Category: ನಗರ

  • Karnataka: ಡಿಸೆಂಬರ್ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

    Karnataka: ಡಿಸೆಂಬರ್ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

    ಬೆಂಗಳೂರು:

    ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಸಮಸ್ಯೆ ಪರಿಹರಿಸಲಾಗುತ್ತಿದ್ದು, ಡಿಸೆಂಬರ್ ಬಳಿಕ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು, ಬೆಂಗಳೂರಿನ ಇಂದು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕರಿಸಿದ ತುರ್ತು ನಿಗಾ ಘಟಕ‌ ಉದ್ಘಾಟಿಸಿ ಮಾತನಾಡುತ್ತಿದ್ದರು.

    ರಾಜ್ಯ ಔಷಧಿ ಸರಬರಾಜು ಕಾರ್ಪೋರೇಷನ್ ಆಸ್ಪತ್ರೆಗಳಿಗೆ ಸರಿಯಾಗಿ ಔಷಧಿಗಳನ್ನ ಪೂರೈಕೆ ಮಾಡುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ ಎಂದು ಯಾರು ಹೇಳಬಾರದು. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಔಷಧಿಗಳನ್ನ ಆಸ್ಪತ್ರೆಗಳಿಗೆ ಪೂರೈಸುವಂತೆ ತಾಕೀತು ಮಾಡಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಯ ಜೊತೆಗೆ ಸಮರ್ಪಕವಾಗಿ ಉಚಿತ ಔಷಧಿಗಳು ಸಿಗುವಂತಾಗಬೇಕು. ಸರಿಯಾಗಿ ಔಷಧಿಗಳು ಸಿಕ್ಕಾಗ ಮಾತ್ರ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಲು ಸಾಧ್ಯ. ಹಾಗೆ ನೋಡಿದರೆ ಆಸ್ಪತ್ರೆಯ ಹೊರಗಡೆ ಜನ ಔಷಧಿ ಕೇಂದ್ರಗಳ ಅವಶ್ಯಕತೆಯೇ ಇಲ್ಲ. ಆಸ್ಪತ್ರೆಗಳಲ್ಲೇ ಔಷಧಿಗಳು ಸರಿಯಾಗಿ ದೊರೆತರೆ ಜನರು ಬೇರೆ ಕಡೆ ಔಷಧಿ ಪಡೆಯಲು ತಿರುಗಾಡುವ ಅಗತ್ಯತೆಯೇ ಬರೋದಿಲ್ಲ. ವೈದ್ಯರು ಹೊರಗಡೆ ಔಷಧಿ ತೆಗೆದುಕೊಳ್ಳುವಂತೆ ರೋಗಿಗಳಿಗೆ ಚೀಟಿ ಬರೆದುಕೊಡುವ ಪದ್ದತಿಯನ್ನ ಬದಲಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌

    WhatsApp Image 2023 09 16 at 8.14.16 PM

    ಜಯನಗರ ಸಾರ್ವಜನಿಕ ಆಸ್ಪತ್ರೆಗೆ 10 ಕೋಟಿ ವೆಚ್ಚದಲ್ಲಿ ಕಾಯಕಲ್ಪ

    ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮಗಳನ್ನ ಕೈಗೆತ್ತಿಕೊಳ್ಳುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಉತ್ತಮ ಕಾರ್ಯ ನಿರ್ವಹಿಸಿದೆ. ಆಸ್ಪತ್ರೆಯ ಆಡಳಿತ ವಿಚಾರಗಳಲ್ಲಿ ಇದ್ದ ಸಮಸ್ಯೆ ಪರಿಹರಿಸಲಾಗಿದೆ. ನಾನು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದೆ. ಇದೀಗ ಆಸ್ಪತ್ರೆಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 10 ಕೋಟಿ ಕ್ರೀಯಾಯೋಜನೆ ರೂಪಿಸಲಾಗಿದ್ದು, ಅನುದಾನ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.‌

    4 ಕೋಟಿ ಸಿ.ಎಸ್.ಆರ್ ಫಂಡ್ ನಲ್ಲಿ ತುರ್ತು ನಿಗಾ ಘಟಕ

    ಕೆನರಾ ಬ್ಯಾಂಕ್ ಆಶ್ರಯದಲ್ಲಿ 4 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ತುರ್ತು ನಿಗಾ ಘಟಕವನ್ನ ನವೀಕರಣಗೊಳಿಸಲಾಗಿದೆ. 20 ಹಾಸಿಗೆಯ ಘಟಕವನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವರು, ಕೆನರಾ ಬ್ಯಾಂಕ್ ನ ಕಾರ್ಯಕ್ಕೆ ಧನ್ಯವಾದ ತಿಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಗಳನ್ನ ನಡೆಸಲು ಹೆಚ್ಚು ದಾನಿಗಳು ಮುಂದಬರಬೇಕು. ಆರೋಗ್ಯ ಸೇವೆ ಜೀವಗಳನ್ನ ಉಳಿಸುವ ಮಹತ್ವದ ಕಾರ್ಯ. ಇಂಥಹ ಪುಣ್ಯದ ಕೆಲಸಕ್ಕೆ ಕೈಜೋಡಿಸಿದಾಗ ದಾನಿಗಳಿಗೆ ತೃಪ್ತಿ ನೀಡಲಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಖಾಸಗಿ ಕಂಪನಿಗಳು ಸಿ.ಎಸ್.ಆರ್ ಫಂಡ್ ನ ಅಡಿಯಲ್ಲಿ ಸಾಕಷ್ಟು ಸೇವಾ ಕಾರ್ಯಗಳನ್ನ ನಡೆಸಲು ಅವಕಾಶವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

  • Drought in Karnataka: ಬರ ಘೋಷಣೆ ವಿಳಂಬಕ್ಕೆ ಕೇಂದ್ರದ 2020 ಮಾರ್ಗಸೂಚಿಯೇ ಸಮಸ್ಯೆ: ಸಿಎಂ ಸಿದ್ದರಾಮಯ್ಯ

    Drought in Karnataka: ಬರ ಘೋಷಣೆ ವಿಳಂಬಕ್ಕೆ ಕೇಂದ್ರದ 2020 ಮಾರ್ಗಸೂಚಿಯೇ ಸಮಸ್ಯೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು:

    ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

    ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ. ಮಾನದಂಡಗಳಲ್ಲಿನ ಬದಲಾವಣೆ ಕೇವಲ ಕರ್ನಾಟಕ ರಾಜ್ಯದ ದೃಷ್ಟಿಯಿಂದ ಮಾತ್ರವೇ ಅಲ್ಲ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವಾದ ಭಾರತ ಗಣರಾಜ್ಯದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿರುತ್ತದೆ.

    ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.
    ಕರ್ನಾಟಕವು ವೈವಿಧ್ಯಮಯವಾದ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ. ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯವಾಗಿರುತ್ತದೆ.

    ಪ್ರಸಕ್ತ ಬರ ಘೋಷಣೆಯ ಮಾನದಂಡಗಳು ಹವಾಮಾನಶಾಸ್ತ್ರೀಯ, ಕೃಷಿ ಹಾಗೂ ಜಲಶಾಸ್ತ್ರೀಯ ಬರಗಳ ಸೂಚ್ಯಂಕಗಳನ್ನು ತನ್ನ ಮಾನದಂಡಗಳಲ್ಲಿ ಕ್ರೋಢೀಕರಿಸಿಕೊಂಡಿದೆ. ಆದರೆ, ಸದಾಕಾಲವೂ ಇದು ಅನ್ವಯಯೋಗ್ಯವೆಂದೇನೂ ಅಲ್ಲ. ಹವಾಮಾನ ಶಾಸ್ತ್ರೀಯ ಬರವನ್ನು ಪರಿಗಣಿಸಿಯೇ ನೋಡುವುದಾದರೆ, ಮುಂಗಾರಿನಲ್ಲಿ ಆರಂಭದಲ್ಲಿ ಮಳೆ ಕೊರತೆ ಇದ್ದದ್ದು ಆನಂತರ ಪ್ರಬಲ ಮಾರುತಗಳ ಪರಿಣಾಮ ಸುದಾರಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚು ಘಟಿಸಿದೆ. ಆಗಸ್ಟ್-ಸೆಪ್ಟೆಂಬರ್‌ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಪ್ರಮಾಣ ಇಳಿಕೆಯಾಗಿರುತ್ತದೆ. ಪರಿಣಾಮ ಬೆಳೆಯಲ್ಲಿ ಕೊರತೆಯುಂಟಾಗಿ ಕೃಷಿ ಆಧರಿತ ಬರದ ಸನ್ನಿವೇಶ ಉದ್ಭವಿಸುತ್ತದೆ. ಅದರೆ, ಇದೇ ವೇಳೆ ಸುಧಾರಿಸಿದ ಮಳೆಯ ಮಾರುತಗಳಿಂದಾಗಿ ಹವಾಮಾನ ಮತ್ತು ಜಲಶಾಸ್ತ್ರೀಯ ಬರ ಕಾಣದೆ ಹೋಗಬಹುದು. ಈ ಸೂಕ್ಷ್ಮವನ್ನು ಬರ ಘೋಷಣೆಗೆ ಕಡ್ಡಾಯವಾಗಿರುವ ಮಾನದಂಡಗಳು ಒಳಗೊಳ್ಳಬೇಕಾಗಿದೆ.

    ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್‌) ಅಂಶವೆಂದು ಪರಿಗಣಿಸಬೇಕು.

    ಶುಷ್ಕ ಅಥವಾ ಒಣ ಹವೆಯ ವಿಚಾರದಲ್ಲಿಯೂ ಕೈಪಿಡಿಯಲ್ಲಿ ಕಠಿಣವಾದ ನಿಯಮಾವಳಿ ಇದೆ. ಬರ ಘೋಷಿಸಲು ಮೂರು ವಾರಗಳ ಒಣಹವೆಯನ್ನು ಸೂಚ್ಯಂಕವಾಗಿ ಪರಿಗಣಿಸಲಾಗಿದೆ. ವಿಪರ್ಯಾಸವೆಂದರೆ, ಎರಡು ಮೂರು ವಾರಗಳ ಒಣಹವೆ ಕೂಡ ಬೆಳೆಯ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡಿ ಸರಿಪಡಿಸಲಾಗದ ಬೆಳೆಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಳೆ ಕುರಿತಾದ ಸೂಚ್ಯಂಕದಲ್ಲಿ ಒಣಹವೆಯ ಅವಧಿಯನ್ನು ಎರಡು ವಾರಗಳಿಗಿಂತ ಕಡಿಮೆ ಎಂದು ಪರಿಗಣಿಸಬೇಕು.

    ಬರ ಘೋಷಣೆಯ ವಿಳಂಬಕ್ಕೆ ಕಾರಣವಾಗುವ ಕೈಪಿಡಿಯಲ್ಲಿರುವ ಮತ್ತೊಂದು ಪ್ರಮುಖ ಮಾನದಂಡವೆಂದರೆ ಅದು ರಾಜ್ಯ ಸರ್ಕಾರವು ‘ಇನ್ನು ಯಾವುದೇ ಬಿತ್ತನೆ ಚಟುವಟಿಕೆ’ ನಡೆಯುವುದಿಲ್ಲ ಎಂದು ಬೆಳೆ ಹಂಗಾಮಿನ ವೇಳೆ ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿ ಪ್ರಮಾಣಪತ್ರ ಸಲ್ಲಿಸಬೇಕಿರುವುದು. ಇದು ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ. ಇನ್‌ಪುಟ್‌ ಸಬ್ಸಿಡಿ ಪರಿಕಲ್ಪನೆಯು ತಕ್ಷಣದ ಪರಿಹಾರ ನೀಡುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಬೇಕು ಎನ್ನುತ್ತದೆ. ಆದರೆ, ಮೇಲೆ ಹೇಳಿದ ಕೇಂದ್ರದ ನಿಯಮಾವಳಿಯಿಂದಾಗಿ ರಾಜ್ಯ ಸರ್ಕಾರವು ಬರ ಘೋಷಣೆ ಮಾಡಿ ತಕ್ಷಣ ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುವುದಿಲ್ಲ.

    ಬರ ಘೋಷಣೆಗೆ ಪರಿಗಣಿಸಲಾಗುವ ಇತರ ಸೂಚ್ಯಂಕಗಳಾದ ಅಂತರ್ಜಲ ಮಟ್ಟ, ಜೈವಿಕ ಪರಿಸರದ (ಬಯೋಮಾಸ್‌) ಸೂಚ್ಯಂಕಗಳು ಸಹ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಅಂತರ್ಜಲದ ಮಟ್ಟ ಕುಸಿಯಲು ಅಥವಾ ಹೆಚ್ಚಳವಾಗಲು ಕನಿಷ್ಠ 2-3 ವಾರಗಳ ಅವಧಿಯ ಅಗತ್ಯವಿದೆ. ಹಾಗಾಗಿ ಇದರ ಪರಿಗಣನೆಯ ವೇಳೆ ವಿವೇಚನೆ ಅಗತ್ಯ. ಅದೇ ರೀತಿ, ಉಪಗ್ರಹ ಆಧರಿತ ಎನ್‌ಡಿವಿಐ ಸೂಚ್ಯಂಕವು ಕಳೆಯನ್ನೂ ಸಹ ಹಸಿರು ಜೈವಿಕ ಪರಿಸರವೆಂದು ಪರಿಗಣಿಸುವ ಸಾಧ್ಯತೆ ಇದೆ. ಈ ಅಂಶಗಳು ಬರ ಘೋಷಣೆಗೆ ಅಗತ್ಯವಾದ ಸೂಚ್ಯಂಕಗಳ ಪರಿಶೀಲನೆಯಲ್ಲಿ ನೇತ್ಯಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತವೆ.

    ಬೆಳೆಹಾನಿ ಸಹಾಯಧನಕ್ಕೆ ಅರ್ಹತೆ ಪಡೆಯಲು ಬರನಿರ್ವಹಣೆ ಕೈಪಿಡಿ 2016 ರಲ್ಲಿನ ನಿಯಮಗಳು ಹಾಗೂ ಎಸ್‌ ಡಿ ಆರ್‌ ಎಫ್‌ / ಎನ್‌ ಡಿ ಆರ್‌ ಎಫ್‌‌ ನಿಯಮಾವಳಿಗಳನ್ನು ಸಮೀಕರಿಸುವ ಅಗತ್ಯವಿದೆ. ಬರ ನಿರ್ವಹಣೆ ಕೈಪಿಡಿಯ ಮಾನದಂಡದಡಿ ಬೆಳೆಹಾನಿ ಸಹಾಯಧನಕ್ಕೆ ಅರ್ಹತೆಗೆ ಪಡೆಯಲು ಶೇ. 50 ರಷ್ಟು ಬೆಳೆಹಾನಿ ಪ್ರಮಾಣ ಅಗತ್ಯವಿರುತ್ತದೆ, ಈ ಪ್ರಮಾಣ ವಿಪತ್ತಿನ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಸ್ ‌ಡಿ ಆರ್ ‌ಎಫ್‌/ ಎನ್‌ ಡಿ ಆರ್‌ ಎಫ್‌ ಮಾನದಂಡಗಳ ಅಡಿ ಸೂಚಿಸಿರುವ ಶೇ.33 ಬೆಳೆ ನಾಶಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕೈಪಿಡಿಯಲ್ಲಿನ ಮಾನದಂಡವನ್ನು ಇದಕ್ಕೆ ಹೊಂದಾಣಿಕೆ ಮಾಡುವುದು ಸೂಕ್ತವಾಗಿದೆ.

    ಬರದಿಂದ ಉಂಟಾಗುವ ಸಂಕಷ್ಟವನ್ನು ಎದುರಿಸುವಲ್ಲಿ ವಿಮೆಯ ಪಾತ್ರವು ಮಹತ್ವದ್ದಾಗಿದೆ. ಪ್ರಸಕ್ತ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿನ ವಿಮೆಯ ಹಣವನ್ನು ಪಡೆಯುವಲ್ಲಿ ರೈತರು ಅನೇಕ ಸಂದರ್ಭಗಳಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಕಾರಣ ಜೋಡಣೆಯಿಲ್ಲದೆ ಚದುರಿರುವ ಪ್ರಸಕ್ತ ವ್ಯವಸ್ಥೆ. ಇನ್‌ಪುಟ್‌ ಸಬ್ಸಿಡಿಯ ವಿತರಣೆಯನ್ನು ವಿಮಾ ಕಂಪೆನಿಗಳು ಬೆಳೆ ನಾಶವಾಗಿರುವ ಸಂಬಂಧ ವಿಮಾ ಪರಿಹಾರ ನೀಡಲು ಪುರಾವೆಯಾಗಿ ಪರಿಗಣಿಸಬೇಕು. ಹೀಗೆ ವಿಮಾ ಪರಿಹಾರ ಹಾಗೂ ಇನ್‌ಪುಟ್‌ ಸಬ್ಸಿಡಿಗಳನ್ನು ಜೋಡಿಸುವುದರಿಂದ ರೈತರಿಗೆ ಸಂಕಷ್ಟದ ಸಮಯದಲ್ಲಿ ಅತ್ಯಗತ್ಯವಾದ ಆರ್ಥಿಕ ಬೆಂಬಲವು ತ್ವರಿತವಾಗಿ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ವಿಮಾ ಪರಿಹಾರಕ್ಕೆ ಸಂಬಂಧಿಸಿದ ಸಂಕೀರ್ಣ ಪ್ರಕ್ರಿಯೆಯಲ್ಲಿ ಸರಳತೆ ಸಾಧ್ಯವಾಗುವುದಲ್ಲದೆ, ಪಾರದರ್ಶಕತೆಯೂ ಮೂಡುತ್ತದೆ. ವಿಮೆಯ ಪರಿಹಾರ ದೊರೆಯುವಲ್ಲಿನ ವಿಳಂಬ ಕಡಿಮೆಯಾಗುತ್ತದೆ.

    ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಪ್ರಸಕ್ತ ಬರ ನಿರ್ವಹಣೆಯ ಕೈಪಿಡಿಯಲ್ಲಿರುವ ಮಾನದಂಡಗಳನ್ನು ಅನ್ವಯಿಸುವಾಗ, ಅದನ್ನು ಭೌಗೋಳಿಕವಾಗಿ, ಕೃಷಿ ಚಟುವಟಿಕೆ ಹಾಗೂ ಬೆಳೆಯ ವೈವಿಧ್ಯತೆಯ ಹಿನ್ನೆಲೆಯಲ್ಲಿ ಹೆಚ್ಚು ಹೊಂದಿಕೆಯಾಗುವಂತೆ, ಹೆಚ್ಚು ರೈತಸ್ನೇಹಿಯಾಗುವಂತೆ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಇರುವ ಮಾನದಂಡಗಳಿಗೆ ಸೂಕ್ತ ಮಾರ್ಪಾಡುಗಳನ್ನು ಮಾಡಬೇಕಿದ್ದು, ಅವುಗಳನ್ನು ಮರುಪರಿಶೀಲನೆಗೆ ಒಡ್ಡಲು ಇದು ಸೂಕ್ತ ಸಮಯವಾಗಿದೆ.

  • Ganesh Chaturthi 2023: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ

    Ganesh Chaturthi 2023: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ

    ಬೆಂಗಳೂರು:

    ಗಣೇಶ್‌ ಚತುರ್ಥಿ ಹಬ್ಬದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು ತಿಳಿಸಿದ್ದಾರೆ.

    ಆದೇಶದಲ್ಲಿ ಗಣೇಶ್‌ ಚತುರ್ಥಿ ಹಬ್ಬದ ಹಿನ್ನೆಲೆ 18-09-2023ರಂದು ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಳಿಗೆಗಳಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

    ಗಣಪತಿ ವಿಸರ್ಜನೆಗೆ ಕಲ್ಯಾಣಿಗಳು, ಸಂಚಾರಿ ಟ್ಯಾಂಕರ್‌ಗಳ ಸ್ಥಾಪನೆ
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾಗಿರುವ 63 ಏಕಗವಾಕ್ಷಿ ಕೇಂದ್ರಗಳು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 39 ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 418 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲ ವಾರ್ಡ್ ಗಳಲ್ಲಿ ಮಾಡಲಾಗಿರುತ್ತದೆ.

    ಸದರಿ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅದರ ವಿವರಗಳಿಗಾಗಿ ವೆಬ್ ಸೈಟ್ https://apps.bbmpgov.in/ganesh2023/ ನಲ್ಲಿ ಅಥವಾ ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ ವಿವರವನ್ನು ಪಡೆಯಬಹುದಾಗಿದೆ. ಸದರಿ ಮಾಹಿತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

  • Karnataka: ನರೇಂದ್ರ ಮೋದಿಜಿ ಮತ್ತೊಮ್ಮೆ ಪ್ರಧಾನಿ: ಸಿ.ಟಿ.ರವಿ ವಿಶ್ವಾಸ

    Karnataka: ನರೇಂದ್ರ ಮೋದಿಜಿ ಮತ್ತೊಮ್ಮೆ ಪ್ರಧಾನಿ: ಸಿ.ಟಿ.ರವಿ ವಿಶ್ವಾಸ

    ಬೆಂಗಳೂರು/ಮಂಗಳೂರು:

    ನೀತಿ, ನೇತೃತ್ವಹೀನ, ನಿಯತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವ ಐಎನ್‍ಡಿಐಎ, ಯಾವುದೇ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಇಳಿದರೂ ಕೂಡ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.

    ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಜನರು, ಸಂವಿಧಾನಕ್ಕೆ, ಇಡೀ ಭಾರತಕ್ಕೆ ನಮ್ಮ ನಿಯತ್ತು ಎಂದು ನಾವು ಸಾಬೀತುಪಡಿಸಿದ್ದೇವೆ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಐಎನ್‍ಡಿಐಎ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು. ಅವರ ನೀತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಚೀನಾದ ಜೊತೆಗಿನ ಕಾಂಗ್ರೆಸ್ ಒಡಂಬಡಿಕೆ ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದೆ. ಪ್ರತಿ ಬಾರಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುವ ಕಾಂಗ್ರೆಸ್ಸಿನ ನೇತಾರ ರಾಹುಲ್ ಗಾಂಧಿಯವರ ನಿಯತ್ತು ಒಂದು ಪ್ರಶ್ನಾರ್ಥಕ ಚಿಹ್ನೆ ಹುಟ್ಟು ಹಾಕುವಂತಿದೆ ಎಂದು ತಿಳಿಸಿದರು.

    ವಂಶಪಾರಂಪರ್ಯ ಆಡಳಿತವನ್ನು ಸಮರ್ಥಿಸುವ ಪಕ್ಷಗಳು ಐಎನ್‍ಡಿಐಎ ಹೆಸರಿನಲ್ಲಿ ಒಗ್ಗೂಡಿವೆ. ಭಯೋತ್ಪಾದಕರಲ್ಲೂ ಮತಬ್ಯಾಂಕ್ ನೋಡುವುದು ಅವರ ನೀತಿ. ಕೋಮುವಾದಿ ಶಕ್ತಿಗಳ ಜೊತೆ ರಾಜಕೀಯ ಹೊಂದಾಣಿಕೆ ಅವರ ನೀತಿ. ಭಾರತ ಮತ್ತು ಭಾರತೀಯ ಸಂಸ್ಕøತಿ ಬಗ್ಗೆ ಅವಹೇಳನ ಅವರ ನೀತಿ. ಸನಾತನ ಧರ್ಮದ ಬಗ್ಗೆ ಅವಹೇಳನ ಮಾತ್ರವಲ್ಲ; ಅದನ್ನು ಬೇರುಸಹಿತ ಕಿತ್ತುಹಾಕುತ್ತೇವೆ ಎಂಬುದು ಅವರ ನೀತಿ. ಭ್ರಷ್ಟಾಚಾರದಿಂದಲೇ ಕೂಡಿರುವುದು ಅವರ ನೀತಿ. ಐಎನ್‍ಡಿಐಎ ನೇತೃತ್ವ ಅದೊಂದು ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ಟೀಕಿಸಿದರು.

    ನೇತಾ ಯಾರೆಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ. ಬಹುಶಃ ಸಂಗೀತ ಕುರ್ಚಿ (ಮ್ಯೂಸಿಕಲ್ ಚೇರ್) ಮೂಲಕ ಅವರು ನೇತಾನನ್ನು ಆಯ್ಕೆ ಮಾಡುವ ಲಕ್ಷಣಗಳು ಕಾಣುತ್ತಿವೆ. ಸಮರ್ಥ ಮತ್ತು ಎಲ್ಲರೂ ಒಪ್ಪಬಹುದಾದ ನಾಯಕ ಅವರಿಗೆ ಇಲ್ಲದ ಕಾರಣ ಮ್ಯೂಸಿಕಲ್ ಚೇರ್ ಮೂಲಕ ಯಾರಿಗೆ ಕುರ್ಚಿ ಒಲಿಯುತ್ತೋ ಅವರನ್ನು ನೇತಾರರಾಗಿ ಮಾಡಿಕೊಳ್ಳುವ ದುಸ್ಥಿತಿ ಅವರದು. ನಿಯತ್ತಿನ ಪ್ರಶ್ನೆ ಬಂದಾಗ ಯಾರಿಗೆ ಅವರ ನಿಯತ್ತು ಎಂಬುದು ಅನುಮಾನ ಹುಟ್ಟಿಸುತ್ತದೆ ಎಂದರು.

    ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ದೇಶಾದ್ಯಂತ ಸಿದ್ಧತೆಯಲ್ಲಿ ತೊಡಗಿದೆ. ಆರು ರಾಜ್ಯಗಳ ಸಾರ್ವತ್ರಿಕ ಚುನಾವಣೆಯು ನವೆಂಬರ್ ಮತ್ತು ಜನವರಿಯಲ್ಲಿ ಬರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಗೆಲುವು ಸಾಧಿಸಲು ಪಕ್ಷ ಈಗಾಗಲೇ ಆಯಾ ರಾಜ್ಯಗಳಲ್ಲಿ ಚುನಾವಣಾ ಪ್ರಭಾರಿಗಳನ್ನು ನೇಮಿಸಿ ಗೆಲುವಿಗೆ ಬೇಕಾದ ತಳಹಂತದ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

    ನೀತಿ, ನೇತೃತ್ವ ಮತ್ತು ಜನರಿಗೆ- ದೇಶಕ್ಕೆ ನಮಗಿರುವ ನಿಯತ್ತನ್ನು ಜನರ ಮುಂದಿಟ್ಟು ನಾವು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಬಿಜೆಪಿ ದೇಶ ಮೊದಲು ಎಂಬ ನೀತಿ ಹೊಂದಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ನಮ್ಮ ನೀತಿ. ಬಡವರಿಗೆ ಬಲ ಕೊಡುವುದು, ದಲಿತರಿಗೆ ಶಕ್ತಿ ನೀಡುವುದು ನಮ್ಮ ನೀತಿ ಎಂದು ಅವರು ವಿವರಿಸಿದರು. ಅದಕ್ಕಾಗಿ ಕೇಂದ್ರದ ಸಂಪುಟದಲ್ಲಿ ಅತಿ ಹೆಚ್ಚು ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕೆ ಮಂತ್ರಿ ಸ್ಥಾನವನ್ನು ನಾವು ಕೊಟ್ಟಿದ್ದೇವೆ ಎಂದು ವಿವರಿಸಿದರು.

    ನೇತೃತ್ವದ ವಿಚಾರದಲ್ಲಿ ಈಗಾಗಲೇ ಜಗತ್ತಿನ ಹಲವು ನಾಯಕರು ಸಾರ್ವಜನಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯದ ಪ್ರಧಾನಮಂತ್ರಿಯಂತೂ ಸಾರ್ವಜನಿಕ ಸಭೆಯಲ್ಲಿ ‘ಮೋದಿ ಈಸ್ ದಿ ಬಾಸ್’ ಎಂದು ಕರೆದು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಗ್ಲೋಬಲ್ ರೇಟಿಂಗ್ಸ್‍ನಲ್ಲಿ ಪ್ರತಿಶತ 76ರಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.

    ಜಿ 20 ಅಧ್ಯಕ್ಷತೆ ವಹಿಸಿದ್ದ ಭಾರತವು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ನಾಯಕತ್ವವನ್ನು ಪ್ರಕಟಿಸುವ ಮೂಲಕ ಜಿ 20ಯನ್ನು ಒಂದು ವರ್ಷ ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಬಿಜೆಪಿಯ ನಾಯಕರಾಗಿ ಜಗತ್ತು ಮೆಚ್ಚಿದ ಮುಖಂಡ ನರೇಂದ್ರ ಮೋದಿ ಅವರು ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದರು.

    ನಿಯತ್ತು ಏನು ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. 1986ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಕೇಂದ್ರದಿಂದ 100 ರೂ ಕಳಿಸಿದರೆ ಅದು ಕಟ್ಟಕಡೆಯ ಮನುಷ್ಯನಿಗೆ ತಲುಪುವುದೇ 15 ರೂಪಾಯಿ ಎಂದಿದ್ದರು. ಅಂದರೆ ಶೇ 85ರಷ್ಟು ಮಧ್ಯಸ್ಥಿಕೆದಾರರಿಗೆ ಸೋರಿಕೆ ಆಗುತ್ತಿತ್ತು ಎಂದು ಅವರು ಒಪ್ಪಿಕೊಂಡಿದ್ದರು. ಅದನ್ನು ತಡೆಯುವ ಯಾವ ಪ್ರಯತ್ನವನ್ನೂ ಅವರ ಸರಕಾರ, ಪಕ್ಷ ಮಾಡಿರಲಿಲ್ಲ ಎಂದರು.

    ನಮ್ಮ ಪ್ರಧಾನಮಂತ್ರಿಯವರು ಕೇಂದ್ರದಿಂದ ಕಳುಹಿಸುವ ಪ್ರತಿಯೊಂದು ಪೈಸೆಯೂ ಕಟ್ಟಕಡೆಯ ಮನುಷ್ಯನಿಗೆ ತಲುಪಬೇಕೆಂಬ ಹಿನ್ನೆಲೆಯಲ್ಲಿ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ಲಕ್ಷಾಂತರ ಕೋಟಿ ರೂಪಾಯಿಗಳನ್ನು ರೈತರ, ಬಡವರ, ಮಹಿಳೆಯರ ಖಾತೆಗೆ ತಲುಪಿಸುವ ಮುಖಾಂತರ ತನ್ನ ನಿಯತ್ತನ್ನು ಸಾಬೀತು ಪಡಿಸಿದ್ದಾರೆ. ಭಾರತದ ವಿದೇಶಾಂಗ ನೀತಿಯ ಮೂಲಕ ನಮಗೆ ದೇಶವೇ ಮೊದಲು ಎಂಬ ತತ್ವವನ್ನು ನಾವು ಸಾಬೀತು ಮಾಡಿದ್ದೇವೆ ಎಂದು ವಿವರ ನೀಡಿದರು.

    ಇದೇ ಸಂದರ್ಭದಲ್ಲಿ ಅವರು ನಾಡಿನ ಜನತೆಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಎಂಎಲ್‍ಸಿ ಮೋನಪ್ಪ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರ ರವಿಶಂಕರ್ ಮಿಜಾರು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

  • Karnataka: ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ? ರಾಜ್ಯ ಸರಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಟಿ

    Karnataka: ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ? ರಾಜ್ಯ ಸರಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಟಿ

    ಬೆಂಗಳೂರು:

    ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೃಷಿ ಮತ್ತು ಕಂದಾಯ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರೈತರನ್ನು ಆತ್ಮಹತ್ಯೆಗೆ ದೂಡುವುದು ಕರ್ನಾಟಕದ ಮಾದರಿಯೇ? ಎಂದು ಪ್ರಶ್ನಿಸಿದ್ದಾರೆ.

    ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ..!! ಇದು ನೈಜಸ್ಥಿತಿ ಎಂದು ಕಿಡಿಕಾರಿದ್ದಾರೆ.

    ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ. ಆಗ್ಗೆ ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕಾಲಹರಣವೂ ಜೀವಹರಣವೂ ಬೇರೆ ಬೇರೆ ಅಲ್ಲ. ತುರ್ತಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ,ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು(!!) ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ. ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? ಎಂದು ಟೀಕಿದ್ದಾರೆ.

    ನನ್ನ ಮನವಿ ಇಷ್ಟೇ; ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ.

    ಸರಕಾರ ಇಂಥಹ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.

  • Karnataka Industries: ₹7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ

    Karnataka Industries: ₹7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ

    ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ 140ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ

    ಹೊಸ ಸರ್ಕಾರದ ‌ಮೊದಲ ಸಭೆಯಲ್ಲಿ 18,146 ಉದ್ಯೋಗ ಸೃಷ್ಟಿಗೆ ಕ್ರಮ

    ಬೆಂಗಳೂರು:

    ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ 91 ಯೋಜನೆಗಳ ಒಟ್ಟು 7,660 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

    ಇಲ್ಲಿನ ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಹಾಗೂ ಮೂಲಸೌಲಭ್ಯ ಅಭಿವೃದ್ಧಿ, ಸಚಿವರಾದ ಶ್ರೀ. ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ 140ನೇ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

    ಈ ಯೋಜನೆಗಳಿಂದ ಸುಮಾರು 18,146 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆಯೆಂದು ಸಚಿವ ಎಂ. ಬಿ. ಪಾಟೀಲ ಅವರಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಯ 25 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 5,750.73 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 13,742 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

    ರೂ. 15 ಕೋಟಿಯಿಂದ ರೂ 50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 57 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ₹1,145 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು ಅಂದಾಜು 4,404 ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದಲ್ಲದೇ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ₹763.85 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

    ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ . ಎಂ. ಮಹೇಶ್, ಐಟಿಬಿಟಿ ಇಲಾಖೆಯ ನಿರ್ದೇಶಕ ಎಚ್. ವಿ. ದರ್ಶನ್ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳ ಪಟ್ಟಿ

    1. ಸಂಸ್ಥೆ: ಪ್ರತಿಭಾ ಪಾಟೀಲ್ ಶುಗರ್ ಇಂಡಸ್ಟ್ರೀಸ್ ಪೈವೇಟ್ ಲಿಮಿಟೆಡ್
      ಸ್ಥಳ: ಕಣ್ಣೂರ್ ಗ್ರಾಮ, ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆ
      ಹೂಡಿಕೆ: ₹489.50 ಕೋಟಿ
      ಉದ್ಯೋಗ: 275
    2. ಸಂಸ್ಥೆ: ಗುರುದೇವ್ ರಿಫೈನರಿಸ್ & ಅಲೈಡ್ ಇಂಡಸ್ಟ್ರೀಸ್
      ಸ್ಥಳ: ತಡವಳಗ ಪೋಸ್ಟ್, ವಿಜಯಪುರ ಜಿಲ್ಲೆ
      ಹೂಡಿಕೆ: ₹488.49 ಕೋಟಿ
      ಉದ್ಯೋಗ: 255
    3. ಸಂಸ್ಥೆ: ದೇವಶ್ರೀ ಇಸ್ಪಾತ್ ಪೈವೇಟ್ ಲಿಮಿಟೆಡ್
      ಸ್ಥಳ: ಹಳವರ್ತಿ ಗ್ರಾಮ, ಕೊಪ್ಪಳ ಜಿಲ್ಲೆ
      ಹೂಡಿಕೆ: ₹470 ಕೋಟಿ
      ಉದ್ಯೋಗ: 800
    4. ಸಂಸ್ಥೆ: ಏಕಸ್ ಕನ್ಸೂಮರ್ ಪ್ರಾಡಕ್ಟಸ್ ಪೈವೇಟ್ ಲಿಮಿಟೆಡ್
      ಸ್ಥಳ: ಇತ್ತಿಗಟ್ಟಿ ಗ್ರಾಮ, ಧಾರವಾಡ ಜಿಲ್ಲೆ
      ಹೂಡಿಕೆ ₹456 ಕೋಟಿ
      ಉದ್ಯೋಗ: 1,187
    5. ಸಂಸ್ಥೆ: ಇಂಟಿಗ್ರೇಟೆಡ್ ಸೋಲಾರ್ ಪವರ್ ಪೈವೇಟ್ ಲಿಮಿಟೆಡ್
      ಸ್ಥಳ: ಮಿಂಡಹಳ್ಳಿ ಗ್ರಾಮ, ಕೋಲಾರ ಜಿಲ್ಲೆ
      ಹೂಡಿಕೆ: ₹441.08 ಕೋಟಿ
      ಉದ್ಯೋಗ: 720
    6. ಸಂಸ್ಥೆ: ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್
      ಸ್ಥಳ: ಮೂಸಿನಾಯಕನ ಹಳ್ಳಿ ಗ್ರಾಮ, ಬಳ್ಳಾರಿ ಜಿಲ್ಲೆ
      ಹೂಡಿಕೆ: ₹411 ಕೋಟಿ
      ಉದ್ಯೋಗ: 65
    7. ಸಂಸ್ಥೆ: ಶಶಿ ಅಲೊಯ್ಸ್ ಪೈವೇಟ್ ಲಿಮಿಟೆಡ್
      ಸ್ಥಳ: ಭೈರನಾಯಕನಹಳ್ಳಿ ಗ್ರಾಮ, ಚಲ್ಲಕೆರೆ ತಾಲೂಕು, ಚಿತ್ರದುರ್ಗ
      ಹೂಡಿಕೆ: ₹380 ಕೋಟಿ
      ಉದ್ಯೋಗ: 400
    8. ಸಂಸ್ಥೆ: ಎಸ್ ಎಫ್ ಎಸ್ ಗ್ರೂಪ್ ಇಂಡಿಯಾ ಪೈವೇಟ್ ಲಿಮಿಟೆಡ್
      ಸ್ಥಳ: ಬೆಳಗಾವಿ ಜಿಲ್ಲೆ
      ಹೂಡಿಕೆ: ₹ 250 ಕೋಟಿ
      ಉದ್ಯೋಗ: 844
    9. ಸಂಸ್ಥೆ: ಮೈಸೂರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
      ಸ್ಥಳ: ರಾಯಚೂರು ಜಿಲ್ಲೆ
      ಹೂಡಿಕೆ: ₹240 ಕೋಟಿ
      ಉದ್ಯೋಗ: 157
    10. ಸಂಸ್ಥೆ: ಲಾಮ್ ರಿಸರ್ಚ್ ಇಂಡಿಯಾ ಪೈವೇಟ್ ಲಿಮಿಟೆಡ್
      ಸ್ಥಳ: ಬೆಂಗಳೂರು
      ಹೂಡಿಕೆ: ₹235.91 ಕೋಟಿ
      ಉದ್ಯೋಗ: 1,724
    11. ಸಂಸ್ಥೆ: ಟಾಟಾ ಸೆಮಿಕಂಡೆಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ ಪೈವೇಟ್ ಲಿಮಿಟೆಡ್
      ಸ್ಥಳ: ಕೊಲಾರ ಜಿಲ್ಲೆ
      ಹೂಡಿಕೆ: ₹200 ಕೋಟಿ
      ಉದ್ಯೋಗ: 155
    12. ಸಂಸ್ಥೆ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
      ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ
      ಹೂಡಿಕೆ: ₹137 ಕೋಟಿ
      ಉದ್ಯೋಗ: 1,908
  • ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಆಯುಕ್ತರಿಂದ ಅಧಿಕೃತ ಘೋಷಣೆ, ಅನುಮತಿ ಪತ್ರ ವಿತರಣೆ

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಆಯುಕ್ತರಿಂದ ಅಧಿಕೃತ ಘೋಷಣೆ, ಅನುಮತಿ ಪತ್ರ ವಿತರಣೆ

    ಧಾರವಾಡ:

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಗಣೇಶೋತ್ಸವ ಆಚರಣೆಗೆ ಅನುಮತಿ ಪತ್ರ ಹಸ್ತಾಂತರಿಸಿದ್ದಾರೆ.

    ಹುಬ್ಬಳ್ಳಿಯ ಈದ್ಗಾ ಮೈದಾನ (Idgah Maidan)ದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಮೇಯರ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಅರವಿಂದ ಬೆಲ್ಲದ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಎರಡು ದಿನಗಳಿಂದ ಹೋರಾಟ ನಡೆಸಿದ್ದರು. ಇದೀಗ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಫಿಕ್ಸ್ ಆಗಿದ್ದು, ಪಾಲಿಕೆ ಆಯುಕ್ತರಿಂದಲೇ ಅಧಿಕೃತ ಘೋಷಣೆಯಾಗಿದ್ದು, ಈ ಕುರಿತ ಅನುಮತಿ ಪತ್ರವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ್ ಬಡಾಸ್ಕರ್ ಅವರಿಗೆ ಸ್ತಾಂತರಿಸಿದರು.

    ಬಳಿಕ ಮಾತನಾಡಿದ ಅವರು, ‘ಹೈಕೋರ್ಟ್ ನಿರ್ದೇಶನದ ಮೇರೆಗೆ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ನಮ್ಮ ನಿರ್ಣಯದಂತೆ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡಿದ್ದೇವೆ ಎಂದು ಹೇಳಿದರು.

    ಅವಕಾಶ ನೀಡಿದ ಬೆನ್ನಲ್ಲೇ ಈ ಕುರಿತು ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ‘ಕಾಂಗ್ರೆಸ್ ಹಿಂಬಾಗಿಲಿನಿಂದ ಅಂಜುಮನ್ ಸಂಸ್ಥೆ ಮೂಲಕ ಕೋರ್ಟ್ ರೀಟ್ ಅರ್ಜಿ ಸಲ್ಲಿಸಿದೆ. ಕೊನೆ ಕ್ಷಣದಲ್ಲಿಯಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಮುಂದೆ ಕೂಡ ಹಿಂದೂ ಹಬ್ಬಗಳ ಆಚರಣೆಗೆ ಅಡೆತಡೆಗಳ ಒಡ್ಡಬಾರದು. ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ. ಮೂರು ದಿನ ಅನುಮತಿ ಕೊಟ್ಟಿದೆ. ನಾವು ಮೂರು ದಿನ ಅತ್ಯಂತ ಸಡಗರದಿಂದ ಹಬ್ಬ ಆಚರಣೆ ಮಾಡ್ತೀವಿ ಎಂದು ಹೇಳಿದರು.

    ಇನ್ನು ಕಳೆದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಕಳೆದ ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈದ್ಗಾ ಮೈದಾನ ಪಾಲಿಕೆಯ ಆಸ್ತಿ. ಇನ್ನೊಂದೆಡೆ ಅಂಜುಮನ್ ಸಂಸ್ಥೆ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದರು. ಇದಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಾಥ್ ನೀಡಿದ್ರು. ಪಾಲಿಕೆ ಆಯುಕ್ತರ ಕಚೇರಿ ಎದುರು ಲೋಹದ ಗಣೇಶ ಮೂರ್ತಿ ಇಟ್ಟು ಧರಣಿ ನಡೆಸಿದ್ದು, ಇದೀಗ ಫಲ ಸಿಕ್ಕಂತಾಗಿದೆ.

  • Karnataka High Court: ಅನುಕಂಪದ ಆಧಾರದ ಮೇಲೆ ಮೃತ ಸಹೋದರನ ಸರ್ಕಾರಿ ನೌಕರಿಯನ್ನು ಸಹೋದರಿ ಕೇಳುವಂತಿಲ್ಲ

    Karnataka High Court: ಅನುಕಂಪದ ಆಧಾರದ ಮೇಲೆ ಮೃತ ಸಹೋದರನ ಸರ್ಕಾರಿ ನೌಕರಿಯನ್ನು ಸಹೋದರಿ ಕೇಳುವಂತಿಲ್ಲ

    ಬೆಂಗಳೂರು:

    ಅನುಕಂಪದ ಆಧಾರದ ಮೇಲೆ ಮೃತ ಸಹೋದರನ ಸರ್ಕಾರಿ ನೌಕರಿಯನ್ನು ಸಹೋದರಿ ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

    ತನ್ನ ಸಹೋದರನ ‘ಕುಟುಂಬ’ದ ವ್ಯಾಖ್ಯೆಯಲ್ಲಿ ಸಹೋದರಿಗೆ ಸ್ಥಾನವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಆತನ ನಿಧನದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠವು ತುಮಕೂರಿನ ನಿವಾಸಿ 29 ವರ್ಷದ ಪಲ್ಲವಿ ಜಿಎಂ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿತು.

    “ವ್ಯಾಖ್ಯಾನ ಪ್ರಕ್ರಿಯೆಯ ಮೂಲಕ ನ್ಯಾಯಾಲಯಗಳು ಶಾಸನಬದ್ಧ ವ್ಯಾಖ್ಯಾನದ ಬಾಹ್ಯರೇಖೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ. ಹಲವು ಪದಗಳಲ್ಲಿ ನಿಯಮ ತಯಾರಕರು ವ್ಯಕ್ತಿಗಳನ್ನು ಉದ್ಯೋಗಿಯ ಕುಟುಂಬದ ಸದಸ್ಯರು ಎಂದು ನಿರ್ದಿಷ್ಟಪಡಿಸಿದಾಗ, ನಾವು ಒಬ್ಬರನ್ನು ಸೇರಿಸಲು ಅಥವಾ ವ್ಯಾಖ್ಯಾನದಿಂದ ಅಳಿಸಲು ಸಾಧ್ಯವಿಲ್ಲ. ಕುಟುಂಬದ ವಿರುದ್ಧದ ವಾದವನ್ನು ಒಪ್ಪಿಕೊಂಡರೆ, ನಿಯಮವನ್ನು ಪುನಃ ಬರೆಯುವಂತೆ ಮಾಡುತ್ತದೆ ಮತ್ತು ಆದ್ದರಿಂದ ಅದನ್ನು ಪರಿಗಣಿಸಲಾಗುವುದಿಲ್ಲ, “ಎಂದು ಹೈಕೋರ್ಟ್ ಹೇಳಿದೆ.

    2023ರ ಮಾರ್ಚ್ 30ರ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ, ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ರಾಜ್ಯ ವಿದ್ಯುತ್ ಪ್ರಸರಣ ಕಂಪನಿಯಾದ ಬೆಸ್ಕಾಂನಲ್ಲಿ ಉದ್ಯೋಗಿಯಾಗಿದ್ದ ಆಕೆಯ ಸಹೋದರ ಸಾವನ್ನಪ್ಪಿದ್ದರು. ಆಕೆಯ ವಕೀಲರು ಆಕೆ ತನ್ನ ಸಹೋದರನ ಮೇಲೆ ಅವಲಂಬಿತಳಾಗಿದ್ದಾಳೆ ಮತ್ತು ಆದ್ದರಿಂದ ಅವನ ಕುಟುಂಬದ ಸದಸ್ಯಳು ಮತ್ತು ಆದ್ದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅಭ್ಯರ್ಥಿಯಾಗಿದ್ದಾಳೆ ಎಂದು ವಾದಿಸಿದ್ದರು.

    ಇದಕ್ಕೆ ಬೆಸ್ಕಾಂ ಪರ ವಕೀಲರು, “ಸಾರ್ವಜನಿಕ ಉದ್ಯೋಗದ ವಿಷಯದಲ್ಲಿ ಸಮಾನತೆಯ ನಿಯಮಕ್ಕೆ ಅನುಕಂಪದ ನೇಮಕಾತಿಯು ಒಂದು ಅಪವಾದವಾಗಿದೆ. ಆದ್ದರಿಂದ, ಅದನ್ನು ಒದಗಿಸುವ ಯೋಜನೆಯನ್ನು ಕಟ್ಟುನಿಟ್ಟಾಗಿ ಅರ್ಥೈಸುವ ಅಗತ್ಯವಿದೆ. ಹಾಗೆ ಅರ್ಥೈಸಿದರೆ, ಅರ್ಜಿದಾರರು ಸಹೋದರಿ ಎಂದು ಒಪ್ಪಿಕೊಳ್ಳುತ್ತಾರೆ. ಮರಣ ಹೊಂದಿದ ಉದ್ಯೋಗಿ ಯಾವುದೇ ಸಹಾನುಭೂತಿಯ ನೇಮಕಾತಿಗೆ ಅರ್ಹರಾಗಿರುವುದಿಲ್ಲ ಎಂದು ವಾದಿಸಿದ್ದರು.

    ಹೈಕೋರ್ಟ್ ತನ್ನ ತೀರ್ಪಿನಲ್ಲಿ ಬೆಸ್ಕಾಂ ವಕೀಲರ ವಾದವನ್ನು ಸಮ್ಮತಿಸಿದ್ದು, “ಮೃತ ನೌಕರನ ಕುಟುಂಬದ ಸದಸ್ಯರು ಮಾತ್ರ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಹಕ್ಕು ಸಲ್ಲಿಸಬಹುದು ಎಂಬುದು ಬಹಳ ಹಿಂದಿನ ಕಾನೂನಿನ ನಿಲುವು ಎಂದು ಹೇಳಿದೆ. “ಬೆಸ್ಕಾಂ ಅನುಸರಿಸುವ ಕಂಪನಿಗಳ ಕಾಯಿದೆ 1956 ಮತ್ತು ಕಂಪನಿಗಳ ಕಾಯಿದೆ 2013 ರ ಪ್ರಕಾರ, ವ್ಯಾಖ್ಯಾನದಲ್ಲಿ ಸಹೋದರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮೇಲ್ಮನವಿ ಸಲ್ಲಿಸಿದ ಸಹೋದರಿಯನ್ನು ಮೃತರ ಕುಟುಂಬದ ಸದಸ್ಯೆ ಎಂದು ಪರಿಗಣಿಸಲಾಗುವುದಿಲ್ಲ. ತನ್ನ ಸಹೋದರನ ಸಾವಿನ ಸಮಯದಲ್ಲಿ ಅವಳು ಅವನ ಮೇಲೆ ಅವಲಂಬಿತಳಾಗಿದ್ದಳು ಎಂದು ತೋರಿಸಲು ಯಾವುದೇ ಸಾಕ್ಷಿ ಇಲ್ಲ” ಎಂದು ಹೈಕೋರ್ಟ್ ಹೇಳಿದೆ.

  • Karnataka High Court: ಸಚಿವ ಡಿ. ಸುಧಾಕರ್‌ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

    Karnataka High Court: ಸಚಿವ ಡಿ. ಸುಧಾಕರ್‌ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

    ಬೆಂಗಳೂರು:

    ಭೂ ಹಗರಣ ಮತ್ತು ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ನಿರ್ದೇಶಕರೂ ಆಗಿರುವ ಸಚಿವ ಸುಧಾಕರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಪೀಠ ಈ ಆದೇಶ ನೀಡಿದೆ.

    ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪೀಠ, ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಅಕ್ಟೋಬರ್ 3ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

    ಸಚಿವ ಸುಧಾಕರ್ ಹಾಗೂ ಇತರರ ವಿರುದ್ಧ ಯಲಹಂಕ ನಿವಾಸಿ ಸುಬ್ಬಮ್ಮ ಅವರು ಸೆ.10ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಸುಧಾಕರ್ ಮತ್ತು ಇತರರು ತನ್ನ ಕುಟುಂಬ ಸದಸ್ಯರಿಗೆ ವಂಚಿಸಿ ದಾಖಲೆಗಳ ಮೇಲೆ ಸಹಿ ಪಡೆದಿದ್ದಾರೆ ಎಂದು ಸುಬ್ಬಮ್ಮ ಆರೋಪಿಸಿದ್ದಾರೆ. ಈ ಸಂಬಂಧ ಸಿವಿಲ್ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಹೀಗಿದ್ದರೂ ಸುಧಾಕರ್ ಮತ್ತಿತರರು ಬಂದು ಮನೆಗಳನ್ನು ಖಾಲಿ ಮಾಡಿದ್ದರು. ಇದನ್ನು ಪ್ರಶ್ನಿಸಿದಾಗ 35ಕ್ಕೂ ಹೆಚ್ಚು ಮಂದಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಚಿವ ಸುಧಾಕರ್ ಅವರು ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ಎಲ್ಲ ಜಾತಿಗಳ ಬಗ್ಗೆ ಗೌರವವಿದೆ ಮತ್ತು ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

    ಇದು ರಾಜಕೀಯ ಪ್ರೇರಿತವಾದ ಸುಳ್ಳು ಆರೋಪ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಸಚಿವ ಸುಧಾಕರ್ ಅವರು ಜಾಗ ಖರೀದಿಸಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಆ ಜಾಗಕ್ಕೆ ಯಾರೋ ಬೇಲಿ ಹಾಕಿದ್ದಾರೆ. ಇದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಾಗಿದೆ. ಇದೊಂದು ಸುಳ್ಳು ಕೇಸು ಎಂದು ತಮ್ಮ ಸಹೋದ್ಯೋಗಿಯ ಪರ ಬ್ಯಾಟಿಂಗ್ ನಡೆಸಿದ್ದಾರೆ.

  • Karnataka CM Siddaramaiah: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

    Karnataka CM Siddaramaiah: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಎಸ್ಪಿ, ಡಿಸಿಪಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು:

    ಸಮಾಜದಲ್ಲಿ ಅನೇಕ ಅಪರಾಧÀಗಳು ನಡೆಯುತ್ತಿವೆ. ಈ ಅಪರಾದಗಳನ್ನು ಕಡಿಮೆ ಮಾಡಿ ಸಮಾಜದಲ್ಲಿ ಕಟ್ಟಕಡೆಯ ಮನುಷ್ಯನೂ ಸಹ ಶಾಂತಿ, ನೆಮ್ಮದಿಯಿಂದ ಬದುಕುವುದಕ್ಕೆ ಅನುಕೂಲ ಮಾಡಿಕೊಡುವಂತೆ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

    ಇಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದರೆ, ಅಭಿವೃದ್ದಿಯು ತಾನಾಗಿಯೇ ನಡೆಯುತ್ತದೆ ಎಂದು ತಿಳಿಸಿದರು.

    ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನಾವು ಏನು ಬಯಸುತ್ತಿದ್ದೇವೆ ಎಂದು ಅಧಿಕಾರಿಗಳಿಗೆ ಈ ಮೊದಲೇ ತಿಳಿಸಲಾಗಿದೆ. ಇಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಂದ ಹಿಡಿದು ಎಲ್ಲಾ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೂ ಸಹ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ. ಯಾರೇ ಕರ್ತವ್ಯ ಲೋಪ ಎಸಗಿದರೂ ಸಹ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದು ಹೇಳಿದರು.

    ರಾಜ್ಯದ ಜನ ಬದಲಾವಣೆಯನ್ನು ಬಯಸಿ ಅಧಿಕಾರವನ್ನು ನೀಡಿದ್ದಾರೆ ಅವರ ನಿರೀಕ್ಷೆಗೆ ತಕ್ಕಂತೆ ನಾವು ಕರ್ತವ್ಯ ನಿರ್ವಹಿಸಬೇಕು. ಯಾರೇ ದೂರು ತಂದರೂ ಸಹ ಮೊದಲು ಸೌಜನ್ಯದಿಂದ ಮಾತನಾಡಿ ದೂರು (ಎಫ್.ಐ.ಆರ್) ದಾಖಲು ಮಾಡಿಕೊಳ್ಳುವುದರೊಂದಿಗೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿ, ಅಪಾರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

    ಪೊಲೀಸಿನವರು ದರ್ಪ ಬಿಟ್ಟು, ಸೌಜನ್ಯ, ಸಹನೆಯಿಂದ ಜನರೊಂದಿಗೆ ನಡೆದುಕೊಳ್ಳಬೇಕು. ಜನರ ವಿಶ್ವಾಸಗಳಿಸಬೇಕು. ಜನರಲ್ಲಿ ಪೊಲೀಸ್ ಎಂದರೆ ಭಯ ಬರುವದು ಸಹಜ ಆ ಭಯ ಅವರಲ್ಲಿ ಹೋಗಿ ಪೊಲೀಸ್‍ನವರು ನಮ್ಮ ಹಾಗೇ ಜನರೇ ಎಂಬ ಭಾವನೆ ಮೂಡುವಂತೆ ಕೆಲಸ ನಿರ್ವಹಿಸಬೇಕು. ಅನೇಕ ನಗರಗಳಲ್ಲಿ ರೌಡಿಗಳು, ದರೋಡೆಕೋರರು, ಕಳ್ಳರು, ಸುಳ್ಳು ಸುದ್ದಿಗಳನ್ನು ಹಬ್ಬಿಸುವವರಿದ್ದಾರೆ, ಜೂಜು ಕೇಂದ್ರಗಳನ್ನು ನಡೆಸುವವರಿದ್ದಾರೆ ಇವೆಲ್ಲಕ್ಕೂ ಕಟ್ಟುನಿಟ್ಟಿನ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು.

    ಪೊಲೀಸ್‍ನವರ ಗಮನಕ್ಕೆ ಬರದೇ ಯಾವುದೇ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಈ ಅಪರಾಧಗಳನ್ನು ಹತ್ತಿಕ್ಕಲು ಪೊಲೀಸರು ಪ್ರಯತ್ನಿಸಬೇಕು. ಅಪರಾಧಗಳಾದಲ್ಲಿ ಇಲಾಖೆಯಲ್ಲಿ ಕೆಳಹಂತದವರಿಗೆ ಶಿಕ್ಷೆ ಕೊಡುತ್ತೇವೆ, ಮೇಲಿನ ಹಂತದ ಅಧಿಕಾರಿಗಳನ್ನು ಬಿಟ್ಟುಬಿಡುತ್ತೇವೆ. ಈ ರೀತಿ ಆಗಬಾರದು. ಪ್ರತಿ ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಗಸ್ತು ನಡೆಸಬೇಕು. ಉಪ ಪೊಲೀಸ್ ಆಯುಕ್ತರು ಹಾಗೂ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರ ವ್ಯಾಪ್ತಿಯಲ್ಲಿ ಅಪರಾಧಗಳು ಕಡಿಮೆಯಾಗದೇ ಹೋದಲ್ಲಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಹಕಾರವನ್ನು ನೀಡಲಾಗುವುದು. ಕರ್ತವ್ಯ ಲೋಪವಾದಲ್ಲಿ ಯಾವುದೇ ಕಾರಣಕ್ಕೂ ಕ್ಷಮೆ ಇರುವುದಿಲ್ಲ ಎಂದು ತಿಳಿಸಿದರು.

    ಮಾಧಕ ವಸ್ತು ತಡೆಗೆ ಅಗತ್ಯ ಕ್ರಮ ವಹಿಸಬೇಕು. ಇದಕ್ಕಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಸರ್ಕಾರ ಎಲ್ಲಾ ಸಹಕಾರವನ್ನು ಸಹ ನೀಡುವುದು. ಯಾರೇ ಆಗಲಿ ಕಾನೂನನ್ನು ಕೈಗೆತ್ತಕೊಳ್ಳಲು ಬಿಡಬಾರದು. ಸುಳ್ಳುಸುದ್ದಿ ಹಬ್ಬಿಸುವವರ ಹಾಗೂ ದ್ವೇóಷದ ಭಾಷಣ ಮಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಬೇಕು. ಇಂತಹ ವ್ಯಕ್ತಿಗಳು ಯಾರೇ ಇರಲಿ ಅವರ ವಿರುದ್ದ ಸುಮಟೋ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
    ಜನರ ಮನಸ್ಸನ್ನು ಪೊಲೀಸ್ ಗಳಿಸಬೇಕು ಅದಕ್ಕೆ ಸಂಪೂರ್ಣ ಸಹಕಾರ ನಮ್ಮ ಸರ್ಕಾರ ನೀಡುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕೆಲಸ ನಿರ್ವಹಿಸುವುದರೊಂದಿಗೆ ಕೆಳ ಹಂತದ ಅಧಿಕಾರಿ ಸಿಬ್ಬಂದಿಗಳಿಗೂ ತಿಳಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

    ಅದೇ ರೀತಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಸಶಕ್ತಗೊಳಿಸಲು ಬೆಂಗಳೂರಿನಲ್ಲಿ ವಿವಿಧ ಹಂತದ 2454 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಹೊಸದಾಗಿ 5 ಸಂಚಾರ ಪೊಲೀಸ್ ಠಾಣೆ ಮತ್ತು 6 ಮಹಿಳಾ ಪೊಲೀಸ್ ಠಾಣೆಗಳನ್ನು ಈ ವರ್ಷ ತೆರೆಯಲು ಕ್ರಮ ವಹಿಸಲಾಗಿದೆ. 2016-17ರ ಆಯವ್ಯಯದಲ್ಲಿ ಸಿ.ಎ.ಆರ್ ಪಶ್ಚಿಮ ಮತ್ತು ಪೂರ್ವ ಘಟಕ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿತ್ತು. ಪಶ್ವಿಮ ಘಟಕ ಸ್ಥಾಪನೆ ಆಗಿದೆ. ಆದರೆ ಇದುವರೆಗೂ ಪೂರ್ವ ಘಟಕ ಸ್ಥಾಪನೆ ಆಗಿಲ್ಲ. ಈ ವರ್ಷ ಪೂರ್ವ ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಪೊಲೀಸ್ ಆಯುಕ್ತರ ಕಚೇರಿಗೆ ಸುಮಾರು 148 ವರ್ಷಗಳಾಗಿದೆ. ಇದು ಬ್ರಿಟೀಷರ ಕಾಲದಲ್ಲಿ ಕಟ್ಟಲಾದ ಕಟ್ಟಡವಾಗಿದ್ದು, ಶಿತಿಲಾವಸ್ಥೆಯಲ್ಲಿರುವ ಕಾರಣ ಇದನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಳ್ಳುವ ಸಲುವಾಗಿ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಗುವುದು. ಪೊಲೀಸ್ ಇಲಾಖೆಗೆ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿ ಮಾಡಲು ಮಂಜೂರಾತಿ ನೀಡಲಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಸಿ.ಸಿ.ಬಿ ಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ 230 ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಒದಗಿಸಲು ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪತ್ರಿಕಾ ಗೋಷ್ಠಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ, ಗೃಹ ಸಚಿವಾರಾದ ಡಾ. ಜಿ. ಪರಮೇಶ್ವರ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಹಾಗೂ ಬೆಂಗಳೂರು ಪೋಲಿಸ್ ಆಯುಕ್ತರಾದ ಬಿ. ದಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.