Home ರಾಜಕೀಯ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

34
0
Former CM Kumaraswamy accuses BJP of raising emotive issues
Advertisement
bengaluru

ರಾಜ್ಯದ ಅಶಾಂತಿಕಾಂಡಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಕಾರಣ ಎಂದು ದೂರಿದ ಮಾಜಿ ಮುಖ್ಯಮಂತ್ರಿ

ಬೊಮ್ಮಾಯಿ ಸರಕಾರ ಯಾವುದೂ ರಿಮೋಟ್ ನಿಯಂತ್ರಣದಲ್ಲಿದೆ

  • ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಎದುರಿಸುವ ಶಕ್ತಿ ಇಲ್ಲ
  • ರಾಜ್ಯಕ್ಕೆ ಈ ದುಸ್ಥಿತಿ ಬರಲು ಸಿದ್ದರಾಮಯ್ಯ ಕಾರಣ
  • ಹನುಮ ಜಯಂತಿ ದಿನ ನಮ್ಮ ಹೋರಾಟ ಶುರು
  • ಕಾಶ್ಮೀರ್ ಫೈಲ್ ಇರಲಿ, ಬಾಕಿ ಬಿದ್ದ ಜನರ ಫೈಲ್ ಗಳಿಗೆ ವಿನಾಯಿತಿ ಕೊಡಿ
  • ಬೆಲೆ ಏರಿಕೆ ವಿರೋಧಿ ಹೋರಾಟಕ್ಕೆ ಬನ್ನಿ: ಹಿಂದೂ ಸಂಘಟನೆಗಳಿಗೆ ಸವಾಲು

ಬೆಂಗಳೂರು:

ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಬೆಳವಣಿಗೆಗಳಿಗೆ ಬಿಜೆಪಿ ಎಷ್ಟು ಕಾರಣವೋ ಕಾಂಗ್ರೆಸ್ ಪಕ್ಷವೂ ಅಷ್ಟೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದರಿಂದ ಇಂಥ ಪರಿಸ್ಥಿತಿ ಉದ್ಭವಿಸಿದೆ. ಅಂಥ ಸರಕಾರ ಬರಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ಎಂದರು.

bengaluru bengaluru

ಬಸವರಾಜ ಬೊಮ್ಮಾಯಿ ಅವರ ಸರಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ಯಾವುದೋ ರಿಮೋಟ್ ಕಂಟ್ರೋಲ್ ಸರಕಾರವನ್ನು ನಿಯಂತ್ರಣ ಮಾಡುತ್ತಿದೆ. ಅದು ಆರ್‌ಎಸ್‌ಎಸ್ ರಿಮೋಟ್ ನಲ್ಲೇ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.

ಅಲ್ಲದೆ, ಬಿಜೆಪಿ ಹಾಗೂ ಅದರ ಅಂಗಸಂಸ್ಥೆಗಳಿಗಿಂತ ನಾವೇ ಹೆಚ್ಚು ಧರ್ಮವನ್ನು ನಂಬುತ್ತೇವೆ. ಮುಂಬರುವ ಹನುಮ ಜಯಂತಿಯಂದೇ ನಮ್ಮ ಹೋರಾಟ ಶುರುವಾಗುತ್ತದೆ ಎಂದು ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.

ನಾವು ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡ ಅಸ್ಮಿತೆ ಇಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ನಾನೇನು ಸಮಾಜ ಬದಲಾವಣೆಯ ಪರಿವರ್ತಕನಲ್ಲ. ನಾನು ಓಟ್ ಬ್ಯಾಂಕ್ ಗಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಎಲ್ಲಿ ಅನ್ಯಾಯ ಆಗುತ್ತದೆಯೋ ಅಲ್ಲಿ ದನಿ ಎತ್ತುತ್ತೇನೆ. ನಾವು ಬೆಂದ ಮನೆಯಲ್ಲಿ ಗಳ ಇರಿಯೋರಲ್ಲ. ಮತ‌ ಪಡೆಯುವ ಸಲುವಾಗಿ ಹಿಂದೂ ಅಂತಾ ಹೇಳುತ್ತಾರೆ. ಅಧಿಕಾರದ ಸುಪ್ಪತ್ತಿಗೆಗಾಗಿ‌‌ ಕಂದಾಚಾರ ಮಾಡುತ್ತಿರೋರು ಬಿಜೆಪಿಯವರು ಎಂದು ಕುಮಾರಸ್ವಾಮಿ ಅವರು ಬಿಜೆಪಿ ಮೇಲೆ ಟೀಕಾ ಪ್ರಹಾರ ನಡೆಸಿದರು.

ಕಡತಗಳಿಗೆ ವಿನಾಯಿತಿ ಕೊಡಲಿ:

ಕಾಶ್ಮೀರ್ ಫೈಲ್ ಸಿನಿಮಾಗೆ ತೆರಿಗೆ ವಿನಾಯಿತಿ‌ ಕೊಟ್ಟಿದ್ದಾರೆ. ಆದರೆ, ಮಂತ್ರಿಗಳ ಕಚೇರಿಗಳಲ್ಲಿ ಅಸಂಖ್ಯಾತ ಫೈಲ್ ಗಳು ಕೊಳೆಯುತ್ತ ಬಿದ್ದಿವೆ. ಮೋಕ್ಷಕ್ಕಾಗಿ ಕಾಯುತ್ತಿವೆ. ಮೊದಲು ಸರಕಾರ ಇವಕ್ಕೆ ವಿನಾಯಿತಿ ಕೊಡಲಿ. ಅದು ಬಿಟ್ಟು ಜನರ ಜೊತೆ ಚೆಲ್ಲಾಟವಾಡುವುದನ್ನ ನಿಲ್ಲಿಸಿ ಎಂದು ಸರಕಾರಕ್ಕೆ ತಾಕೀತು ಮಾಡಿದರು.

ಕಡಗಳನ್ನು ವಿಲೇವಾರಿ ಮಾಡುವುದು ಬಿಟ್ಟು ಹಲಾಲ್, ಜಟ್ಕಾ ಅಂತಾ ಹಿಡಿದುಕೊಂಡು ಕುಳಿತಿದ್ದಾರೆ. ಅದನ್ನು ನೋಡಿಕೊಂಡು ಅಧಿಕೃತ ಪ್ರತಿಪಕ್ಷ ಸುಮ್ಮನೆ ಕೂತಿದೆ. ಕಾಂಗ್ರೆಸ್ ರೀತಿ ನಾವು ಅಂಜಿಕೊಂಡು ಕುಳಿತುಕೊಂಡಿಲ್ಲ. ಕಾಂಗ್ರೆಸ್ ನಾಯಕರು ನನ್ನಷ್ಟು ನೇರ ನಿಷ್ಟರವಾಗಿ ಮಾತನಾಡಿದ್ದಾರಾ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಹಲಾಲ್ ಹಾಲಾಹಲ ಸೃಷ್ಟಿ ಮಾಡಿದರು. ಪರಿಣಾಮವಾಗಿ ಮುಸ್ಲಿಮರು ಕುರಿ ಖರೀದಿಗೆ ಬರಲಿಲ್ಲ. ಸಾಕಿದ ಕುರಿಗಳನ್ನು ಮಾರಲಾಗದೇ ರೈತರು ನಷ್ಟ ಹೋಗಿ ಈ ಸಂಘಟನೆಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ವಿಶ್ವಹಿಂದೂ ಪರಿಷತ್, ಭಜರಂಗ ದಳದವರು ದೇಶ ಉದ್ಧಾರ ಮಾಡುವವರಲ್ಲ. ರೈತರು ನಿಜವಾದ ದೇಶದ ಉದ್ಧಾರಕರು. ರೈತರು ಕಷ್ಟದಲ್ಲಿರುವಾಗ ಯಾವ ವಿಶ್ವಹಿಂದೂ ಪರಿಷತ್, ಭಜರಂಗ ದಳದವರು ಬಂದಿದ್ದಾರಾ? ಈಗ ರೈತರು ಕಷ್ಟದಲ್ಲಿದ್ದಾರೆ. ಹೋರಾಟಕ್ಕೆ ಇವರೂ ಬರಲಿ. ನಾನೂ ಅವರ ಜತೆ ಕೈ ಜೋಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು ಕುಮಾರಸ್ವಾಮಿ.

ನಾನೇನು ವಚನ ಭ್ರಷ್ಟನಾಗಲಿಲ್ಲ. ಏಳು ದಿನ ಅಧಿಕಾರ‌ ಕೊಟ್ಡರೂ ಅವರು ಉಳಿಸಿಕೊಳ್ಳಲಿಲ್ಲ. ಈಗ ಸುಖಾಸುಮ್ಮನೆ ದೂರುತ್ತಿದ್ದಾರೆ. ನಾನು ಬಿಜೆಪಿ ಜತೆ ಸರ್ಕಾರ ರಚಿಸಿದಾಗ ಕೋಮುಗಲಭೆಗೆ ಅವಕಾಶ ಕೊಟ್ಟಿದ್ದೆನಾ? ಇಲ್ಲ. ಬಿಜೆಪಿಯವರು ಆಗ ಸುಮ್ಮನಿದ್ದರು. ಗಾಳಿಪಟ ಸಿಎಂ, ಲಕ್ಕಿ ಡಿಪ್ ಸಿಎಂ ಎನ್ನುವ ನಾಯಕನಿಗೆ ಇರುವ ಶಕ್ತಿ ಅದು. ಕಾಂಗ್ರೆಸ್ ನಾಯಕರಿಗೆ ಧ್ವನಿಯೇ ಇಲ್ಲ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಚಾಟಿ ಬೀಸಿದರು.

ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ:

ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಪಲಾಯನವಾದ ಮಾಡಿದವರೇ ಕಾಂಗ್ರೆಸ್ ನವರು. ನಾವು ಗೋಹತ್ಯೆ ಕಾಯ್ದೆಗೆ ಈ ಹಿಂದೆಯೇ ಅಂಕಿತ ಹಾಕಬಾರದು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೆವು. ಗೋಹತ್ಯೆಯ ಓಟ್ ವೇಳೆ ಸದನದಲ್ಲಿ ಬಾವಿಗಿಳಿಯಿರಿ ಎಂದು ನಾವು ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದೇವಾ? ಕಾಂಗ್ರೆಸ್ ನ ತಿಳಿಗೇಡಿತನದಿಂದ ಆಗಿರುವ ಅಪಚಾರ ಅದು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಸದನದಲ್ಲೇ ಕೈ ನಾಯಕರು ಬೆತ್ತಲಾದರು. ಮತಾಂತರ ನಿಷೇಧ ಕಾಯ್ದೆ ರೂಪಿಸಿದ್ದೇ ಸಿದ್ದರಾಮಯ್ಯ ಅವರ ಸರಕಾರ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರೇ ದಾಖಲೆಗಳ ಸಮೇತ ಬಹಿರಂಗ ಮಾಡಿದರು. ಕಾಂಗ್ರೆಸ್ ಮುಖಕ್ಕೆ ಮಂಗಳಾರತಿ ಆಗಿದ್ದು ಸಾಲದಾ? ಅಷ್ಟಾದರೂ ಈ ಎರಡು ಮಸೂದೆಗಳಿಗೆ ಜೆಡಿಎಸ್ ಬೆಂಬಲ ನೀಡಿತು ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಹಿಜಾಬ್, ಹಲಾಲ್ ಬಗ್ಗೆ ಧೈರ್ಯವಾಗಿ ಚರ್ಚಿಸಬೇಕಿತ್ತು ಎಂದು ರಾಹುಲ್ ಗಾಂಧಿ ಮುಂದೆಯೇ ನಾಯಕರು ಹೇಳಿದ್ದಾರೆ. ಆದರೆ ಇದಕ್ಕೆಲ್ಲ ಬೆಂಕಿ ಹಚ್ಚಿಕೊಟ್ಟವರು ಕಾಂಗ್ರೆಸ್ ನವರು. ಬಿಜೆಪಿ ಸರ್ಕಾರ ಬರಲು ಇವರೇ ಕಾರಣ. ನಾವೇನು ಬಿಜೆಪಿಗೆ ಸರ್ಕಾರ ಕೊಟ್ಟಿಲ್ಲ. ಇದಕ್ಕೆ ಕಾಂಗ್ರೆಸ್ ಜನರಿಗೆ ಉತ್ತರ ಹೇಳುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಿಜಾಬ್ ವಿಚಾರ ಬಂದಾಗ ಕಾಂಗ್ರೆಸ್ ನವರು ಮನೆಯಲ್ಲಿ ಸೇರಿಕೊಂಡರು. ಹಿಜಾಬ್ ವಿಚಾರವನ್ನೇ ಮಾತಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ. ಇದು ಓಟ್ ಬ್ಯಾಂಕ್ ರಾಜಕಾರಣ ಅಲ್ಲದೇ ಇನ್ನೇನು? ಮುಸ್ಲಿಮರು ಯಾಕೆ ಕಾಂಗ್ರೆಸ್ ಪಕ್ಷವನ್ನು ನಂಬಬೇಕು? ನಾವು ಈ ವಿಚಾರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಲ್ಪಸಂಖ್ಯಾತರ ನಂಬಿಕೆ ಕಳೆದುಕೊಂಡಿದೆ ಎಂದು ಅವರು ತಿಳಿಸಿದರು.

ನಾನು ಬಿಜೆಪಿ ವಿರುದ್ಧ ಸೆಟೆದು ನಿಂತಿರೋದು ಜನರ ರಕ್ಷಣೆಗಾಗಿ ಅಷ್ಟೇ. ಯಾರನ್ನೂ ಮೆಚ್ಚಿಸಲು ಅಲ್ಲ. ಇಷ್ಟೆಲ್ಲಾ ಆದರೂ ಸರ್ಕಾರ ಜಾಣ ಕಿವುಡಾಗಿದೆ. ಮುಖ್ಯಮಂತ್ರಿ ಮೌನವಾಗಿದ್ದಾರೆ. ಅದನ್ನೇ ಸದರ ಮಾಡಿಕೊಂಡು ಬಿಜೆಪಿ ಸಹ ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಹಾದಿ ಬೀದಿಯಲ್ಲಿ ಬೆಂಕಿ ಹಾಕುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಸರ್ಕಾರ ಏನು ಮಾಡುತ್ತಿದೆ. ಚಿತ್ರನಟ ಚೇತನ್ ಒಂದು ಹೇಳಿಕೆ ಕೊಟ್ಟರು ಅಂತ ಅವರನ್ನು ಜೈಲಿಗೆ ಹಾಕಿದರು. ಇಂತಹ ಅಪಾಯಕಾರಿ ಶಕ್ತಿಗಳನ್ನು ಓಡಾಡಲು ಬಿಟ್ಟಿದ್ದೀರಿ. ಈಗ ಎಲ್ಲಿ ಹೋಯ್ತು ನಿಮ್ಮ ತಾಕತ್ತು? ಎಂದು ಸರಕಾರಕ್ಕೆ ಚಾಟಿ ಬೀಸಿದರು.

ಈಶ್ವರಪ್ಪ ಉತ್ತಮ ಹೇಳಿಕೆ:

ನಿನ್ನೆ ಸಚಿವ ಈಶ್ವರಪ್ಪ ಅವರು ಕಾರ್ಕಳದಲ್ಲಿ ಉತ್ತಮ ಹೇಳಿಕೆ ನೀಡಿದ್ದಾರೆ. ಹಲಾಲ್, ಜಟ್ಕಾ ಕಟ್ ಬಗ್ಗೆ ಹೇಳಿಕೆ ನೀಡಿ, ಯಾರಿಗೆ ಯಾವ ಮಾಂಸ ಬೇಕೋ ಅದನ್ನು ತೆಗೆದುಕೊಳ್ಳಲಿ ಬಿಡಿ ಎಂದಿದ್ದಾರೆ. ಈಗ ಇಂಥ ಹೇಳಿಕೆಗಳು ಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಳೆದ ಒಂದು ತಿಂಗಳಿನಿಂದ ಒಂದಲ್ಲಾ ಒಂದು ವಿವಾದಗಳು ಸೃಷ್ಟಿಯಾಗಿವೆ. ನಾನು ಈ ಹಿಂದೆಯೇ ಬಿಜೆಪಿ ಸಮಾಜದ ಸಾಮರಸ್ಯ ಕೆಡಿಸಲಿದೆ ಎಂದು ಹೇಳಿದ್ದೆ. ಅದರಂತೆ ಬಿಜೆಪಿ ಒಂದೊಂದೇ ಶುರು ಮಾಡಿದೆ. ಹಿಜಾಬ್ ನಿಂದ ಆರಂಭವಾಗಿ ಹಲಾಲ್ ವರೆಗೂ ಬಂದಿದೆ. ಹೊಸದಾಗಿ ಆಜಾನ್ ವಿಷಯವೂ ಬಂದಿದೆ. ಕಾಂಗ್ರೆಸ್ ನಾಯಕರು ಇದರ ಬಗ್ಗೆಯೂ ಮಾತಾನಡಬೇಕಲ್ಲವೇ ಎಂದರು ಅವರು.

ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ:

ಬೆಲೆ ಏರಿಕೆ ದಿನೆ ದಿನೇ ಹೆಚ್ಚುತ್ತಲೇ ಇದೆ. ತೈಲ ಬೆಳೆಗಳು ಪ್ರತಿದಿನವೂ ಹೆಚ್ಚುತ್ತಿದೆ. ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ದರ ಗಗನ ಮುಖಿ ಆಗಿದೆ. ಸಿಮೆಂಟ್, ಕಬ್ಬಿಣದ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಬಗ್ಗೆ ಮಾತನಾಡದ ಹಿಂದೂ ಸಂಘಟನೆಗಳು ಹಿಜಾಬ್, ಹಲಾಲ್ ಬಗ್ಗೆ ಮಾತನಾಡುತ್ತಿವೆ. ಬೆಲೆ ಏರಿಕೆ ವಿರುದ್ಧ ಹೋರಾಟ ಹೋರಾಟ ಮಾಡೋಣ ಬನ್ನಿ, ನಿಮ್ಮ ಜತೆ ನಾನೂ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.

ಸಾಲ ಮಾಡು, ದುಡ್ಡು ಹೊಡಿ, ಎಲೆಕ್ಷನ್ ಮಾಡು ಎನ್ನುವ ನೀತಿಯನ್ನು ಬಿಜೆಪಿ ಪಾಲನೆ ಮಾಡುತ್ತಿದೆ. ಇದು ಹೀಗೆಯೇ ಮುಂದುವರೆದರೆ ಶ್ರೀಲಂಕಾದಲ್ಲಿನ ಹಾಹಾಕಾರ ನಮ್ಮ ದೇಶಕ್ಕೂ, ನಮ್ಮ ರಾಜ್ಯಕ್ಕೂ ಬರುವುದರಲ್ಲಿ ಅನುಮಾನವೇ ಇಲ್ಲ. ಸಾಲ ಮಾಡಿ ಲೂಟಿ ಹೊಡೆಯೋದು ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ತಿರುಗುಬಾಣ ಖಚಿತ:

ನಮ್ಮನ್ನು ಗುಲಾಮರನ್ನಾಗಿ ಇಡಲು ಹೊರಟವರೇ ಹಿಂದೂ ಧರ್ಮ ಅಂತ ಹೇಳಿಕೊಂಡು ಬಂದರು. ಅವರಿಗೆ ಬೇಕಾದಾಗ ಮಾತ್ರ ಹಿಂದೂ ಧರ್ಮ ಬೇಕು ಅಷ್ಟೇ ಎಂದು ಬಿಜೆಪಿ ಮೇಲೆ ಗದಾಪ್ರಹಾರ ನಡೆಸಿದ ಅವರು; ಬಿಜೆಪಿಯವರಿಗೆ ಹೇಳುತ್ತೇನೆ, ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ. ಪೆಟ್ರೋಲಿಯಂ, ಸಿಮೆಂಟ್, ಗ್ಯಾಸ್ ಬೆಲೆ ಏರಿಕೆಯಿಂದ ಜನ ರೊಚ್ಚಿಗೆದ್ದಿದ್ದಾರೆ. ಹಲಾಲ್ ನಂತರ ಈಗ ಅಜಾನ್ ತನಕ ಬಂದಿದ್ದೀರಿ. ಇದು ಹೆಚ್ಚಾದರೆ ನಿಮಗೇ ತಿರುಗು ಬಾಣ ಆಗುತ್ತದೆ. ಎಚ್ಚರವಾಗಿರಿ.

ನನಗೇನೂ ಶಾಕ್ ಆಗಿಲ್ಲ:

ಪಕ್ಷದಿಂದ ಕೆಲವರು ಬಿಟ್ಟು ಹೋಗುತ್ತಿರುವುದರಿಂದ ನನಗೇನೂ ಶಾಕ್ ಆಗಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬಸವರಾಜ ಹೊರಟ್ಟಿ ಅವರ ಹೇಳಿಕೆ ಗಮನಿಸಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಲಿದೆ. ನಾನು ಅದನ್ನು ಎದುರಿಸೋದು ಕಷ್ಟವಾಗಲಿದೆ, ಏನು ಮಾಡಲಿ ಎಂದು ನನ್ನನ್ನು ಕೇಳಿದ್ದರು. ಆಗ ನಮ್ಮಿಂದ ನಿಮ್ಮ ಭವಿಷ್ಯ ಮಸುಕಾಗೋದು ಬೇಡ. ನಿಮ್ಮ ರಾಜಕೀಯ ಭವಿಷ್ಯವನ್ನ ರೂಪಿಸಿಕೊಳ್ಳಿ ಅಂತಾ ಹೇಳಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಮಾಡಿದ್ದು ಬಿಜೆಪಿಗೆ ಹೋಗುವುದಕ್ಕಾ? ಬಿಜೆಪಿಗೆ ಸೇರಲು ಅವರೇ ತೀರ್ಮಾನ ಮಾಡಿರುವಾಗ ನಾನೇನು ಮಾಡಲಿ? ಯಾರೂ ಇಲ್ಲದಿದ್ದರೂ ನಮ್ಮ ಪಕ್ಷ ಉಳಿದಿದೆ. ಅನೇಕ ನಾಯಕರು ಇವತ್ತು ಕಾಂಗ್ರೆಸ್ ಬಿಜೆಪಿಯಲ್ಲಿ ಇದ್ದಾರೆ. ಹೊರಟ್ಟಿ, ಕೋನರೆಡ್ಡಿ ಇದ್ದಾಗ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರಿದ್ದಾಗ ಪಕ್ಷ ಏನು ದೊಡ್ಡದಾಗಿ ಬೆಳೆದಿತ್ತಾ? ಹೊರಟ್ಟಿ ಹೋದರೆ ಇನ್ನೊಬ್ಬರು ಹೊರಟ್ಟಿ ಬರುತ್ತಾರೆ ಎಂದು ಅವರು ಹೇಳಿದರು.

ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳಿಂದಲೂ ಬರುವವರು ಇದ್ದಾರೆ. ಇಬ್ರಾಹಿಂ ಅಷ್ಟೇ ಏಕೆ, ಇನ್ನೂ ಹಲವರು ಬರುವವರು ಇದ್ದಾರೆ. ರೋಷನ್ ಬೇಗ್ ಯಾರು ಬೇಕಾದರೂ ಮುಂದೆ ಬರಬಹುದು. ರಾಷ್ಟ್ರೀಯ ಪಕ್ಷಗಳಿಂದ ಕೂಡ ಬರುವವರು ಇದ್ದಾರೆ.

ನಮ್ಮದು 35-40ಕ್ಕೆ ಮಾತ್ರ ಸೀಮಿತವಾಗುವ ಪಕ್ಷ ಅಲ್ಲ. ನಮ್ಮ ಗುರಿ 123 ಕ್ಷೇತ್ರ. ಅದಕ್ಕೆ ರೋಡ್ ಮ್ಯಾಪ್ ಸಿದ್ಧ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ ಎ ಶರವಣ, ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ ಮುಂತಾದವರು ಹಾಜರಿದ್ದರು.


bengaluru

LEAVE A REPLY

Please enter your comment!
Please enter your name here