ಬೆಂಗಳೂರು: ಚಿಲ್ಲರೆ ಕೊಡಿ ಸರ್ ಎಂದು ಬಸ್ ಕಂಡಕ್ಟರ್ ಹೇಳಿದಾಗ ಚಿಲ್ಲರೆ ಇಲ್ಲ ಸರ್ ಎಂದು ಪ್ರಯಾಣಿಕರು ಹೇಳುತ್ತಾರೆ. ಬೆಳಗ್ಗೆ ಬೆಳಗ್ಗೆ ನಾನು ಎಲ್ಲಿಂದ ಚಿಲ್ಲರೆ ಕೊಡಲಿ ಅಂತ ಕಂಡೆಕ್ಟರ್ ಅವರ ಪ್ರತ್ಯುತ್ತರ ನೀಡುತ್ತಾರೆ. ಹೀಗೆ ಆರಂಭವಾಗುವ ಚಿಲ್ಲರೆ ಜಟಾಪಟಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬಿಎಂಟಿಸಿ (BMTC), ಆನ್ಲೈನ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಕೊರೋನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಂತರ ಅನೇಕ ಸಮಸ್ಯೆಗಳು ಕಂಡುಬಂದು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಜಾರಿ ಮಾಡಲು ಬಿಎಂಟಿಸಿ ಮುಂದಾಗಿದೆ. ಬಿಎಂಟಿಸಿ ಬಹುತೇಕ ಬಸ್ ನಿರ್ವಾಹಕರಿಗೆ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ETM) ನೀಡಲಾಗುತ್ತಿದ್ದು, ಇದಕ್ಕೆ ಏಕೀಕೃತ ಪಾವತಿ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ಟಿಕೆಟ್ಗಾಗಿ ಆನ್ಲೈನ್ ಮೂಲಕ (Google Pay, Phonepe) ಹಣ ಪಾವತಿಸಬಹುದು.
ಬಿಎಂಟಿಸಿ ಅಧಿಕಾರಿಗಳು ಏಕೀಕೃತ ಪಾವತಿ ವ್ಯವಸ್ಥೆ (UPI) ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಮೂಲಕ ಪಾವತಿ ಮಾಡುವ ಟಿಕೆಟ್ ಯಂತ್ರಗಳನ್ನು ಅಳವಡಿಸುತ್ತಿದ್ದಾರೆ. ಈಗಾಗಲೇ ಪ್ರಯೋಗಿಕವಾಗಿ ಆ್ಯಂಡ್ರಾಯ್ಡ್ ತಂತ್ರಜ್ಞಾನದ 1,500 ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ನಿಗಮವು ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡುವ 8,000 ಹೊಸ ಇಟಿಎಂಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ ಸೂರ್ಯ ಸೇನ್ ಹೇಳಿದ್ದಾರೆ.
ಪಾವತಿ ವ್ಯವಸ್ಥೆ ಹೇಗೆ?
ಆ್ಯಂಡ್ರಾಯ್ಡ್ ತಂತ್ರಜ್ಞಾನವನ್ನು ಹೊಂದಿರುವ ಹೊಸ ಟಿಕೆಟ್ ಯಂತ್ರವು ಟಚ್ ಸ್ಕ್ರೀನ್ ಆಗಿದೆ. ಟಿಕೆಟ್ ಕೊಡುವುದು ಮಾತ್ರವಲ್ಲದೆ ವೈಫೈ ಕನೆಕ್ಟ್, ಯುಪಿಐ ಕ್ಯುಆರ್ ಕೋಡ್ ಪ್ರದರ್ಶನ ಸೌಲಭ್ಯ ಒಳಗೊಂಡಿದೆ. ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ನಿಲ್ದಾಣದ ಹೆಸರನ್ನು ಯಂತ್ರದಲ್ಲಿ ನಮೂದಿಸಿದರೆ ದರ ತೋರಿಸಲಿದೆ. ಮುಂದುವರಿದಾಗ ನಗದು ಮತ್ತು ಯುಪಿಐ ಪಾವತಿ ಎಂಬ ಎರಡು ಆಯ್ಕೆಗಳು ಸ್ಕ್ರೀನ್ ಮೇಲೆ ತೋರಿಸುತ್ತದೆ. ಯುಪಿಐ ಆಯ್ಕೆ ಮಾಡಿದರೆ ಸ್ಕ್ರೀನ್ ಮೇಲೆ ಬಾರ್ಕೋಡು ಬರುತ್ತದೆ. ಪ್ರಯಾಣಿಕರು ಗೂಗಲ್ ಪೇ ಅಥವಾ ಫೋನ್ಪೇ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಹಣ ಪಾವತಿಯಾಗುತ್ತಿದ್ದಂತೆ ಆ್ಯಂಡ್ರಾಯ್ಡ್ ತಂತ್ರಜ್ಞಾನ ಆಧಾರಿತ ಯಂತ್ರದಿಂದ ಟಿಕೆಟ್ ಬರಲಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ