Image: Supplied
ಶ್ರೀರಂಗಪಟ್ಟಣ (ಮಂಡ್ಯ): ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ನಿವಾರಣೆಯಾಗಲಿ, ಕರ್ನಾಟಕ ಸಮೃದ್ಧವಾಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಮಾತೆಗೆ ಪ್ರಾರ್ಥಿಸಿ, ಶುಕ್ರವಾರ ಕೆಆರ್ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಆರ್ಎಸ್ನ ಕಾವೇರಿ ಮಾತೆ ಪ್ರತಿಮೆಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಶಿವಕುಮಾರ್, ಬಳಿಕ ರಾಜ್ಯದ ವಿವಿಧ ಭಾಗಗಳಿಂದ ಬಂದ ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಸ್ಥಳೀಯ 13 ವೈದಿಕರ ತಂಡವು ದಕ್ಷಿಣ ಭಾರತೀಯ ಶೈಲಿಯಲ್ಲಿ ಕಾವೇರಿ ಮಾತೆಗೆ ಪೂಜೆ ನೆರವೇರಿಸಿತು.
‘ವಾತಾಪಿ ಗಣಪತಿಂ ಭಜೆ’ ಮಂಗಳವಾದ್ಯದೊಂದಿಗೆ ಆರಂಭವಾದ ಪೂಜೆಯಲ್ಲಿ ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಹಾಗೂ ಸಂಕಲ್ಪ ನೆರವೇರಿಸಲಾಯಿತು.
ನಂತರ ಕಾವೇರಿ ಸ್ತೋತ್ರದೊಂದಿಗೆ ತೀರ್ಥ ಪೂಜೆ ನಡೆಸಿ ಬಾಗಿನ ಅರ್ಪಿಸಲಾಯಿತು.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆಯ ಬಳಿಕ ಮೂರು ದಿಕ್ಕುಗಳಿಗೂ ಶಂಖನಾದ ಮಾಡಲಾಯಿತು. ಧೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣವೂ ನಡೆಯಿತು.
ಇದಾದ ಬಳಿಕ ಕುಂಭಾರತಿ, ನಾಗಾರತಿ ಮತ್ತು ಕಾವೇರಿ ಆರತಿ ನೆರವೇರಿಸಲಾಯಿತು.
ಶಂಖನಾದ, ಮಂತ್ರಘೋಷ ಮತ್ತು ವಿವಿಧ ಬಗೆಯ ಆರತಿಗಳ ನಡುವೆ ನಡೆದ ಪೂಜಾ ಕೈಂಕರ್ಯ ನೆರೆದಿದ್ದ ಜನರಲ್ಲಿ ಭಕ್ತಿಭಾವ ಮೂಡಿಸಿತು.
ಇದರ ನಂತರ ವಾರಣಾಸಿಯ ಪುರೋಹಿತ ಓಂ ಮಿಶ್ರಾ ನೇತೃತ್ವದ 15 ಸದಸ್ಯರ ತಂಡವು ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು.
ಭಕ್ತಿಗೀತೆಗಳ ಮಧ್ಯೆ ಧೂಪ ಆರತಿ, ಪಂಚಪ್ರದೀಪ ಆರತಿ, ಸರ್ಪ ಆರತಿ, ಮಯೂರ ಪಿಂಛ ಸೇವೆ ಮತ್ತು ವಿಂಜಾಮರ ಸೇವೆ ನೆರವೇರಿಸಿ ಬಳಿಕ ಶಂಖನಾದ ಮೊಳಗಿಸಲಾಯಿತು.
ದಕ್ಷಿಣ ಭಾರತೀಯ ವೈದಿಕ ಸಂಪ್ರದಾಯ ಮತ್ತು ಗಂಗಾರತಿ ಮಾದರಿಯ ಆಚರಣೆಗಳು ಒಂದೇ ವೇದಿಕೆಯಲ್ಲಿ ನಡೆದ ಕಾರಣ ಕಾವೇರಿ ಆರತಿ ಕಾರ್ಯಕ್ರಮವು ಕೆಆರ್ಎಸ್ ಬೃಂದಾವನ ಉದ್ಯಾನದಲ್ಲಿ ವಿಶಿಷ್ಟ ಧಾರ್ಮಿಕ ವಾತಾವರಣ ಸೃಷ್ಟಿಸಿತು.
