ಬೆಂಗಳೂರು:
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ಸಮರ್ಥನೀಯವಲ್ಲ. ಹೀಗಾಗಿ, ಕರ್ನಾಟಕವು ಸುಪ್ರೀಂ ಕೋರ್ಟಿನಲ್ಲಿ ಪ್ರಬಲ ವಾದ ಮಂಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದ ಅವರು, ‘ಕರ್ನಾಟಕ ಈ ವಿಷಯದಲ್ಲಿ ದಕ್ಷತೆಯಿಂದ ವಾದಿಸಲಿದೆ. ಏಕೆಂದರೆ, ತಮಿಳುನಾಡು ನೀರು ಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಆದರೆ, ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ 2018ರ ಫೆಬ್ರುವರಿ 5ರಂದು ತೀರ್ಪು ನೀಡಿರುವುದರಿಂದ ತಮಿಳುನಾಡು ಸರ್ಕಾರ ಹೊಸದಾಗಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ’ ಎಂದರು.
ಕಾವೇರಿ ನದಿ ನೀರು ವಿಚಾರವು ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದಾಸ್ಪದ ವಿಷಯವಾಗಿ ಮಾರ್ಪಟ್ಟಿದೆ ಮತ್ತು ಈ ಪ್ರದೇಶದ ಲಕ್ಷಾಂತರ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ಹೋರಾಟದಲ್ಲಿ ಮುಳುಗಿವೆ.
#WATCH | “Karnataka will argue the matter because Tamil Nadu filed a petition asking the release of water but the petition by Tamil Nadu is not maintainable as SC has already given a verdict on the Cauvery dispute between Tamil Nadu and Karnataka on 5th February 2018…”:… pic.twitter.com/r4S41zfzV2
— ANI (@ANI) August 24, 2023
‘ಮಳೆ ಉತ್ತಮವಾಗಿ ಆದ ಸಾಮಾನ್ಯ ವರ್ಷಗಳಲ್ಲಿ ನಾವು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು. ಆದರೆ, ಸಂಕಷ್ಟದ ಸಂದರ್ಭಗಳಲ್ಲಿ, ‘ಸಂಕಷ್ಟ’ ಎಂದರೆ ಏನು ಎಂದು ಇನ್ನೂ ವ್ಯಾಖ್ಯಾನಿಸಲಾಗಿಲ್ಲ’ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನ ವಿಧಾನಸೌಧದಲ್ಲಿ ಕಾವೇರಿ ನದಿ ನೀರು ವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಬುಧವಾರ ನಡೆಯಿತು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಜಲ ವಿವಾದ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗಕ್ಕೆ ಸರ್ವರ ಸಹಕಾರ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಲಿ ಇರುವ ಬೆಳೆಗಳ ರಕ್ಷಣೆಗಾಗಿ ಪ್ರತಿನಿತ್ಯ 24 ಸಾವಿರ ಕ್ಯುಸೆಕ್ ಕಾವೇರಿ ನದಿ ನೀರನ್ನು ಹರಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ತನ್ನ ಹೊಸ ಅರ್ಜಿಯಲ್ಲಿ, ಅಂತರರಾಜ್ಯ ನದಿ ನೀರು ಹರಿವು ಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಲ್ಲಿ ದಾಖಲಾಗಿರುವಂತೆ, ಆಗಸ್ಟ್ ಅಂತ್ಯದವರೆಗೂ ನಿತ್ಯ 24 ಸಾವಿರ ಕ್ಯುಸೆಕ್ ನೀರನ್ನು ಹರಿಸಬೇಕು. ಕಾವೇರಿ ಜಲ ವಿವಾದ ನ್ಯಾಯಮಂಡಳಿ ಐತೀರ್ಪಿನ ಅನುಸಾರ, ಸೆಪ್ಟೆಂಬರ್ 2023ರ ಕೋಟಾಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ನೀರು (36.76 ಟಿಎಂಸಿ ಅಡಿ) ಹರಿಸುವುದನ್ನು ಖಾತರಿಪಡಿಸಿಕೊಳ್ಳುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದೆ.