Cauvery Water to Tamil Nadu: We do not have water to give it to Tamil Nadu: DCM DK Sivakumar clarifies
ಬೆಂಗಳೂರು:
“ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದೆ. ಆದರೆ ನಮ್ಮ ಬಳಿ ನೀರಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು “ಬುಧವಾರ ಅಥವಾ ಗುರುವಾರ ಕಾವೇರಿ ನೀರಾವರಿ ಪ್ರಾಧಿಕಾರದ ಸಭೆ ನಡೆಯಬಹುದು ಅಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ನಾನು ಮತ್ತು ಮುಖ್ಯಮಂತ್ರಿಗಳು ಚರ್ಚೆ ನಡೆಸಿ ನೀರು ಬಿಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದೇವೆ” ಎಂದರು.
“ತಮಿಳುನಾಡಿನವರು 12 ಸಾವಿರ ಕ್ಯೂಸೆಕ್ಸ್ ಬೇಡಿಕೆ ಇಟ್ಟಿದ್ದರು. ಅದನ್ನು 5 ಸಾವಿರ ಕ್ಯೂಸೆಕ್ಸ್ಗೆ ಇಳಿಸಿದ್ದಾರೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನಂತರ ರೈತರಿಗೆ ಹರಿಸುವ ಬಗ್ಗೆ ಯೋಚನೆ ಮಾಡುತ್ತೇವೆ. ಬೆಂಗಳೂರಿಗೆ ಮಳೆ ಬಿದ್ದಾಗ ಆಶಾಭಾವನೆ ಮೂಡಿತ್ತು, ಈಗ ಮಳೆ ಬರದೆ ಸಂಕಷ್ಟ ಬಂದಿದೆ” ಎಂದು ತಿಳಿಸಿದರು.
“ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದ್ದೆವು, ಅವರು ನಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಎರಡೂ ರಾಜ್ಯಗಳಿಗೆ ತಿಳಿಸಿದ್ದಾರೆ. ವಾಸ್ತವಾಂಶವನ್ನು ಎಲ್ಲರಿಗೂ ತಿಳಿಸಿದ್ದೇವೆ. ದೆಹಲಿಯಲ್ಲಿ ಇರುವ ನಮ್ಮ ಕಾನೂನು ತಜ್ಞರ ಬಳಿ ಮಾತನಾಡುತ್ತೇನೆ. ನಾವು ಕದ್ದು ಮುಚ್ಚಿ ಏನನ್ನೂ ಮಾಡುತ್ತಿಲ್ಲ. ರಾಜ್ಯಕ್ಕೆ ಭೇಟಿ ನೀಡಿ ನಮ್ಮ ಪರಿಸ್ಥಿತಿ ನೋಡಿ” ಎಂದು ಹೇಳಿದ್ದೇವೆ ಎಂದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ “ನ್ಯಾಯಾಧೀಶರ ವಿರುದ್ದ ಹಾಗೂ ಸಮಿತಿಯಲ್ಲಿ ಹಿರಿಯ ಅಧಿಕಾರಿಗಳ ಆರೋಪ ಮಾಡುವುದು ತಪ್ಪು. ವಿರೋಧ ಪಕ್ಷದವರ ಬಗ್ಗೆ ಹೆಚ್ಚು ಹೇಳುವುದಿಲ್ಲ, ಸಹಕಾರ ಕೊಡಿ ಎಂದು ಕೇಳುತ್ತೇನೆ. ಜನ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವ ನಂಬಿಕೆ ಇದೆ” ಎಂದು ಹೇಳಿದರು.
