Home ಬೆಂಗಳೂರು ನಗರ Cauvery Water to Tamil Nadu | ರಾಜ್ಯದ ಜನರ ಹಿತ ಕಾಯಲು ಸುಪ್ರೀಂ ಕೋರ್ಟಿಗೆ...

Cauvery Water to Tamil Nadu | ರಾಜ್ಯದ ಜನರ ಹಿತ ಕಾಯಲು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

40
0
Cauvery Water to Tamil Nadu | We will go to Supreme Court to protect interests of people of Karnataka: DCM DK Shivakumar
Cauvery Water to Tamil Nadu | We will go to Supreme Court to protect interests of people of Karnataka: DCM DK Shivakumar

ಬೆಂಗಳೂರು:

“ನಾವು ನಮ್ಮ ಜನರನ್ನು ಕಾಪಾಡಲೇ ಬೇಕು. ಹೀಗಾಗಿ ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು “ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು (ಸೋಮವಾರ) ನಡೆಯಲಿದ್ದು, ಅಲ್ಲಿ ನಮ್ಮ ವಾದ ಮಂಡಿಸುತ್ತೇವೆ. ಮಳೆಯಿಲ್ಲದೆ ತುಂಬಾ ಸಂಕಷ್ಟದಲ್ಲಿ ಇದ್ದೇವೆ ಎಂದು ಮನವರಿಕೆ ಮಾಡುತ್ತೇವೆ. ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲೂ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.

“ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಈಗಾಗಲೇ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇವೆ. ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಬರೆದ ಪತ್ರವನ್ನು ತಲುಪಿಸಿದ್ದೇವೆ. ನೀವು ಶೀಘ್ರ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಮನವಿ ಮಾಡಿದ್ದೇನೆ.”

ಸಂಸತ್ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಸಂಸದರನ್ನು ಭೇಟಿ ಮಾಡುವ ಆಲೋಚನೆ ಇದೆ. ಸರ್ವಪಕ್ಷ ಸಭೆಗೆ ಪ್ರಧಾನಿಗಳು ಸಮಯ ಕೊಟ್ಟಿಲ್ಲ. ತಮಿಳುನಾಡಿನವರು ಅವರದ್ದೇ ಆದ ವಾದಗಳನ್ನು ಮಂಡಿಸುತ್ತಿದ್ದಾರೆ‌.”

ಮುಖ್ಯಮಂತ್ರಿಗಳು ಉತ್ತರಿಸುತ್ತಾರೆ

ಕೆ.ಎನ್.ರಾಜಣ್ಣ ಅವರು ಮೂರು ಡಿಸಿಎಂಗಳು ಅವಶ್ಯಕತೆ ಇದೆ ಎನ್ನುವ ಮಾತಿಗೆ “ನನ್ನನ್ನು ಈ ಹುದ್ದೆಗೆ ನೇಮಕ‌ ಮಾಡಿದ್ದು ಮುಖ್ಯಮಂತ್ರಿಗಳು. ಅವರೇ ಇದಕ್ಕೆ ಉತ್ತರ ನೀಡುತ್ತಾರೆ, ರಾಜಣ್ಣ ಅವರು ಏಕೆ ಈ ರೀತಿ ಹೇಳಿಕೆ ಕೊಟ್ಟರೊ ಗೊತ್ತಿಲ್ಲ. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು ಅವರನ್ನೇ ಕೇಳಬೇಕು.

ಕೆ.ಎನ್.ರಾಜಣ್ಣ ಅವರ ಬಳಿ ಮುಖ್ಯಮಂತ್ರಿಗಳು, ಹೈಕಮಾಂಡ್ ಉತ್ತರ ಕೇಳುತ್ತದೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಪತ್ರ ಬರೆದಿದೆ. ನಾನು ಯಾರಿಗೆ ಉತ್ತರ ಕೊಡಬೇಕೋ ಅವರಿಗೆ ಮಾತ್ರ ಕೊಡುತ್ತೇನೆ. ನಾನು ಯಾರಿಗೆ ಉತ್ತರ ಕೇಳಬೇಕೋ ಅವರ ಬಳಿ ಕೇಳುತ್ತೇನೆ, ಯಾವುದೇ ಮುಲಾಜಿಲ್ಲ ನನಗೆ” ಎಂದು ಉತ್ತರಿಸಿದರು.

ಹೈಕಮಾಂಡ್ ಒಂದೇ ಡಿಸಿಎಂ ಎಂದು ಹೇಳಿದ ನಂತರವೂ ಈ ಬೆಳವಣಿಗೆ ಏಕೆ ಎನ್ನುವ ಪ್ರಶ್ನೆಗೆ “ನಾನು ಎರಡು ದಿನಗಳಿಂದ ಹೈದರಾಬಾದ್‌ನಲ್ಲಿ ಎಐಸಿಸಿ ಸಭೆಯಲ್ಲಿ ಇದ್ದೆ, ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು, ಈಗ ತಿಳಿದುಕೊಂಡು ಹೇಳುವೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣವಿಲ್ಲ

ಬಿ.ಕೆ.ಹರಿಪ್ರಸಾದ್ ಅವರ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಣ ಮೌನ ತಾಳಿದ ಕಾರಣ ಡಿಸಿಎಂ ವಿವಾದ ಎದ್ದಿದೆ ಎನ್ನುವ ಪ್ರಶ್ನೆಗೆ “ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ, ನಿಮ್ಮ ಬಳಿ ಇರಬೇಕು”. ನಿಮಗೆ ತಲೆ ಕೆಟ್ಟಿರಬೇಕು, ನೀವೆ ಬಣ ಸೃಷ್ಟಿ ಮಾಡುತ್ತಿದ್ದೀರಿ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಯಾವುದೇ ಬಣಕ್ಕೆ ನಾನು ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಎಸ್.ಎಂ.ಕೃಷ್ಣ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಬಣ ಮಾಡಬಹುದಿತ್ತು, ನನ್ನದು ಕಾಂಗ್ರೆಸ್ ಬಣ. ಬಣದ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ” ಎಂದು ಸಿಡಿಮಿಡಿಗೊಂಡರು.

ಕರ್ನಾಟಕ ಮಾಡೆಲ್ ದೇಶಕ್ಕೆ ಮಾದರಿ

ಕರ್ನಾಟಕದಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಯಶಸ್ವಿಯಾಗಿದ್ದೇವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ದೇಶಕ್ಕೆ ಮಾದರಿಯಾಗಿದೆ‌, ತೆಲಂಗಾಣ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮಾದರಿಯಾಗಲಿವೆ.

ಇದೇ ವೇಳೆ ರಾಜ್ಯದ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ ಉಪಮುಖ್ಯಮಂತ್ರಿಗಳು “ರಾಜ್ಯಕ್ಕೆ ಒದಗಿ ಬಂದಿರುವ ಎಲ್ಲಾ ವಿಘ್ನ, ಸಂಕಷ್ಟಗಳು ನಿವಾರಣೆಯಾಗಲಿ” ಎಂದು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here