Home ಆರೋಗ್ಯ ಭಾನುವಾರ ಬೊಮ್ಮನಹಳ್ಳಿ ಕೋವಿಡ್ ಕೇರ್ ಸೆಂಟರ್ ಆರಂಭ: ಸುರೇಶ್ ಕುಮಾರ್

ಭಾನುವಾರ ಬೊಮ್ಮನಹಳ್ಳಿ ಕೋವಿಡ್ ಕೇರ್ ಸೆಂಟರ್ ಆರಂಭ: ಸುರೇಶ್ ಕುಮಾರ್

43
0

ಬೆಂಗಳೂರು:

ಕೋವಿಡ್ ಎರಡನೇ ಅಲೆ ಪ್ರಸರಣ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸಚಿವರಾದ ಅವರು ಗುರುವಾರ ಬೊಮ್ಮನಹಳ್ಳಿಯ ವಿವಿಧೆಡೆ ಸಂಚರಿಸಿ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಬಿಬಿಎಂಪಿ ವಲಯ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ಎರಡನೇ ಅಲೆ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು.

ಪ್ರತಿ ವಾರ್ಡ್ ಗೆ ಎರಡು ಅಂಬುಲೆನ್ಸ್ ಮತ್ತು ವಿಧಾನಸಭಾ ಕ್ಷೇತ್ರವಾರು ಜೀವರಕ್ಷಕ ಅಂಬುಲೆನ್ಸ್ ಗಳನ್ನು ಬಳಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೆಯೇ ವಲಯದಲ್ಲಿ ಕೋವಿಡ್ ಸೋಂಕು ಅತಿ ಪ್ರಸರಣವಿರುವ ಭಾಗಗಳನ್ನು ಮೈಕ್ರೋ ಕಂಟೈನ್ಮೆಂಟ್ ಜ಼ೋನ್ ಗಳನ್ನಾಗಿ ಗುರುತಿಸಿ ಅಲ್ಲಿ ಹೆಚ್ಚು ಟೆಸ್ಟಿಂಗ್ ಮಾಡುವುದು ಹಾಗೆಯೇ ಕೋವಿಡ್ ಲಸಿಕೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಭಾನುವಾರ ವಲಯದ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಕರೆದು ಮದುವೆಗಳಲ್ಲಿ ಕೋವಿಡ್ ನಿಯಮಗಳಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಅದೇ ದಿನ ವಲಯದ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕ ಮಂಡಳಿಗಳ ಪ್ರತಿನಿಧಿಗಳ ಸಭೆ ಕರೆದು ಕೋವಿಡ್ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಒದಗಿಸಬೇಕಾದ ಹಾಸಿಗೆಗಳನ್ನು ಪಡೆದುಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

Suresh Kumar Covid Meeting Bommanahalli1

ಕೋವಿಡ್ ಟೆಸ್ಟ್ ಫಲಿತಾಂಶಗಳು 24 ಗಂಟೆಯೊಳಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವಲಯದ ಅಪಾರ್ಟ್ ಮೆಂಟ್ಗಳು, ಗಾರ್ಮೆಂಟ್ಸ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚು ಹೆಚ್ಚು ಟೆಸ್ಟಿಂಗ್ ಮಾಡುವುದು ಹಾಗೆಯೇ ಲಸಿಕೆ ಹಾಕುವುದನ್ನು ಹೆಚ್ಚು ತ್ವರಿತಗೊಳಿಸಬೇಕು ಎಂದು ಸಚಿವರು ಹೇಳಿದರು. ಕೋವಿಡ್ ಸೋಂಕು ಪ್ರಸರಣ ತಡೆಗೆ ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕಿದೆ. ಈ ಕುರಿತು ವ್ಯಾಪಕವಾಗಿ ಜನಜಾಗೃತಿ ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.

ಬಿಬಿಎಂಪಿ ವಲಯ ಆಯುಕ್ತ ರಾಜೇಂದ್ರ ಚೋಳನ್, ಜಂಟಿ ಆಯುಕ್ತ ರಾಮಕೃಷ್ಣ, ಡಿಸಿಪಿ ಶ್ರೀನಾಥ ಜೋಷಿ, ಆರೋಗ್ಯಾಧಿಕಾರಿ ಡಾ. ಸುರೇಶ್ ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here