ಧಾರವಾಡ:
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಗಣೇಶೋತ್ಸವ ಆಚರಣೆಗೆ ಅನುಮತಿ ಪತ್ರ ಹಸ್ತಾಂತರಿಸಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನ (Idgah Maidan)ದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಮೇಯರ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಅರವಿಂದ ಬೆಲ್ಲದ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಎರಡು ದಿನಗಳಿಂದ ಹೋರಾಟ ನಡೆಸಿದ್ದರು. ಇದೀಗ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಫಿಕ್ಸ್ ಆಗಿದ್ದು, ಪಾಲಿಕೆ ಆಯುಕ್ತರಿಂದಲೇ ಅಧಿಕೃತ ಘೋಷಣೆಯಾಗಿದ್ದು, ಈ ಕುರಿತ ಅನುಮತಿ ಪತ್ರವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ್ ಬಡಾಸ್ಕರ್ ಅವರಿಗೆ ಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ‘ಹೈಕೋರ್ಟ್ ನಿರ್ದೇಶನದ ಮೇರೆಗೆ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ನಮ್ಮ ನಿರ್ಣಯದಂತೆ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡಿದ್ದೇವೆ ಎಂದು ಹೇಳಿದರು.
#WATCH | Karnataka: Hubballi-Dharwad Municipal Corporation Commissioner Ishwar Ullagaddi says, "As per the directions of the HC, we have given the permission to celebrate the Ganesha festival in Idgah Maidan for three days as per our resolution…" pic.twitter.com/Gtl3f644AF
— ANI (@ANI) September 15, 2023
ಅವಕಾಶ ನೀಡಿದ ಬೆನ್ನಲ್ಲೇ ಈ ಕುರಿತು ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ‘ಕಾಂಗ್ರೆಸ್ ಹಿಂಬಾಗಿಲಿನಿಂದ ಅಂಜುಮನ್ ಸಂಸ್ಥೆ ಮೂಲಕ ಕೋರ್ಟ್ ರೀಟ್ ಅರ್ಜಿ ಸಲ್ಲಿಸಿದೆ. ಕೊನೆ ಕ್ಷಣದಲ್ಲಿಯಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಮುಂದೆ ಕೂಡ ಹಿಂದೂ ಹಬ್ಬಗಳ ಆಚರಣೆಗೆ ಅಡೆತಡೆಗಳ ಒಡ್ಡಬಾರದು. ನ್ಯಾಯಾಲಯ ಅತ್ಯುತ್ತಮ ತೀರ್ಪು ಕೊಟ್ಟಿದೆ, ನಮಗೆ ದೊಡ್ಡ ಜಯ ಸಿಕ್ಕಿದೆ. ಈದ್ಗಾ ಮೈದಾನದಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತೇವೆ. ಮೂರು ದಿನ ಅನುಮತಿ ಕೊಟ್ಟಿದೆ. ನಾವು ಮೂರು ದಿನ ಅತ್ಯಂತ ಸಡಗರದಿಂದ ಹಬ್ಬ ಆಚರಣೆ ಮಾಡ್ತೀವಿ ಎಂದು ಹೇಳಿದರು.
ಇನ್ನು ಕಳೆದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಕಳೆದ ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈದ್ಗಾ ಮೈದಾನ ಪಾಲಿಕೆಯ ಆಸ್ತಿ. ಇನ್ನೊಂದೆಡೆ ಅಂಜುಮನ್ ಸಂಸ್ಥೆ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದರು. ಇದಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಾಥ್ ನೀಡಿದ್ರು. ಪಾಲಿಕೆ ಆಯುಕ್ತರ ಕಚೇರಿ ಎದುರು ಲೋಹದ ಗಣೇಶ ಮೂರ್ತಿ ಇಟ್ಟು ಧರಣಿ ನಡೆಸಿದ್ದು, ಇದೀಗ ಫಲ ಸಿಕ್ಕಂತಾಗಿದೆ.