Home ರಾಜಕೀಯ ಜಾತಿಗಣತಿ ವರದಿ : ಒಳಮೀಸಲಾತಿ ಬಗ್ಗೆ ಚರ್ಚಿಸಿ ತೀರ್ಮಾನ – ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿಗಣತಿ ವರದಿ : ಒಳಮೀಸಲಾತಿ ಬಗ್ಗೆ ಚರ್ಚಿಸಿ ತೀರ್ಮಾನ – ಮುಖ್ಯಮಂತ್ರಿ ಸಿದ್ದರಾಮಯ್ಯ

13
0

ಸುಳ್ಳು ಆರೋಪಗಳ ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ

ರಾಯಚೂರು, ಅಕ್ಟೋಬರ್ 5 : ಜಾತಿಗಣತಿಗೆ ಸಂಬಂಧಿಸಿದಂತೆ , ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಆದೇಶವಾಗಿದ್ದು, ಒಳ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ವಿರೋಧವಿಲ್ಲ. ಆದರೆ ಇದರ ಬಗ್ಗೆಯೂ ವರಿಷ್ಠರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಪ್ರಕಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಜಾತಿ ಗಣತಿ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೇಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವರದಿಯಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ

ರಾಜ್ಯದ ಕಾಂಗ್ರೆಸ್ ನ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಊಹಾಪೋಹಗಳು ಅಗತ್ಯವಿಲ್ಲ. ವಿರೋಧಪಕ್ಷಗಳು , ನನ್ನ ಮೇಲಿನ ಸುಳ್ಳು ಆರೋಪಗಳನ್ನು ಮಾಡಿ ರಾಜಿನಾಮೆ ಬೇಡಿದರೆ, ರಾಜಿನಾಮೆ ಕೊಡಲು ಸಾಧ್ಯವಿಲ್ಲ. ಸುಳ್ಳು ಆರೋಪಗಳನ್ನು ಮಾಡಿದರೆ, ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.

ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ

ಜೆಡಿಎಸ್ ನ ಜಿಟಿದೇವೇಗೌಡ, ಮುಖ್ಯಮಂತ್ರಿಯವರನ್ನು ಬೆಂಬಲಿಸಿ ಮಾತನಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ದ , ವಿರೋಧಪಕ್ಷದವರ ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿ ಟಿ ದೇವೇಗೌಡರು ಒಬ್ಬರು ಎಂದರು.

ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಅವರ ಮೇಲೆ ಎಫ್ ಐ ಆರ್ ಆಗಿರುವುದರಿಂದ , ತಾನು ರಾಜಿನಾಮೆ ನೀಡಲು ಸಿದ್ದ, ಸಿಎಂ ಅವರೂ ರಾಜಿನಾಮೆ ನೀಡಲಿ ಎಂದು ಹೇಳಿರುವ ಬಗ್ಗೆ ಉತ್ತರಿಸಿ, ಅವರು ಮೊದಲು ರಾಜಿನಾಮೆ ನೀಡಲಿ, ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮೊದಲು ರಾಜಿನಾಮೆ ನೀಡಲಿ ಎಂದರು.

ಕರ್ನಾಟಕ ಸಂಭ್ರಮ

ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. 1973 ರಲ್ಲಿ ಮೈಸೂರು ರಾಜ್ಯಕ್ಕೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ , ಕರ್ನಾಟಕ ಎಂದು ನಾಮಕರಣ ಮಾಡಿದ್ದಕ್ಕೆ 50 ವರ್ಷಗಳ ಸಂದಿರುವ ಸುಸಂದರ್ಭದಲ್ಲಿ ಕರ್ನಾಟಕ ಸಂಭ್ರಮವನ್ನು ಇಂದು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆಯನ್ನೂ ಸಹ ಪ್ರತಿಷ್ಠಾಪಿಸಲಾಗುತ್ತಿದೆ.ಗೋಕಾಕ್ ಚಳುವಳಿ ಮತ್ತು ಕನ್ನಡ ಸಂಭ್ರಮಕ್ಕೆ ಸಂಬಂಧಪಟ್ಟಂತೆ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಮಾಡುತ್ತಿರುವ ಕಾರ್ಯಕ್ರಮವಾಗಿದೆ ಎಂದರು.

ಸ್ವಾಭಿಮಾನಿ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದುಳಿದ ವರ್ಗದವರು, ದೀನದಲಿತರ, ಅಲ್ಪಸಂಖ್ಯಾತರ ವರ್ಗದವರ ಸ್ವಾಭಿಮಾನಿ ಸಮಾವೇಶ ಇದಾಗಿದೆ ಎಂದರು.

ಜಲಾಶಯದ ಕೆಳಭಾಗದ ರೈತರಿಗೆ ನೀರು ಬಿಡಲು ಶೀಘ್ರ ಕ್ರಮ

ತುಂಗಭದ್ರಾ ಜಲಾಶಯ ಹಾಗೂ ನವಲೆ ಜಲಾಶಯದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವ ಕುರಿತು ಪತ್ರಕರ್ತರ ಪ್ರಶ್ನೆಗೆ ಬಗ್ಗೆ ಉತ್ತರಿಸಿ, ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಪ್ರಸ್ತುತ 102 ಟಿಎಂಸಿ ನೀರು ಸಂಗ್ರಹವಿದೆ. ಸುಮಾರು 30 ಟಿಎಂಸಿ ನೀರಿಗೆ ಆಗುವಷ್ಟು ಹೂಳು ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. 19 ನೇ ಗೇಟ್ ದುರಸ್ತಿಯನ್ನು ಐದು ದಿನಗಳೊಳಗೆ ದುರಸ್ತಿ ಮಾಡಿ ಬಾಗಿನ ಅರ್ಪಿಸಲಾಗಿದೆ. ಸರ್ಕಾರ ಕೆಳಭಾಗದ ರೈತರಿಗೆ ನೀರು ಒದಗಿಸಲು ಅನುಕೂಲವಾಗುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here