ಬೆಂಗಳೂರು:
ವಿಧಾನ ಪರಿಷತ್ ಕಲಾಪವನ್ನು ಮಂಗಳವಾರ ಮತ್ತೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಪರಿಷತ್ ಸದಸ್ಯರು ಇಂದು ರಾಜ್ಯಪಾಲರ ಮುಂದೆ ಪರೇಡ್ ನಡೆಸಿದರು.
ವಿಧಾನಸೌಧದಲ್ಲಿ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಹಿತಿ ನೀಡಿದ ಪೂಜಾರಿ, ಪರಿಷತ್ ಕಲಾಪವನ್ನು ಮಂಗಳವಾರ ಕರೆಯುವಂತೆ ಆಗ್ರಹಿಸಲು ರಾಜ್ಯಪಾಲರ ಬಳಿ ಹೋಗುತ್ತೇವೆ. ರಾಜ್ಯಪಾಲರು 12 ಗಂಟೆಗೆ ಸಮಯ ನೀಡಿದ್ದಾರೆ. ಮಂಗಳವಾರ ಪರಿಷತ್ ಕಲಾಪ ನಡೆಸಬೇಕು. ಈ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದರು.
ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಜೆಡಿಎಸ್ ಬೆಂಬಲ ಕೇಳಿದ್ದೇವೆ. ಜೆಡಿಎಸ್ ನಮಗೆ ಬೆಂಬಲ ಕೊಡುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ನಿನ್ನೆ ವಿಧಾನ ಪರಿಷತ್ ಕಲಾಪದಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ವಿಷಯವನ್ನು ಬಿಜೆಪಿ ಸದಸ್ಯರು ಪ್ರಸ್ತಾಪಿಸುತ್ತಿದ್ದಾಗ ಸಭಾಪತಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗೋ ಹತ್ಯೆ ನಿಷೇಧ ಮಸೂದೆಯನ್ನು ಪರಿಷತ್ ನಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಬಿಜೆಪಿ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಪರಿಷತ್ ಕಲಾಪ ನಡೆಸಲು ಸರ್ಕಾರ ಮುಂದಾಗಿದೆ. ಅದಕ್ಕೂ ಮೊದಲು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಪದಚ್ಯುತಿಗೊಳಿಸಲು ನಿರ್ಧರಿಸಲಾಗಿದೆ.
ಜೆಡಿಎಸ್ ಬೆಂಬಲ ಪಡೆದು ಈ ಕಾರ್ಯ ನೆರವೇರಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.