ಕಾಂಗ್ರೆಸ್ ನ ಶಾಸಕರು ದುಡ್ಡಿನ ಆಸೆಗೆ ಬಲಿಯಾಗುವುದಿಲ್ಲ
ಹುಬ್ಬಳ್ಳಿ , ಆಗಸ್ಟ್ 30 : ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ನ ಶಾಸಕರು ದುಡ್ಡಿನ ಆಸೆಗೆ ಎಂದೂ ಬಲಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭವಲ್ಲ: ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ಗೆ ಬಿಜೆಪಿಯವರು ಕೈಹಾಕಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ನಿಜ ಎಂದು ಗಣಿಗ ಶಾಸಕರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಎಂದಿಗೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಾರದೇ, ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ 2008, 2018 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರು ,ಇಂತಹ ಪ್ರಯತ್ನಕ್ಕೆ ಈಗಲೂ ಕೈಹಾಕಿದ್ದು, 136 ಶಾಸಕರ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭದ ಮಾತಲ್ಲ ಎಂದರು.
ಸಿದ್ದರಾಮಯ್ಯನವರ ಮೇಲೆ ಮಾತ್ರ ಇಂತಹ ಪಿತೂರಿ ನಡೆಯುತ್ತಿರುವ ಕಾರಣವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೆರಡೂ ಸೇರಿ , ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಬಾಕಿ ಪ್ರಕರಣಗಳಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಲು ರಾಜ್ಯಪಾಲರಿಗೆ ಒತ್ತಾಯ: ಮುಡಾ ಪ್ರಕರಣದಲ್ಲಿ ಸಿಎಂ ಅವರು ರಾಜಿನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ತಿಳಿಸಿದರು ಎಂದು ರಾಜಿನಾಮೆ ನೀಡಲು ಸಾಧ್ಯವೇ ? ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಆದೇಶವನ್ನು ನಿರೀಕ್ಷಿಸಲಾಗಿದೆ. ನಾಳೆ ಸರ್ಕಾರದ ಎಲ್ಲ ಸಚಿವರು, ಎಂ ಎಲ್ ಎಗಳು, ಎಂಎಲ್ ಸಿ ಗಳು ರಾಜ್ಯಪಾಲರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ,ಜನಾರ್ಧನ ರೆಡ್ಡಿ ನಿರಾಣಿ ಮೇಲಿನ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರನ್ನು ಒತ್ತಾಯಿಸಲಿದ್ದಾರೆ. ಇವರೆಲ್ಲರ ಪ್ರಕರಣಗಳಲ್ಲಿ ವಿಚಾರಣೆಯಾಗಿ ಚಾರ್ಜುಶೀಟ್ ಹಾಕುವ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಅನುಮತಿ ಬಾಕಿ ಇದೆ ಎಂದು ತಿಳಿಸಿದರು.