಕ್ಷ ಕಣ್ಣಿಟ್ಟಿದೆ.
