ಬೆಂಗಳೂರು:
ಉಕ್ರೇನ್ ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ವಿದೇಶಾಂಗ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಇಂದು ಬೆಳಿಗ್ಗೆ ಕೇಂದ್ರ ವಿದೇಶಾಂಗ ಸಚಿವರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಭಾರತೀಯರ ವಾಪಸಾತಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಭೂ ಸಾರಿಗೆ ಮೂಲಕ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಬಹುದಾಗಿದೆ ಎಂಬ ಮಾಹಿತಿಯಿದ್ದು, ಭಾರತೀಯ ರಾಯಭಾರಿ ಕಚೇರಿಯೂ ಎಲ್ಲ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ ಎಂದರು.
ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಊಟೋಪಚಾರದ ವ್ಯವಸ್ಥೆಗೂ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ. ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಲ್ಲ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಲು ವಿದೇಶಾಂಗ ಸಚಿವರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.