ಬೆಂಗಳೂರು:
ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ನಿರ್ಧರಿಸಲಾಗಿದ್ದು, ರಾಜ್ಯಪಾಲರಿಗೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇಂದು ತಮ್ಮ ನಿವಾಸದಲ್ಲಿ ಗೋ ಪೂಜೆ ನೆರವೇರಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡುವ ಅಧಿಕಾರ ಸಭಾಪತಿಗಿಲ್ಲ. ಈ ಹಿಂದೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಂಗಳವಾರದವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿಗಳೇ ಇದ್ದರು. ಆದರೂ ಕೂಡ ದಿಢೀರನೆ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದ್ದಾರೆ. ಮಂಗಳವಾರ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಕಳುಹಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಗೋಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ನಿಜಕ್ಕೂ ನಮಗೆಲ್ಲಾ ಹೆಮ್ಮೆ, ಸಂತೋಷ ತಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ದಿಟ್ಟ ನಿರ್ಧಾರ ತೆಗೆದು ಕೊಂಡಿದೆ ಎಂದು ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ ಆಗಿರುವುದು ನಮಗೆಲ್ಲಾ ಸಂತೋಷ ತಂದಿದೆ. ಗೋವನ್ನು ಪೂಜ್ಯ ಮಾತೆಯ ರೀತಿಯ ನೋಡುವ ಲಕ್ಷಾಂತರ ಜನರ ಆಸೆ ಕೂಡ ಇದೇ ಆಗಿದೆ. ಇದೀಗ ಆ ಆಸೆ ನಮ್ಮ ಸರ್ಕಾರದಲ್ಲಿ ನನಸಾಗಿದೆ ಎಂಬ ಸಂತೋಷ ನಮಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ನಲ್ಲೂ ಈ ಮಸೂದೆ ಪಾಸ್ ಆಗುತ್ತದೆ ಎಂಬ ವಿಶ್ವಾಸ ನಮಗಿದೆ. ಚುನಾವಣೆ ದೃಷ್ಟಿಯಿಂದ ಇದನ್ನು ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು ನಡೆದುಕೊಂಡಿದ್ದೇವೆ. ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿರುವುದು ಬಿಜೆಪಿಯ ಹೆಗ್ಗಳಿಕೆ. ಕಾಂಗ್ರೆಸ್ ಗೆ ಮಾಡಲು ಈಗ ಯಾವುದೇ ಕೆಲಸವಿಲ್ಲ. ಅದಕ್ಕಾಗಿ ಅನವಶ್ಯಕವಾಗಿ ಆರೋಪ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆ ಇದು ಇವತ್ತಿನದ್ದಲ್ಲ, ಹಲವು ವರ್ಷಗಳಿಂದ ಇರುವ ಕೂಗಾಗಿದೆ. ಇದೀಗ ಈ ಕೂಗಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಪಂದನೆ ನೀಡಿದೆ ಎಂದು ಹೇಳಿದರು.