Home ಬೆಂಗಳೂರು ನಗರ ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ: ಸಿದ್ದರಾಮಯ್ಯ ಟೀಕೆ

ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ: ಸಿದ್ದರಾಮಯ್ಯ ಟೀಕೆ

33
0

ದಿವಂಗತ ಅರ್. ಗುಂಡೂರಾವ್ ಅವರ ಜನ್ಮದಿನದ ಅಂಗವಾಗಿ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಆಟದ ಮೈದಾನದಲ್ಲಿ ದಿನಸಿ ಕಿಟ್ ವಿತರಣೆ

ಬೆಂಗಳೂರು:

ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಸುಳ್ಳಿನ ಕಂತೆಗಳನ್ನು ಅಲ್ಲಿ ತಯಾರು ಮಾಡಿ ಮಾರ್ಕೆಂಟಿಂಗ್ ಮಾಡುವವರು ಆ ಪಕ್ಷದ ನಾಯಕರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ದಿವಂಗತ ಅರ್. ಗುಂಡೂರಾವ್ ಅವರ ಜನ್ಮದಿನದ ಅಂಗವಾಗಿ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಆಟದ ಮೈದಾನದಲ್ಲಿ ಇಂದು ಆಯೋಜಿಸಿದ್ದ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿದರು. ಇದೇ ವೇಳೆ ನಾಯಕರು ಗುಂಡೂರಾವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬ ಕಾರಣಕ್ಕೆ ನಾವು ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದೆವು. ಈಗಿನ ಸರ್ಕಾರ ಬಡವರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿ ಕೊಡಲು ಸ್ವಂತ ಹಣದಿಂದ ಕೊಟ್ಟಂತೆ ಮಾಡುತ್ತಾರೆ. ಮುಂದೆ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಡವರಿಗೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ನೀಡುತ್ತೇವೆ.

Read Here: BJP are ‘Talibanis’, alleges Cong leader Siddaramaiah

ಬಡವರ ಪರವಾಗಿ ಇರುವುದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿಯವರು ಢೋಂಗಿಗಳು. ಸಬ್ ಕ ಸಾಥ್, ಸಬ್ ಕ ವಿಕಾಸ್ ಎನ್ನುತ್ತಾರೆ, ಇವರ ಮಂತ್ರಿಮಂಡಲದಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್, ಮುಸ್ಲಿಂಮರು ಇಲ್ಲ.

ಬಿಜೆಪಿಯವರು ಹಿಂಬಾಗಿಲ ಮೂಲಕ ಮಾತ್ರ ಅಧಿಕಾರಕ್ಕೆ ಬರಬಲ್ಲರು. ಸ್ವಂತ ಶಕ್ತಿ ಇಲ್ಲ. ಇಷ್ಟೆಲ್ಲಾ ಆಪರೇಷನ್ ಕಮಲ ಮಾಡಿದ್ರೂ ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದ್ರು.

Siddaramaiah at event in Gandhinagara

ಈಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ. ಇವರು ಕೂಡ ಆರ್.ಎಸ್.ಎಸ್ ನ ಮುಖವಾಡ ಇದ್ದಂತೆ. ಆರ್.ಎಸ್.ಎಸ್ ನವರು ತಮ್ಮನ್ನು ತಾವು ದೇಶಭಕ್ತರು ಅಂತ ಕರೆದುಕೊಳ್ತಾರೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಒಬ್ಬನೇ ಒಬ್ಬ ಆರ್.ಎಸ್.ಎಸ್ ನ ನಾಯಕನ ಹೆಸರು ಹೇಳಿ ನೋಡೋಣ. ಇಷ್ಟೇ ಇವರ ದೇಶಭಕ್ತಿ.

ವಂದೇ ಮಾತರಂ ಗೀತೆ ಆರಂಭವಾದುದ್ದು ಸ್ವಾತಂತ್ರ್ಯ ಹೋರಾಟದಲ್ಲಿ, ಈಗ ಅದನ್ನು ಬಿಜೆಪಿ, ಆರ್.ಎಸ್.ಎಸ್ ಹೇಳಲು ಆರಂಭಿಸಿದೆ. ಆಗ ಸ್ವಾತಂತ್ರ್ಯ ಚಳವಳಿ ನಡೆಯುವಾಗ ಅದರಿಂದ ದೂರ ಇದ್ದರು. ಮೊದಲು ಗಾಂಧಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡರೆ ಬಿಜೆಪಿಗೆ ಆಗ್ತಾ ಇರಲಿಲ್ಲ, ಈಗ ಇದ್ದಕ್ಕಿದ್ದಂತೆ ಅವರ ಮೇಲೆ ಪ್ರೀತಿಯ ನಾಟಕವಾಡಲು ಆರಂಭಿಸಿದ್ದಾರೆ. ನಾವು ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಅನ್ನು ಬಂದ್ ಮಾಡಿ ಬಡವರ ತಿನ್ನುವ ಅನ್ನಕ್ಕೆ ಕಲ್ಲು ಹಾಕಿದ ದುಷ್ಟ ಸರ್ಕಾರ ರಾಜ್ಯದಲ್ಲಿದೆ. ಇದನ್ನು ಕಿತ್ತೊಗೆಯುವ ಸಂಕಲ್ಪವನ್ನು ಜನ ಮಾಡಬೇಕು.

ನಾನು ಜನತಾಪಾರ್ಟಿಯಿಂದ ಶಾಸಕನಾಗಿ ಆಯ್ಕೆಯಾದಾಗ ಗುಂಡೂರಾವ್ ಅವರು ಆಡಳಿತದಲ್ಲಿ ಇದ್ದರು, ಅವರು ಹೇಗೆ ಅಜಾನುಬಾಹುವಾಗಿದ್ದರೋ, ಅಷ್ಟೇ ಹೃದಯವೈಶಾಲ್ಯತೆಯನ್ನು ಹೊಂದಿದ್ದರು. ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇದ್ದಾಗ ಮಾತ್ರ ಬಡವರು, ದಲಿತರು, ದಮನಿತರ ಪರವಾಗಿ ಸ್ಪಂದಿಸಲು ಸಾಧ್ಯವಾಗುತ್ತೆ. ಗುಂಡೂರಾಯರು ಸಾಮಾನ್ಯ ಕುಟುಂಬದಿಂದ ಬಂದು ಮುಖ್ಯಮಂತ್ರಿ ಸ್ಥಾನಕ್ಕೇರಿದ ಸಾಧಕ.

DInesh GunduRao

ಗುಂಡೂರಾವ್ ಅವರು ಶ್ರೀಮತಿ ಇಂದಿರಾ ಗಾಂಧಿ ಅವರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ನೇರ ನಡೆ ನುಡಿಯ ಸ್ವಭಾವ, ಬಡವರಿಗೆ ಸ್ಪಂದಿಸುವ ಅವರ ಗುಣ ಇಂದಿಗೂ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದೆ.

ಗುಂಡೂರಾವ್ ಅವರ ಕಾಲದಲ್ಲಿ ಬಡವರಿಗೆ ಅಕ್ಕಿ ನೀಡುವ ಕಾರ್ಯಕ್ರಮ ಆರಂಭಿಸಲಾಗಿತ್ತು. ನಾನು ಮುಖ್ಯಮಂತ್ರಿ ಆದಮೇಲೆ ಮೊದಲು ಒಂದು ರೂಪಾಯಿಗೆ ಐದು ಕೆ.ಜಿ ಅಕ್ಕಿ ನೀಡಿದೆ, ನಂತರ 1 ಕೋಟಿ 20 ಲಕ್ಷ ಕುಟುಂಬಗಳಿಗೆ ತಲಾ ಏಳು ಕೆ.ಜಿ ಉಚಿತವಾಗಿ ಅಕ್ಕಿ ನೀಡಿದೆ. ಈಗ ಕುಮಾರಸ್ವಾಮಿ ಅನ್ನಭಾಗ್ಯ ಯೋಜನೆಗೆ ನಾನು ಅನುದಾನ ನೀಡಿದೆ ಅಂತ ಸುಳ್ಳು ಹೇಳ್ತಾರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಮೊದಲೇ ಈ ಯೋಜನೆ ನಾನು ಜಾರಿಗೆ ತಂದಿದ್ದೆ.

ಈ ದೇಶದಲ್ಲಿ ಎಲ್ಲರಿಗೂ ಬಟ್ಟೆ ಮತ್ತು ಹೊಟ್ಟೆತುಂಬಾ ಅನ್ನ ಸಿಗುವುದಿಲ್ಕವೋ ಅಲ್ಲಿಯವರೆಗೆ ನಾನು ಅರೆಬೆತ್ತಲಾಗಿಯೇ ಇರುತ್ತೇನೆ ಎಂದು ಗಾಂಧೀಜಿ ಅವರು ಹೇಳಿದ್ದರು. ರಾಜ್ಯದ ಜನರ ಹಸಿವು ನೀಗಿಸುವ ಕೆಲಸವನ್ನು ದಿನೇಶ್ ಗುಂಡೂರಾವ್ ಅವರು ನಮ್ಮ ಸರ್ಕಾರದ ಅವಧಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದರು ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ.

ಶ್ರೀಮತಿ ಟಬು ರಾವ್ ಅವರ ಅಧ್ಯಕ್ಷತೆಯಲ್ಲಿ ಗುಂಡೂರಾವ್ ಫೌಂಡೇಶನ್ ಆರಂಭವಾಗಿದೆ. ಇದು ಬಡ ಜನರಿಗೆ ಅಕ್ಕಿ ಹಾಗೂ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ರೂ. 10 ಸಾವಿರದ ಚೆಕ್ ನೀಡುವ ಜನಪರ ಕಾರ್ಯವನ್ನು ಮಾಡುತ್ತಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ದಿನೇಶ್ ಗುಂಡೂರಾವ್ ಅವರ ಕುಟುಂಬ ಮಾಡುತ್ತಿದೆ. ಈ ವರ್ಷ ಒಂದರಲ್ಲೇ 30,000 ಜನರಿಗೆ ಆಹಾರ ಕಿಟ್ ಹಂಚಿದ್ದಾರೆ. ಇಂಥಾ ಜನಪರ ಕಾರ್ಯಕ್ಕೆ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಇದೇ ರೀತಿ ರಾಜ್ಯಾದ್ಯಂತ ನಮ್ಮ‌ ಶಾಸಕರು, ಕಾರ್ಯಕರ್ತರು ಜನರ ಕಷ್ಟಕ್ಕೆ ನೆರವಾಗಿದ್ದಾರೆ.

LEAVE A REPLY

Please enter your comment!
Please enter your name here