ಬೆಂಗಳೂರು ಎರಡನೇ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಕ್ಕೆ ಇನ್ನೂ ಪ್ರಸ್ತಾವನೆ ಬಂದಿಲ್ಲ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
ನವದೆಹಲಿ/ಬೆಂಗಳೂರು: ಬೆಂಗಳೂರಿನ ಸಮೀಪ ಎರಡನೇ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಅಥವಾ ಯಾವುದೇ ವಿಮಾನ ನಿಲ್ದಾಣ ಅಭಿವೃದ್ಧಿ ಸಂಸ್ಥೆಯಿಂದ ಗ್ರೀನ್ಫೀಲ್ಡ್ ಏರ್ಪೋರ್ಟ್ಸ್ ನೀತಿಯಡಿ ಯಾವುದೇ ಪ್ರಸ್ತಾವನೆ ಇದುವರೆಗೆ ಕೇಂದ್ರ ಸರ್ಕಾರಕ್ಕೆ ಬಂದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ಸಂಸದ ಪಿ.ಸಿ. ಮೋಹನ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಿದ್ದು, ಅದರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಅದರ ಬಳಿಕ ಕರ್ನಾಟಕ ಸರ್ಕಾರದಿಂದಾಗಲಿ ಅಥವಾ ಯಾವುದೇ ವಿಮಾನ ನಿಲ್ದಾಣ ಅಭಿವೃದ್ಧಿ ಸಂಸ್ಥೆಯಿಂದಾಗಲಿ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಸ್ತುತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯ 51.5 ಮಿಲಿಯನ್ ಆಗಿದ್ದು, ಸರಾಸರಿ ದಿನಕ್ಕೆ 1.41 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿದೆ. 2026-27ನೇ ಹಣಕಾಸು ವರ್ಷದ ಜೂನ್ ಅಂತ್ಯದವರೆಗೆ ಸರಾಸರಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆ ಸುಮಾರು 1.238 ಲಕ್ಷವಾಗಿದೆ.
2030ರ ವೇಳೆಗೆ ವಿಮಾನ ನಿಲ್ದಾಣದ ಒಟ್ಟು ಟರ್ಮಿನಲ್ ಸಾಮರ್ಥ್ಯವನ್ನು 80 ಮಿಲಿಯನ್ ಪ್ರಯಾಣಿಕರು ಪ್ರತಿ ವರ್ಷ (ಎಂಪಿಪಿಎ)ಗೆ ಹೆಚ್ಚಿಸುವ ನಿರೀಕ್ಷೆಯಿದ್ದು, ಇದರಲ್ಲಿ ಟರ್ಮಿನಲ್-2ರ ಎರಡನೇ ಹಂತದ ಕಾಮಗಾರಿಯಿಂದ ಸಾಮರ್ಥ್ಯವು ಈಗಿನ 25 ಎಂಪಿಪಿಎಯಿಂದ 45 ಎಂಪಿಪಿಎಗೆ ಏರಿಕೆಯಾಗಲಿದೆ.
ವಿಮಾನ ನಿಲ್ದಾಣಗಳ ರಿಯಾಯಿತಿ ಒಪ್ಪಂದಗಳಲ್ಲಿ ನಿಗದಿತ ಮಿತಿಯನ್ನು ಮೀರಿದ ಬಳಿಕ ಸಾಮರ್ಥ್ಯ ವಿಸ್ತರಣೆ ಆರಂಭಿಸುವ ಷರತ್ತುಗಳಿದ್ದು, ಭವಿಷ್ಯದ ವಿಸ್ತರಣೆಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್ ಹಾಗೂ ಅಭಿವೃದ್ಧಿ ಯೋಜನೆಗಳನ್ನು ವಿಮಾನ ನಿಲ್ದಾಣ ನಿರ್ವಾಹಕರು ಸಿದ್ಧಪಡಿಸುತ್ತಾರೆ ಎಂದು ಸಚಿವಾಲಯ ತಿಳಿಸಿದೆ.
