ನವೆಂಬರ್ 26ರಂದು ಬೆಂಗಳೂರಿನಲ್ಲಿ ನಡೆದ ಎನ್ಡಿಎ ಸಮನ್ವಯ ಸಮಿತಿ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು.
ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕ ಅಲ್ಲ; ಎನ್ಡಿಎ ಮೈತ್ರಿಯನ್ನು ಕರ್ನಾಟಕದಲ್ಲಿ ದೀರ್ಘ ಕಾಲಕ್ಕೆ ಮುಂದುವರಿಸಿ, ಕಾಂಗ್ರೆಸ್ ದುರಾಡಳಿತ ಕೊನೆಗೊಳಿಸಲು ಒಗ್ಗಟ್ಟಿನ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನವೆಂಬರ್ 26ರಂದು ಬೆಂಗಳೂರಿನಲ್ಲಿ ಜೆಡಿಎಸ್-ಬಿಜೆಪಿ ನಾಯಕರ ಸಭೆಯ ನಂತರ ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಕಾರಣಕ್ಕೂ ಮನಸ್ತಾಪ, ಗೊಂದಲಕ್ಕೆ ಅವಕಾಶ ಕೊಡುವುದಿಲ್ಲ ಎಂದ ಅವರು, ಉಪಚುನಾವಣೆ, ಜಿಬಿಎ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ನಾಲ್ಕು ಎಂಎಲ್ಸಿ ಚುನಾವಣೆಯ ರೀತಿಯಲ್ಲೇ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ಹಿರಿಯೂರು ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಜೆಡಿಎಸ್ ಅಥವಾ ಬಿಜೆಪಿ ಅಭ್ಯರ್ಥಿ ಅಲ್ಲ, ಎನ್ಡಿಎ ಅಭ್ಯರ್ಥಿ ಇರಲಿದ್ದಾರೆ; ಗೆಲ್ಲುವುದೇ ಮುಖ್ಯ; ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದರು. ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಲಾಗುವುದು; ಮುಖ್ಯಮಂತ್ರಿ ಅಭ್ಯರ್ಥಿ ಮುಖ್ಯವಲ್ಲ, ಕಾಂಗ್ರೆಸ್ ಅನ್ನು ಸೋಲಿಸಿ ಎನ್ಡಿಎ ಅಧಿಕಾರಕ್ಕೆ ತರುವುದೇ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದರು.
ಇದೊಂದು ಘೋಷಣೆ ಸರ್ಕಾರವಾಗಿದ್ದು, ಯಾವುದೇ ಕಾರ್ಯಕ್ರಮಗಳು ಜಾರಿಗೆ ಬರುತ್ತಿಲ್ಲ; ರಾಜ್ಯ ಮಟ್ಟದಲ್ಲಿ ಇಂತಹ ಕೆಟ್ಟ ಆಡಳಿತವನ್ನು ಹಿಂದೆಂದೂ ಕಂಡಿರಲಿಲ್ಲ ಎಂದ ಅವರು, ಬೆಳಗಾವಿ ಅಧಿವೇಶನದಲ್ಲಿ ಬೆಲೆ ಏರಿಕೆ ಸೇರಿದಂತೆ ಹಲವು ಜನಪರ ವಿಚಾರಗಳನ್ನು ಆದ್ಯತೆಯ ಮೇಲೆ ಚರ್ಚೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:
