ಶಿವಮೊಗ್ಗ:
ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ- ನ್ಯಾಮತಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಅವರು, ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ 7.17 ಲಕ್ಷ ರೂ.ಗಳ ನೆರವು ನೀಡಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿರುವ ಮೃತ ಹರ್ಷನ ತಂದೆ, ತಾಯಿ, ಹಾಗೂ ಸಹೋದರಿಯರನ್ನು ಮನೆಯಲ್ಲಿ ಖುದ್ದು ಭೇಟಿಯಾಗಿ ಪರಿಹಾರ ಮೊತ್ತದ ಚಕ್ ಅನ್ನು ಹಸ್ತಾಂತರ ಮಾಡಿದರು.
ರೇಣುಕಾಚಾರ್ಯ ಅವರು, ವೈಯಕ್ತಿಕವಾಗಿ 5 ಲಕ್ಷ, ಹೊನ್ನಾಳಿ- ನ್ಯಾಮತಿ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ 1.17 ಲಕ್ಷ , ಹಾಗೂ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ತಲಾ 1 ಲಕ್ಷ ಮೊತ್ತದ ಚಕ್ ಗಳನ್ನು ಕುಟುಂಬದವರಿಗೆ ನೀಡಿ ಸಾಂತ್ವನ ಹೇಳಿದರು.
ಹರ್ಷ ಈ ದೇಶ ಮತ್ತು ಸಮಾಜಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಆತನ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ.ನಾವು ಸಾವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಂಬನಿ ಮಿಡಿದರು.
ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದು ಕೊಂಡಿರುವವರಿಗೆ ಇದೊಂದು ಅಲ್ಪಕಾಣಿಕೆ. ಅವರ ಕುಟುಂಬದವರ ನೆರವಿಗೆ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಹಿಂದೂ ಸಾಮ್ರಾಜ್ಯದ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಹರ್ಷ ಸಾವನ್ನು ನಮ್ಮ ಸರ್ಕಾರ ವ್ಯರ್ಥವಾಗಲು ಬಿಡುವುದಿಲ್ಲ. ಕುಟುಂಬದವರ ಕೋರಿಕೆಯಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಸರಕಾರವು ಸಮಾಜದಲ್ಲಿ ಸೌಹಾರ್ದ ಸ್ಥಾಪನೆಗೆ ಬದ್ಧವಾಗಿದೆ. ನಾಗರಿಕ ಸಮಾಜದಲ್ಲಿ ವಾದ-ವಿವಾದಗಳು ಸಹಜ. ಆದರೆ ಶಿವಮೊಗ್ಗದಲ್ಲಿ ನಡೆದಿರುವುದು ಬರ್ಬರ ಮತ್ತು ಅಮಾನವೀಯ ಘಟನೆಯಾಗಿದೆ ಎಂದು ರೇಣುಕಾಚಾರ್ಯ ಅವರು ಖಂಡಿಸಿದರು.
ವೈಯಕ್ತಿಕವಾಗಿ ₹5 ಲಕ್ಷ, ಬಿಜೆಪಿ ಹೊನ್ನಾಳಿ-ನ್ಯಾಮತಿ ಮಂಡಲ ದಿಂದ ₹1 ಲಕ್ಷ, ಬ್ಯಾಡಗಿ ಶಾಸಕ ಬಳ್ಳಾರಿ ವಿರೂಪಾಕ್ಷಪ್ಪ ನವರು ವೈಯಕ್ತಿಕವಾಗಿ ₹1 ಲಕ್ಷ, ಸಂಘದ ಸ್ವಯಂಸೇವಕ ವಾದಿರಾಜ್ ₹12 ಸಾವಿರ ಹಾಗು ಬಿಜೆಪಿ ಯುವ ಮುಖಂಡ ಪೈಲ್ವಾನ್ ಸೋಮು ₹5 ಸಾವಿರ ರೂ ಸೇರಿದಂತೆ ಒಟ್ಟು ₹7,17,000/- ರೂ ನೀಡಲಾಯಿತು pic.twitter.com/mtJLwF6v6g
— M P Renukacharya (@MPRBJP) February 24, 2022
ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಘಟನೆ ನಡೆದ ಎರಡೇ ದಿನಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಬಂಧಿತರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.
ಸಮಾಜವಿರೋಧಿ ಶಕ್ತಿಗಳನ್ನು ಸರಕಾರವು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲಿದೆ. ಈ ಘಟನೆಯ ಹಿಂದೆ ಯಾರಾರಿದ್ದಾರೆ ಮತ್ತು ಯಾವ್ಯಾವ ಸಂಘಟನೆಗಳ ಕುಮ್ಮಕ್ಕಿದೆ ಎನ್ನುವುದನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು’ ಎಂದು ತಿಳಿಸಿದ್ದಾರೆ.
ಮೂಲಭೂತವಾದಿಗಳು ಹರ್ಷನಂತಹ ಒಬ್ಬ ಸೇವಾ ಮನೋಭಾವದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದ್ದಾರೆ. ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗದಲ್ಲಿ ನಡೆದಿರುವ ಹೇಯ ಕೃತ್ಯವನ್ನು ಸಂವೇದನಾಶೀಲರೆಲ್ಲ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.