ಬೆಂಗಳೂರು:
ಕೃಷಿ, ಉದ್ಯೋಗ ಸೃಷ್ಟಿ, ಶಿಕ್ಷಣದ ಬಲವರ್ಧನೆ ಮತ್ತು ಆರೋಗ್ಯಸೇವೆಗಳ ವಿಸ್ತರಣೆಗೆ ವಿಶೇಷ ಒತ್ತು ನೀಡಿರುವ ಬಜೆಟ್ ಇದಾಗಿದೆ. ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೇಕಾಗುವ ರಚನಾತ್ಮಕ ಕಾರ್ಯಕ್ರಮಗಳನ್ನು ಘೋಷಿಸಿರುವುದು ದಿಟ್ಟ ಕ್ರಮವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬಜೆಟ್ ಮಂಡನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯದ ಸಮತೋಲಿತ ಅಭಿವೃದ್ಧಿಗೆ ದೂರದೃಷ್ಟಿಯುಳ್ಳ ಯೋಜನೆಗಳು ಮತ್ತು ಉಪಕ್ರಮಗಳು ಮುಖ್ಯ. ಈ ನಿಟ್ಟಿನಲ್ಲಿ ಬೊಮ್ಮಾಯಿ ಗಮನ ಹರಿಸಿರುವುದು ನಿಚ್ಚಳವಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನಿರುದ್ಯೋಗದಂತಹ ಸಮಸ್ಯೆಗಳು ನಿವಾರಣೆಯಾಗಲಿವೆ’ ಎಂದರು.
ಮೇಕೆದಾಟು ಯೋಜನೆಯ ಜಾರಿಗೆ ಮಾನ್ಯ ಮುಖ್ಯಮಂತ್ರಿ @BSBommai ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದ್ದು ನಮ್ಮ ಅವಧಿಯಲ್ಲೇ ಯೋಜನೆ ಅನುಷ್ಠಾನವಾಗಲಿದೆ.
— Dr. Ashwathnarayan C. N. (@drashwathcn) March 4, 2022
ಮೇಕೆದಾಟು ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದ್ದೇವೆ. ನೆಲ-ಜಲದ ವಿಚಾರಗಳಲ್ಲಿ ಸದಾ ನಾಡಿನ ಪರ ನಿಲ್ಲುತ್ತಿದೆ ನಮ್ಮ @BJP4Karnataka ಸರ್ಕಾರ.#ಜನಸಾಮಾನ್ಯರಬಜೆಟ್ pic.twitter.com/tAIaTE6wGj
ಮೇಕೆದಾಟು ಯೋಜನೆಗೆ ಬಿಜೆಪಿ ಸರಕಾರ ಮೊದಲಿನಿಂದಲೂ ಬದ್ಧವಾಗಿದೆ. ಇದಕ್ಕೆ ತಕ್ಕಂತೆ, ಬಜೆಟ್ಟಿನಲ್ಲಿ 1 ಸಾವಿರ ಕೋಟಿ ಕೊಡಲಾಗಿದೆ. ಜೊತೆಗೆ, ರಾಮನಗರವನ್ನು ಹೆಲ್ತ್ ಸಿಟಿಯಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಸಂಕಲ್ಪವಾಗಿದೆ. ಇದಕ್ಕಾಗಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ 600 ಕೋಟಿ ರೂ. ಕೊಟ್ಟಿರುವುದು ಜಿಲ್ಲೆಗೆ ಸ್ಥಳೀಯ ಮಟ್ಟದಲ್ಲೂ ಲಾಭವನ್ನು ತಂದುಕೊಡಲಿದೆ ಎಂದರು.
ಚನ್ನಪಟ್ಟಣವನ್ನು ಆಟಿಕೆಗಳ ಮೈಕ್ರೋ ಕ್ಲಸ್ಟರ್ ಆಗಿ ಘೋಷಿಸಿರುವುದು ಸಕಾರಾತ್ಮಕ ಹೆಜ್ಜೆಯಾಗಿದೆ. ಇದರಿಂದಾಗಿ ಸ್ಥಳೀಯ ಪ್ರತಿಭಾವಂತರಿಗೆ ಮಾರುಕಟ್ಟೆ ಸೃಷ್ಟಿಯಾಗಲಿದೆ. ಎಂದು ಅವರು ನುಡಿದರು.
ರಾಜ್ಯದ ಸಮಗ್ರ ಅಭಿವೃದ್ಧಿಯ ಜತೆ ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ ಹಾಗೂ ಮೂಲಸೌಕರ್ಯಗಳಿಗೆ ಒತ್ತು ನೀಡುವ ಬಜೆಟ್ ಮಂಡಿಸಿದ ಮುಖ್ಯಮಂತ್ರಿ @BSBommai ಅವರಿಗೆ ಅಭಿನಂದನೆಗಳು.
— Dr. Ashwathnarayan C. N. (@drashwathcn) March 4, 2022
ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವ ದೂರದೃಷ್ಟಿಯುಳ್ಳ ಸರ್ವವ್ಯಾಪಿ, ಸರ್ವಸ್ಪರ್ಶಿ, ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್ ಇದಾಗಿದೆ.#ಜನಸಾಮಾನ್ಯರಬಜೆಟ್
ನೂತನ ಮಾದರಿಯ 7 ವಿ.ವಿ.ಗಳ ಸ್ಥಾಪನೆ, ಆಯ್ದ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ತರಬೇತಿ ವ್ಯವಸ್ಥೆ, ಬೆಳಗಾವಿ, ಮೈಸೂರುಗಳಲ್ಲಿ ತಾಂತ್ರಿಕ ಸೌಲಭ್ಯಗಳು, ಎಫ್ಎಂಸಿಜಿ ವಲಯದಲ್ಲಿ ಧಾರವಾಡವನ್ನು ಒಂದು ಕ್ಲಸ್ಟರ್ ಆಗಿ ಘೋಷಿಸಿರುವುದು, ಮೈಸೂರು-ಹುಬ್ಬಳ್ಳಿ-ಮಂಗಳೂರು ಕ್ಲಸ್ಟರ್ ಗಳಿಗೆ ಹೆಚ್ಚಿನ ಹಣ ಒದಗಿಸಲಾಗಿದೆ. ಇದರಿಂದ ಎರಡನೇ ಹಂತದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಅಲ್ಲದೆ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅವರು ವಿಶ್ಲೇಷಿಸಿದರು.
ಈ ವರ್ಷವನ್ನು `ಜೀವನೋಪಾಯ ವರ್ಷ’ವಾಗಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಮಹಿಳೆಯರು ಮತ್ತು ಹಿಂದುಳಿದವರ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ. 1 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಬಜೆಟ್ಟಿನಲ್ಲಿ ಘೋಷಿಸಿರುವಂತೆ ಅಂತಿಮ ರೂಪ ಕೊಡಲಾಗುವುದು. ಇದು, ಈ ಮಹಿಳೆಯರು ವರ್ಷಕ್ಕೆ ಕನಿಷ್ಠ 1 ಲಕ್ಷ ರೂ.ಗಳಷ್ಟಾದರೂ ಆದಾಯ ಹೊಂದಬೇಕು ಎನ್ನುವ ಗುರಿಯ ಹಾದಿಯಲ್ಲಿ ಇಟ್ಟ ಹೆಜ್ಜೆಯಾಗಿದೆ ಎಂದು ಅಶ್ವತ್ಥನಾರಾಯಣ ವ್ಯಾಖ್ಯಾನಿಸಿದ್ದಾರೆ.