Home ಬೆಂಗಳೂರು ನಗರ ವೆಚ್ಚ ಕಡಿತ, ಕಡತ ವಿಲೇವಾರಿ ಅಭಿಯಾನಕ್ಕೆ ಮುಖ್ಯಮಂತ್ರಿಗಳ ಸೂಚನೆ

ವೆಚ್ಚ ಕಡಿತ, ಕಡತ ವಿಲೇವಾರಿ ಅಭಿಯಾನಕ್ಕೆ ಮುಖ್ಯಮಂತ್ರಿಗಳ ಸೂಚನೆ

21
0
bengaluru

ಬೆಂಗಳೂರು:

ವಿಶ್ವಾಸಾರ್ಹ, ದಕ್ಷ, ಪಾರದರ್ಶಕ ಆಡಳಿತ: ತಂಡಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಲಹೆ

ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ತಂಡಸ್ಫೂರ್ತಿಯಿಂದ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಆಡಳಿತ ಒಂದು ನಿರಂತರ ಪ್ರಕ್ರಿಯೆ. ಅದು ಎಂತಹ ಪರಿಸ್ಥಿತಿಯಲ್ಲೂ ಅನಿರ್ಬಂಧಿತವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದ ಜನತೆಗೆ ದಕ್ಷ, ಪ್ರಾಮಾಣಿಕ ಹಾಗೂ ಜನಪರ ಆಡಳಿತ ಕೊಡುವ ದಿಟ್ಟ ತೀರ್ಮಾನ ಕೈಗೊಂಡಿದ್ದೇನೆ. ಇದನ್ನು ಅನುಷ್ಠಾನ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಅರಿತೇ ಈ ಮಾತನ್ನಾಡುತ್ತಿದ್ದೇನೆ ಎಂದು ತಿಳಿಸಿದರು.

bengaluru

ಪ್ರಗತಿಪರ, ಪರಿಣಾಮಕಾರಿ ಆಡಳಿತ ಕೊಟ್ಟ ಹೆಗ್ಗಳಿಕೆ ನಮ್ಮ ರಾಜ್ಯದ್ದು. ಬದಲಾದ ಪರಿಸ್ಥಿತಿಯಲ್ಲಿ ನಾವು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬೇಕಾಗಿದೆ. ಸಚಿವ ಸಂಪುಟದ ನಿರ್ಣಯಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು. ವಿಳಂಬವಾದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ಆಡಳಿತದಲ್ಲಿ ವಿಳಂಬ ಧೋರಣೆ ಕ್ಯಾನ್ಸರ್ ಇದ್ದಂತೆ. ಆದ್ದರಿಂದ ಸರ್ಕಾರದ ನಿರ್ಣಯಗಳು ನಿಗದಿತ ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳು, ನೀತಿ, ನಿಯಮಾವಳಿಗಳು, ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದು ಕಾರ್ಯನಿರ್ವಹಿಸಬೇಕು. ಒಳ್ಳೆಯ ಕೆಲಸಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾಡಿ. ನನ್ನ ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ನಮ್ಮ ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಇಲಾಖೆಯಲ್ಲಿ ವರ್ಷಾಂತ್ಯದ ವೇಳೆಗೆ ಶೇ. 5 ರಷ್ಟು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ನಿಗದಿತ ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಕುರಿತು ಮತ್ತೊಮ್ಮೆ ವಿವರವಾಗಿ ಚರ್ಚಿಸಿ, ಗೊಂದಲ ನಿವಾರಣೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮುಖ್ಯಮಂತ್ರಿಯವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

Bommai at a presser after swearing as CM

ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ, ಶಾಸಕಾಂಗ ಪಕ್ಷ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೆಲ್ಲರೂ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪೂರ್ಣಪ್ರಮಾಣದ ಸಚಿವ ಸಂಪುಟವನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದ ಅವರು ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಬಾರದು ಎಂಬ ದೃಷ್ಟಿಯಿಂದ ಇಂದು ಸಚಿವ ಸಂಪುಟ ಸಭೆ ಹಾಗೂ ಇಲಾಖಾ ಮುಖ್ಯಸ್ಥರ ಸಭೆ ನಡೆಸಲಾಯಿತು ಎಂದರು.

ಸಭೆಯಲ್ಲಿ ಸರ್ಕಾರದ ದಿಕ್ಸೂಚಿ ಯಾವ ರೀತಿ ಇರಬೇಕೆನ್ನುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ಸಮಾಜದ ಪ್ರತಿಯೊಬ್ಬರ ಪರವಾಗಿ ಅಂದರೆ, ಹಿಂದುಳಿದ ವರ್ಗ, ರೈತರು, ಕೂಲಿಕಾರ್ಮಿಕರೊಂದಿಗೆ ನಮ್ಮ ಸರ್ಕಾರವಿದೆ ಎನ್ನುವುದು ನಮ್ಮ ಆಡಳಿತ ವೈಖರಿಯಿಂದ ಮತ್ತು ಪರಿಣಾಮಗಳಿಂದ ಜನರಿಗೆ ತಿಳಿಯುವಂತಾಗಬೇಕು. ಮೈಕ್ರೋ ಮಟ್ಟದ ನಿರ್ವಹಣೆ, ಇಲಾಖಾ ಮಟ್ಟದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿ, ಅಂತರ ಇಲಾಖಾ ಸಮನ್ವಯ ಸಾಧಿಸಿ, ಒಟ್ಟಾರೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕು, ವಿಳಂಬವಾಗಬಾರದು ಎಂದು ಸ್ಪಷ್ಟಪಡಿಸಿದ್ದೇನೆ. ಕಾಲಮಿತಿಯಲ್ಲಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ನಾನೂ ಸಹ ತಂಡದ ಒಬ್ಬ ಸದಸ್ಯ ಎಂದು ತಿಳಿಸಿದ್ದೇನೆ. ಏನೇ ಮಾಡಿದರೂ ನಡೆಯುತ್ತದೆ ಎಂಬ ಉದಾಸೀನ ಭಾವನೆ ಅಧಿಕಾರಿಗಳಲ್ಲಿ ಇರಬಾರದು ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದೇನೆ. ಅಂತೆಯೇ ಯಾವುದೇ ಸಂದರ್ಭದಲ್ಲಿಯೂ ನನ್ನೊಂದಿಗೆ ಚರ್ಚೆ ಮಾಡಬಹುದು, ಕ್ಷಮತೆ ಗುರುತಿಸಿ ಜವಾಬ್ದಾರಿ ನೀಡಲಾಗವುದೆಂದು ತಿಳಿಸಿದ್ದೇನೆ.

ಕೋವಿಡ್ ತಂದೊಡ್ಡಿರುವ ಸಂಕಷ್ಟದ ಸಂದರ್ಭದಲ್ಲಿ ಹಣಕಾಸಿನ ಶಿಸ್ತು ತರಬೇಕು. ಮಾರ್ಚ್ 31 ರೊಳಗೆ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಕಾರ್ಯಕ್ರಮಗಳಿಗೆ ತೊಂದರೆಯಾದದಂತೆ ಕನಿಷ್ಠ ಶೇ. 5% ಆದರೂ ಕಡಿತವಾಗಬೇಕು ಎಂದು ತಿಳಿಸಿದ್ದೇನೆ. ಕಡತ ವಿಲೇವಾರಿ ವಿಳಂಬವಾಗದಂತೆ ಹೊಸ ವ್ಯವಸ್ಥೆ ತರಲಾಗುವುದು. ಕಡತ ವಿಲೇವಾರಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. 15 ದಿನಗಳೊಳಗೆ ಕಡತಗಳನ್ನು ಇಂದೀಕರಿಸಬೇಕು ಎಂದರು.

ಈ ನೂತನ ದಿಕ್ಸೂಚಿಯಿಂದ ಜನಸಾಮಾನ್ಯರಿಗೆ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು, ಯೋಜನೆಗಳು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ನಮ್ಮ ತಕ್ಷಣದ ಆದ್ಯತೆ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ. ಸರ್ಕಾರದ ಸೌಲಭ್ಯಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಆರ್ಥಿಕ ಸ್ಥಿತಿಗತಿಗೆ ಸುಧಾರಣೆ ತರುವುದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಚಿವ ಸಂಪುಟದ ನಿರ್ಣಯಗಳು:

  1. ರೈತರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಜಾರಿ. ಇದಕ್ಕಾಗಿ 1000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚ.
  2. ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿರುವ 1000 ರೂ.ಗಳ ಮೊತ್ತವನ್ನು 1200 ರೂ.ಗಳಿಗೆ ಹೆಚ್ಚಳ. ಇದಕ್ಕಾಗಿ 863. 52 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವನ್ನು ಭರಿಸಲಾಗುವುದು. ಇದರಿಂದ ಸುಮಾರು 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
  3. ವಿಧವಾ ವೇತನದಡಿ ನೀಡಲಾಗುತ್ತಿದ್ದ 600 ರೂ.ಗಳ ಮೊತ್ತವನ್ನು 800ಕ್ಕೆ ಹೆಚ್ಚಳ. ಇದಕ್ಕಾಗಿ 414 ಕೋಟಿ ಹೆಚ್ಚುವರಿ ವೆಚ್ಚ. 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
  4. ಅಂಗವಿಕಲರ ವೇತನದಡಿ ಶೇಕಡಾ 40-75 ಅಂಗವೈಲಕಲ್ಯತೆ ಇರುವವರಿಗೆ ನೀಡುತ್ತಿರುವ 600 ರೂ.ಗಳನ್ನು 800 ರೂಗಳಿಗೆ ಹೆಚ್ಚಳ. ಇದಕ್ಕಾಗಿ 90 ಕೋಟಿ ವೆಚ್ಚ. 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
  5. ಸಮಾಜಿಕ ಭದ್ರತೆ ಒದಗಿಸಬೇಕೆನ್ನುವ ದೃಷ್ಟಿಯಿಂದ ಆರ್ಥಿಕ ತೊಂದರೆಯಲ್ಲಿರುವವರಿಗೆ ಸಹಾಯವಾಗುವ ದೃಷ್ಟಿಯಿಂದ ಈ ತೀರ್ಮಾನ. ಮುಂಬರುವ ದಿನಗಳಲ್ಲಿ ಜನಕಲ್ಯಾಣ, ಜನಪರವಾದ ಕ್ರಮಗಳನ್ನು ಕೈಗೊಳ್ಳಲಿದ್ದು, ಅದರಲ್ಲೂ ವಿಶೇಷವಾಗಿ ದೀನದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
bengaluru

LEAVE A REPLY

Please enter your comment!
Please enter your name here