Home ಬೆಂಗಳೂರು ನಗರ ನಾಡಿನ ಜನತೆಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ಅಭಿವೃದ್ಧಿಪರ ಬಜೆಟ್: ಕಾರಜೋಳ

ನಾಡಿನ ಜನತೆಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ಅಭಿವೃದ್ಧಿಪರ ಬಜೆಟ್: ಕಾರಜೋಳ

39
0
Developmental budget to bring positive change in lives of people of Karnataka : Karjol

ಬೆಂಗಳೂರು:

“ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ತುಂಬುವ ಗಟ್ಟಿ ಧ್ವನಿ” ಈ ಮುಂಗಡ ಪತ್ರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಇಂದಿನ ಮುಂಗಡ ಪತ್ರ ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗ್ರಾಮೀಣ ಕರ್ನಾಟಕದ ಉದ್ಯಮಗಳಾದ ಹೈನೋದ್ಯಮ, ಮತ್ಸ್ಯೋದ್ಯಮ ಮುಂತಾದ ಉದ್ಯಮಗಳ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾದ ಈ ಮುಂಗಡ ಪತ್ರ ನಾಡಿನ ಅಭಿವೃದ್ಧಿಯ ಗತಿಯನ್ನು ಚಲನಶೀಲಗೊಳಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಾಮಾನ್ಯ ಪ್ರಜೆಗಳನ್ನು ಗಮನದಲ್ಲಿಟ್ಟು ಮಂಡಿಸಿದೆ ಬಜೆಟ್. ರಾಜ್ಯದ ಮಹತ್ವದ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿರುವುದರಿಂದ ಈ ಯೋಜನೆ ಸಾಕಾರಗೊಳ್ಳಲು ದಾಪುಗಾಲನ್ನಿಡಲಾಗಿದೆ. ಪಶ್ಚಿಮವಾಹಿನಿಗಳ ತಿರುವು ಯೋಜನೆ, ರಾಜ್ಯದಲ್ಲಿ ನೀರಿನ ಕೊರತೆ ನೀಗಿಸಿ, ಬರ ಸಂಭವನೀಯ ಪ್ರದೇಶಕ್ಕೆ ನೀರುಣಿಸುತ್ತದೆ.

ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಾದ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಮುಂಗಡ ಪತ್ರದ ಬೆಂಬಲ ನೀಡುವ ಮೂಲಕ ನಮ್ಮ ಸರ್ಕಾರ ಈ ಯೋಜನೆಗಳಿಗೆ ತನ್ನ ಬದ್ದತೆಯನ್ನು ಪ್ರತಿಬಿಂಬಿಸಿದೆ. ಕುಡಿಯುವ ನೀರು ಮತ್ತು ನೀರಾವರಿ ಅಂತರ್ಜಲ ವೃದ್ಧಿಗೆ ಸಮಾನ ಆದ್ಯತೆ ನೀಡಿರುವ ಸರ್ಕಾರ, ಸರ್ವಾಂಗೀಣ ಕೃಷಿ ಚಟುವಟಿಕೆಗೆ ಇಂಬು ನೀಡಿದೆ ಎಂದು ವಿವರಿಸಿದ್ದಾರೆ.

ದಲಿತರು, ಹಿಂದುಳಿದ ವರ್ಗದವರು ಮತ್ತು ಇತರ ದುರ್ಬಲ ವರ್ಗದವರ ಸಮಗ್ರ ಅಭಿವೃದ್ಧಿಗೆ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಕೃಷಿ ಮತ್ತು ನೀರಾವರಿ ವಲಯಕ್ಕೆ ನೀಡಿರುವ ಆದ್ಯತೆ, ರಾಜ್ಯದ ಗ್ರಾಮೀಣ ರೈತರ/ನಾಗರೀಕರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಸೂಕ್ತ ವಾತಾವರಣ ನಿರ್ಮಿಸುತ್ತದೆ. ಕೃಷ್ಣಾ, ಮಹದಾಯಿ, ಕಾವೇರಿ, ಮೇಕೆದಾಟು ಯೋಜನೆಗಳಿಗೆ ಆದ್ಯತೆ ನೀಡಿದೆ. ನೀರಾವರಿ ಯೋಜನೆಗಳಿಗೆ ರೂ.21,000 ಕೋಟಿ ರೂಪಾಯಿಯ ಅನುದಾನ ಒದಗಿಸಲಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ಮುಂಗಡ ಪತ್ರ ಬೆಂಬಲ ದೊರಕಿರುವುದು ಇದೇ ಮೊದಲು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಉತ್ತೇಜನ ಯೋಜನೆ (AIBP) ಅಡಿ ದೊರಕುವ ನೆರವು ಹೊರತುಪಡಿಸಿ ರಾಜ್ಯದ ನೀರಾವರಿ ಯೋಜನೆಗಳಿಗೆ ಈ ನೆರವು/ಅನುದಾನ ದೊರಕಿದೆ. ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಉತ್ತೇಜನ ನೀಡುವ ಮೂಲಕ ರೈತರ ಬಾಳನ್ನು ಹಸನುಗೊಳಿಸುವ ಸಂಕಲ್ಪವನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

LEAVE A REPLY

Please enter your comment!
Please enter your name here